Untitled Document
Sign Up | Login    
ಬಿಟಿ ಹತ್ತಿಯಲ್ಲಿ ರಸ ಹೀರುವ ಕೀಟಗಳು ಮತ್ತು ಸಮಗ್ರ ಹತೋಟಿ ಕ್ರಮಗಳು


ಮುಖ್ಯವಾಗಿ ರಸಹೀರುವ ಕೀಟಗಳು ಹತ್ತಿ ಬೆಳೆಯ ಕಾಲಾವಧಿಯುದ್ದಕ್ಕೂ ಬೇರೆ ಬೇರೆ ಹಂತಗಳಲ್ಲಿ ಕಾಣಿಸಿಕೊಂಡು ರಸವನ್ನು ಹೀರಿ ಬೆಳವಣಿಗೆಯ ಮೇಲೆ ನೇರ ಪರಿಣಾಮವನ್ನುಂಟುಮಾಡುತ್ತವೆ. ರಸ ಹೀರುವ ಕೀಟಗಳಾದ ಹೇನು, ಥ್ರಿಪ್ಸ್ ನುಸಿ, ಮೈಟ್‌ನುಸಿ, ಹಸಿರು ಜಿಗಿ, ಬಿಳಿನೊಣ, ಮತ್ತು ಇತ್ತಿತ್ತಲಾಗಿ ಮಿರಿಡ್ ಮತ್ತು ಹಿಟ್ಟು ತಿಗಣೆಗಳು ಬೆಳೆಯ ವಿವಿಧ ಹಂತಗಳಲ್ಲಿ ಕಾಣಿಸಿಕೊಂಡು ಬೆಳವಣಿಗೆ ಕುಂಠಿತಗೊಳಿಸುವುದರಿಂದ ಇಳುವರಿ ಕಡಿಮೆಯಾಗುತ್ತಿದೆ. 2೦13 ರ ಮುಂಗಾರು ಬೆಳೆಯಲ್ಲಿ ಹೊಸದಾಗಿ ಹೂ ಮೊಗ್ಗು ಮ್ಯಾಗಟ್ ಕೀಟ ತೀವ್ರವಾಗಿ ಕಾಣಿಸಿಕೊಂಡಿದೆ.

ಥ್ರಿಪ್ಸ ನುಸಿ: ಎಲೆಯ ಕೆಳಭಾಗದಲ್ಲಿದ್ದುಕೊಂಡು ಎಲೆಗಳನ್ನು ಕುಕ್ಕಿ ರಸವನ್ನು ಹೀರುತ್ತವೆ. ಅಂತಹ ಎಲೆಗಳು ಚಿಬ್ಬುಗಟ್ಟಿದಂತಾಗಿ ಮುದುಡಿಕೊಳ್ಳುತ್ತವೆ ಮತ್ತು ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತದೆ.

ಸಸ್ಯ ಹೇನು: ಬೆಳೆಯುತ್ತಿರುವ ಕುಡಿ, ಎಲೆಗಳ ಕೆಳಭಾಗ ಮತ್ತು ಮೊಗ್ಗುಗಳಲ್ಲಿ ಕಂಡುಬಂದು ರಸ ಹೀರುವುದರಿಂದ ಸಸಿಗಳು ಬಾಡಿದಂತಾಗಿ ಬೆಳವಣಿಗೆ ಕುಂಠಿತವಾಗುವುದು ಮತ್ತು ಅಂತಹ ಸಸಿಗಳ ಮೇಲೆ ಕಪ್ಪು ಬಣ್ಣದ ಶಿಲೀಂದ್ರ ಬೆಳೆದು ಕೆಲವೊಮ್ಮೆ ಸಸಿಗಳು ಸಾಯುತ್ತವೆ.

ಹಸಿರು ಜಿಗಿ: ರಸವನ್ನು ಹೀರುತ್ತ ತನ್ನ ವಿಷಕಾರಿಯಾದ ಜೊಲ್ಲನ್ನು ಎಲೆಗಳ ಕೋಶಗಳಲ್ಲಿ ಸ್ರವಿಸುವುದರಿಂದ ಎಲೆಗಳು ಅಂಚಿನಿಂದ ಮಧ್ಯಭಾಗದವರೆಗೆ ಹಳದಿ ಆಗುತ್ತಾ ಬಂದು ಕೆಂಪಾಗುವವು. ಎಲೆಗಳು ಮುರುಟಿದಂತಾಗಿ ಬಿರುಸಾಗಿ ಸುಟ್ಟಂತೆ ಕಾಣುವವು.

ಬಿಳಿನೊಣ: ಕೀಟದ ಮೈತುಂಬ ಬಿಳಿ ಬಣ್ಣದ ಮೇಣದಂತಹ ಹುಡಿ ಇರುತ್ತದೆ. ಪ್ರೌಢ ಕೀಟಗಳು ಹಾಗೂ ಮರಿಗಳು ಸತತವಾಗಿ ರಸಹೀರುವುದರಿಂದ ಎಲೆಗಳು ಹಳದಿ ವರ್ಣಕ್ಕೆ ತಿರುಗಿ ಉದುರುತ್ತವೆ, ಮೊಗ್ಗು ಕಾಯಿಗಳೂ ಉದುರುತ್ತವೆ. ಕಾಯಿಗಳು ಇರುಕಲಾಗಿ ಒಡೆಯುವವು. ಈ ಕೀಟಗಳು ಜೇನಿನಂತಹ ದ್ರವವನ್ನು ಸ್ರವಿಸುವದರಿಂದ ಅವುಗಳ ಮೇಲೆ ಕಪ್ಪು ಬಣ್ಣದ ಬೂಸ್ಟು ಬೆಳೆದು ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಸ್ಥಗಿತವಾಗುವುದು.

ಮಿರಿಡ್ ತಿಗಣೆ: ಪ್ರೌಢ ಮಿರಿಡ್ ತಿಗಣೆಯು ತಿಳಿ ಹಳದಿ ಮತ್ತು ಕಂದು ಬಣ್ಣ ಹೊಂದಿದ್ದು. ಪ್ರತಿ ಹೆಣ್ಣು ತಿಗಣೆಯು ಒಂದು ವಾರದ ಅವಧಿಯಲ್ಲಿ ಸುಮಾರು 7೦-17೦ ಮೊಟ್ಟೆಗಳನ್ನು ಎಲೆಯ ಒಳಭಾಗದಲ್ಲಿ ಇಡುತ್ತದೆ. ಮೊಟ್ಟೆಯೊಡೆದು ಹೊರ ಬಂದ ಮರಿಗಳು ಹಸಿರು ಬಣ್ಣ ಹೊಂದಿದ್ದು ಕಂದು ಬಣ್ಣದ ಕುಡಿ ರೆಕ್ಕೆಗಳನ್ನು ಹೊಂದಿರುತ್ತವೆ. ಪ್ರೌಢ ಕೀಟಗಳು ಹಾಗೂ ಮರಿಗಳು ಸತತವಾಗಿ ಮೊಗ್ಗು ಹಾಗು ಕಾಯಿಗಳಿಂದ ರಸಹೀರುವುದರಿಂದ ಮೊಗ್ಗು ಹಾಗೂ ಸಣ್ಣ ಕಾಯಿಗಳ ಬೆಳವಣಿಗೆ ಕುಂಠಿತಗೊಂಡು ಉದುರುತ್ತವೆ. ಅಲ್ಲದೇ ಕಾಯಿಗಳು ಇರುಕಲಾಗಿ ಒಡೆಯುವವು. ಈ ರೀತಿಯ ಕಾಯಿಗಳಿಂದ ಬರುವ ಹತ್ತಿಯ ಗುಣಮಟ್ಟ ಕಡಿಮೆ ಆಗಿ ಉತ್ತಮ ಬೆಲೆ ಸಿಗುವುದಿಲ್ಲ.

ಸಾಂದರ್ಭಿಕ ಚಿತ್ರ
ಹೂಮೊಗ್ಗು ಮ್ಯಾಗಟ್ ಕೀಟ: ಈ ಕೀಟವು ಅತ್ಯಂತ ಚಿಕ್ಕದಾಗಿದ್ದು (2 ಎಮ್.ಎಮ್) ಇದರ ಮರಿ ಕೀಟಗಳು ಕೆಂಪು ಬಣ್ಣದಾಗಿದ್ದು ಮೊಗ್ಗು ಮತ್ತು ಹೂಗಳನ್ನು ಆಶ್ರಯಿಸಿ ಹಾವಳಿ ಮಾಡುವವು. ಇದರಿಂದ ಮೊಗ್ಗುಗಳು ಹೂವಾಗದೆ ಕಂದು ಬಣ್ಣಕ್ಕೆ ತಿರುಗುತ್ತವೆ. ಈ ಕೀಟದ ಹಾವಳಿಯಿಂದ ಯಾವುದೇ ಕಾಯಿಗಳು ಬೆಳವಣಿಗೆಯಾಗದೆ ಹತ್ತಿಯ ಬೆಳೆಯಲ್ಲಿ ಸುಮಾರು 5೦ ರಿಂದ 9೦ ಪ್ರತಿ ಶತ ಹಾನಿಯಾಗುತ್ತದೆ. ಈ ಕೀಟದ ನಿಯಂತ್ರಣಕ್ಕಾಗಿ ಮೆಲಾಥಿಯಾನ್ ಶೇ.50 ಇಸಿ ಕೀಟನಾಶಕವನ್ನು ಪ್ರತಿ ಲೀಟರ ನೀರಿಗೆ 2ಮಿಲಿಯಂತೆ ಬೆರೆಸಿ ಸಿಂಪರಣೆ ಮಾಡುವುದು.

ಈ ರಸಹೀರುವ ಕೀಟಗಳ ನಿರ್ವಹಣೆಗೆ ಕೇವಲ ಕೀಟನಾಶಕ ಬಳಕೆ ಮಾಡದೆ ಈ ಕೆಳಗಿನ ಸಮಗ್ರ ರೀತಿಯ ಕ್ರಮಗಳಿಂದ ನಿರ್ವಹಣೆ ಮಾಡುವುದು ಮುಖ್ಯವಾಗಿದೆ.

ಹೀರುವ ಕೀಟಗಳ ಗರಿಷ್ಟ ಆರ್ಥಿಕ ಸಂಖ್ಯೆಯನ್ನು ಅನುಸರಿಸಿ ಶೇ. 5 ರ ಬೇವಿನ ಬೀಜದ ಕಷಾಯ ಅಥವಾ ಬೇವಿನ ಕೀಟನಾಶಕ ಅಥವಾ ಅಂತರವ್ಯಾಪಿ ಕೀಟನಾಶಕಗಳಾದ 1.5 ಮಿ.ಲೀ. ಆಕ್ಸಿಡೆಮೆಟಾನ್ ಮೀಥೈಲ್ 25 ಇ.ಸಿ. ಅಥವಾ 2.೦ ಮಿ.ಲೀ. ಡೈಮಿಥೋಯೇಟ್ 3೦ ಇ.ಸಿ. ಅಥವಾ 1.೦ ಮಿ.ಲೀ. ಮೊನೋಕ್ರೋಟೊಫಾಸ್ 36 ಎಸ್.ಎಲ್ ಅಥವಾ ೦.5೦ ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ಅಥವಾ ೦.2 ಗ್ರಾಂ ಅಸೆಟಮಿಪ್ರಿಡ್ 2೦ ಎಸ್.ಪಿ, ೦.2 ಗ್ರಾಂ ಥಯ ಮೆಥಾಕ್ಸಮ್ 25ಡಬ್ಲೂ ಜಿ ಕೀಟನಾಶಕವನ್ನು ಒಂದು ಲೀ. ನೀರಿಗೆ ಬೆರೆಸಿ ಹೆಕ್ಟೇರಿಗೆ 4೦೦-5೦೦ ಲೀ. ದ್ರಾವಣ ಸಿಂಪಡಿಸಬೇಕು.
ಮೇಲಿನ ಸಿಂಪರಣೆ ಸಾಧ್ಯವಾಗದಿದ್ದಲ್ಲಿ 1.೦ ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ಕೀಟನಾಶಕಗಳನ್ನು 2೦ ಮಿ.ಲೀ. ನೀರಿನಲ್ಲಿ ಬೆರೆಸಿ ಕುಡಿಯ ಭಾಗದ ಕಾಂಡಕ್ಕೆ ಒಂದು ಅಂಗುಲ ಸವರಬೇಕು. ಒಂದು ಹೆಕ್ಟೇರಿಗೆ 3೦- 4೦ ಮಿ.ಲೀ. ಕೀಟನಾಶಕ ಬೇಕಾಗುತ್ತದೆ.

ಮಿರಿಡ್ ತಿಗಣೆ ನಿರ್ವಹಣೆಗೆ ಮೊಗ್ಗುಗಳಲ್ಲಿ ಅವಿತ ಕೊಂಡಿರುವ ತಿಗಣೆಯನ್ನು ವೀಕ್ಷಿಸಿ ಅಸಿಫೇಟ 7೦ ಎಸ್.ಪಿ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ 1 ಗ್ರಾಂ ನಂತೆ ಬೆರೆಸಿ ಸಿಂಪರಿಸಬೇಕು. ಅವಶ್ಯವಿದ್ದಲ್ಲಿ ಇದೇ ಸಿಂಪರಣೆಯನ್ನು 1೦-12 ದಿನಗಳ ಅಂತರದಲ್ಲಿ ಕೈಗೊಳ್ಳಬೇಕು.

ಹತ್ತಿ ಬೆಳೆಗೆ 8೦-9೦ ದಿನಗಳಾದಾಗ ಗಿಡದ ತುದಿ ಚಿವುಟಿ ತೆಗೆಯುವುದರಿಂದ ರಸ ಹೀರುವ ಕೀಟಗಳ ಬಾಧೆ ಕಡಿಮೆಗೊಳಿಸಬಹುದು. ಬಿಳಿ ನೊಣದ ನಿಯಂತ್ರಣಕ್ಕಾಗಿ ಶೇ. 5ರ ಬೇವಿನ ಬೀಜದ ಕಷಾಯ ಅಥವಾ ಬೇವಿನ ಕೀಟನಾಶಕ ಅಥವಾ ಪ್ರತಿ ಲೀ. ನೀರಿಗೆ 1.5 ಮಿ.ಲೀ. ಟ್ರೈಅಜೋಫಾಸ್ 4೦ ಇ.ಸಿ. ಕೀಟನಾಶಕಗಳನ್ನು ಬಿಳಿ ನೊಣಗಳ ಸಂಖ್ಯೆ ಆಧರಿಸಿ ಸಿಂಪಡಿಸಬೇಕು.

ಬಿಳಿ ನೊಣದ ಬಾಧೆ ಇದ್ದಾಗ ಪೈರಿಥ್ರಾಯಿಡ್ ಕೀಟನಾಶಕಗಳನ್ನು ಬಳಸಬಾರದು ಮತ್ತು ಎಕರೆಗೆ 2೦ ರಂತೆ ಹಳದಿ ಬಣ್ಣದ ಅಂಟಿನ ಬಲೆಗಳನ್ನು ಬೆಳೆಯ ಎತ್ತರಕ್ಕೆ ನೆಡಬೇಕು. ಮೈಟ್ ನುಶಿ ಕಂಡು ಬಂದರೆ ಪ್ರತಿ ಲೀಟರ್ ನೀರಿಗೆ 3.೦ ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 2.5 ಮಿ.ಲೀ. ಢೈಕೋಫಾಲ್ 18.5 ಇ.ಸಿ. ಬೆರೆಸಿ ಸಿಂಪಡಿಸಬೇಕು.

 

Author : ಪ್ರಕಟಣೆ: ಜಂಟಿ ಕೃಷಿ ನಿರ್ದೇಶಕಕರ ಕಛೇರಿ, ಹಾವೇರಿ, ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯ,

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited