Untitled Document
Sign Up | Login    
ತ್ಯಾಗ ಬಲಿದಾನದ ಅರ್ಥ ತಿಳಿಯದೇ ಇವರಿಗೆ? ಈ ಸಂತತಿಯ ಪಾಪದ ಕೊಡ ತುಂಬುವುದೆಂದು?

ದೇಶದ ಗಡಿ ಕಾಯುತ್ತಿರುವ ವೀರ ಯೋಧರು

"ಸೈನಿಕರು ಶಹೀದರಾಗುವ ಸಲುವಾಗಿಯೇ ಸೇನೆಯನ್ನು ಸೇರುತ್ತಾರೆ. ಅವರ ಕೆಲಸವೇ ಅದು, ಅದರಲ್ಲೇನು ವಿಶೇಷತೆ ಇದೆ?"!!!.. ಇಂತಹ ಸಂವೇದನಾರಹಿತವಾದ ಉಡಾಫೆ ಹೇಳಿಕೆಯನ್ನು ಗುರುವಾರ ನೀಡಿದ್ದು ಬಿಹಾರದ ಜೆಡಿಯು ಮುಖ್ಯಮಂತ್ರಿ ನಿತೀಶ್ ಕುಮಾರ್ ಸಚಿವ ಸಂಪುಟದ ಗ್ರಾಮೀಣಾಭಿವೃದ್ಧಿ ಮಂತ್ರಿ ಭೀಮಾಸಿಂಗ್.

ತ್ಯಾಗ ಬಲಿದಾನದ ಅರ್ಥ ತಿಳಿಯದೇ ಇವರಿಗೆ?..

ಸೋಮವಾರ ರಾತ್ರಿ ಕದನ ವಿರಾಮವನ್ನು ಮಗದೊಮ್ಮೆ ಉಲ್ಲಂಘಿಸಿ ಪಾಕ್ ಸೇನೆಯಿಂದ ನಡೆದ ಅಮಾನುಷ ಗುಂಡಿನ ದಾಳಿಯಿಂದಾಗಿ ಹುತಾತ್ಮರಾದ ಐವರು ಯೋಧರ ಪೈಕಿ ನಾಲ್ವರು ಬಿಹಾರದವರಾಗಿದ್ದು, ಅವರ ಪಾರ್ಥಿವಶರೀರಗಳನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಸರ್ಕಾರದಿಂದ ಯಾರೂ ಬಂದಿರಲಿಲ್ಲ, ಯಾಕೆ? ಎಂಬ ರಾಷ್ಟ್ರೀಯ ಸುದ್ದಿವಾಹಿನಿಯ ವರದಿಗಾರರ ಪ್ರಶ್ನೆಗೆ ಈ ರೀತಿ ಕಠೋರ ಮಾತುಗಳನ್ನಾಡಿದ್ದಷ್ಟೇ ಅಲ್ಲ, ವರದಿಗಾರರನ್ನು "ನೀವು ಅಲ್ಲಿಗೆ ಹೋಗಿದ್ದಿರಿ ಎಂದರೆ ನಿಮ್ಮ ಸಂಬಳದ ಕೆಲಸಕ್ಕೆ ನೀವು ಹೋಗಿದ್ದಿರಿ. ನಿಮ್ಮ ತಂದೆ ಹೋಗಿದ್ದರೆ? ನಿಮ್ಮ ತಾಯಿ ಹೋಗಿದ್ದರೆ?" ಎಂಬಿತ್ಯಾದಿಯಾಗಿ ಅನಾಗರಿಕವಾಗಿ ಮರುಪ್ರಶ್ನಿಸುತ್ತಾ ವೈಯಕ್ತಿಕ ಪ್ರಹಾರ ಮಾಡುತ್ತಾರೆ.

ವರದಿಗಾರರ ತಂದೆ ತಾಯಿ ಹೋಗಿದ್ದರೋ ಇಲ್ಲವೋ, ಅದು ಅವರ ವೈಯಕ್ತಿಕ ವಿಚಾರ. ಅವರು ದೇಶವಾಸಿಗಳಿಗೆ ಉತ್ತರದಾಯಿಯಲ್ಲ. ಆದರೆ ರಾಜಕೀಯ ಮುಖಂಡರು... ಅವರು ಜನರ ಪ್ರತಿನಿಧಿಯಾಗಿ ಪ್ರಜಾಸೇವೆಯ ಪ್ರಮಾಣವಚನ ಸ್ವೀಕರಿಸಿರುತ್ತಾರೆ. ಸರ್ಕಾರದ ಪ್ರತಿನಿಧಿಯಾಗಿ ಇಂತಹ ಉಡಾಫೆ ಮಾತುಗಳನ್ನಾಡುವುದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರಿಗೆ, ಅವರ ಕುಟುಂಬಕ್ಕೆ,ನಾಡಿಗೆ ಒಟ್ಟಾರೆ ದೇಶಕ್ಕೆ ಮಾಡಿದ ಅಪಮಾನವಾಗಿದೆ. ಇಂತಹ ಮಂತ್ರಿಗಳು ಯಾರೇ ಆಗಿರಲಿ ಅವರಿಗೆ ಒಂದು ಕ್ಷಣ ಕೂಡ ಸಚಿವ ಸಂಪುಟದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ಅಷ್ಟೇ ಅಲ್ಲ ಇದು ಭಾವನಾತ್ಮಕವಾಗಿ ಜನರನ್ನು ಕೆರಳಿಸುವ ವಿಚಾರವಾಗಿದ್ದು, ವರದಿಗಾರಮೇಲೆ ವೈಯಕ್ತಿಕ ಪ್ರಹಾರ, ಯೋಧರ ಗೌರವಕ್ಕೆ ಧಕ್ಕೆಯಾಗುವಂತಹ ಹೇಳಿಕೆ. ಇಂತಹ ನಾಚಿಕೆಗೇಡಿನ ಹೇಳಿಕೆಗಳಿಂದ ಹುತಾತ್ಮರ ಕುಟುಂಬಕ್ಕೆ ಮತ್ತು ಎಲ್ಲ ದೇಶವಾಸಿಗಳಿಗೆ ಆಘಾತವಾಗಿದೆ.

ವಿವೇಕಶೂನ್ಯ ಹೇಳಿಕೆ ನೀಡುವುದು ನಂತರದಲ್ಲಿ ಕಾಟಾಚಾರಕ್ಕೆ ಕ್ಷಮಾಪಣೆ ಕೇಳಿ ಕೈತೊಳೆದುಕೊಳ್ಳುವುದು ಕೆಲವು ಮಂತ್ರಿಗಳ, ಜನನಾಯಕರೆಂದು ಹೇಳಿಕೊಂಡು ಓಡಾಡುವವರ ಖಯಾಲಿಯಾಗಿಬಿಟ್ಟಿದೆ. ದೇಶ ಮತ್ತು ಹುತಾತ್ಮರ ಬಗ್ಗೆ ಸದ್ಭಾವನೆ ಹೊಂದಿರದ ಇಂತಹವರನ್ನು ಯಾವ ಕಾರಣಕ್ಕೂ ನಾಯಕರೆಂದು ಒಪ್ಪಲಾಗದು. ಇವರೂ ಕೂಡ ಅಂತರಿಕ ಭಯೋತ್ಪಾದಕರೇ ಎಂದರೆ ತಪ್ಪಾಗದು.

ದೇಶದ ಸಂಪತ್ತನ್ನು ಲೂಟಿಹೊಡೆಯುವ, ಅಕ್ರಮ-ಮಾಫಿಯಾಗಳನ್ನು ತಡೆಯುವ ಅಧಿಕಾರಿಗಳನ್ನು ನಲವತ್ತೈದು ನಿಮಿಷದಲ್ಲೇ ಸಸ್ಪೆಂಡ್ ಮಾಡಿದ್ದೇವೆಂದು ಕೊಚ್ಚಿಕೊಳ್ಳುವ, ಕ್ಷಣಕ್ಕೊಂದು ಮಾತು ಬದಲಿಸುವ, ಹುತಾತ್ಮರನ್ನು ಅವಮಾನಿಸುವ ರಾಜಕಾರಣಿಗಳು ಹಣ ಹೆಂಡದ ಹೊಳೆ ಹರಿಸಿ ಮತ ಖರೀದಿಸುವ, (ಜನ?)ನಾಯಕರು.. ಇಂತಹವರ ಕಪಿಮುಷ್ಠಿಯಲ್ಲಿ ದೇಶ. ಇದೆಂತಹ ವಿಪರ್ಯಾಸ? ಹೇ ತಾಯಿ ಭಾರತಿ, ಈ ಸಂತತಿಯ ಪಾಪದ ಕೊಡ ತುಂಬುವುದೆಂದು???

 

Author : ವಿದ್ಯಾ ಭಟ್ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited