Untitled Document
Sign Up | Login    
ಸೋಯಾಬಿನ್ ಬೆಳೆಯ ಹಾನಿಕಾರಕ ಕೀಟಗಳು ಹಾಗೂ ಅವುಗಳ ನಿರ್ವಹಣೆ


ಸೋಯಾಬಿನ್ ಬೆಳೆಯು ಬೆಳಗಾವಿ ಜಿಲ್ಲೆಯ ಪ್ರಮುಖ ಎಣ್ಣೆಕಾಳು ಬೆಳೆಯಾಗಿದ್ದು ಮುಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆಯುತ್ತಾರೆ. ಈ ಬೆಳೆಯನ್ನು 2012-13ರ ಮುಂಗಾರು ಹಂಗಾಮಿನಲ್ಲಿ 115550 ಹೆಕ್ಟೇರ ಪ್ರದೇಶದಲ್ಲಿ ಬೆಳೆಯಲಾಗಿತ್ತು. ಜಿಲ್ಲೆಯ ಸರಾಸರಿ ಇಳುವರಿ ಹೆಕ್ಟೇರಿಗೆ 14.16 ಕ್ವಿಂಟಾಲ್ ಮತ್ತು ಒಟ್ಟು ಉತ್ಪಾದನೆ 16,36,520 ಕ್ವಿಂಟಾಲ್ ದಾಖಲಾಗಿದೆ.
ಜಗತ್ತಿನ ವಿವಿಧ ಭಾಗಗಳಲ್ಲಿ ಸೋಯಾಬಿನ ಬೆಳೆಗೆ 275 ಕೀಟಗಳು ಹಾನಿಕಾರಕವೆಂದು ಕಂಡು ಬಂದಿವೆ. ಅವುಗಳಲ್ಲಿ 15-2೦ ಕೀಟಗಳು ಮಾತ್ರ ಭಾರತ ದೇಶದಲ್ಲಿ ಸೋಯಾಬಿನ್ ಬೆಳೆಗೆ ಹಾನಿಕಾರಕವೆಂದು ಕಂಡುಕೊಳ್ಳಲಾಗಿದೆ. ಸೋಯಾಬಿನ್ ಬೆಳೆಯಲ್ಲಿ ಕೀಟಗಳಿಂದ ಶೇಕಡಾ 28 ರಿಂದ 3೦ ರಷ್ಟು ಹಾನಿಯಾಗುತ್ತಿರುವುದು ಕಂಡು ಬಂದಿದೆ.

ಕೀಟ ಪೀಡೆಗಳ ಪ್ರಮುಖವಾದವುಗಳೆಂದರೆ ಕಾಂಡದ ನೊಣ ಕೊಂಡಿಲು ಹುಳು, ನೀಲಿ ದುಂಬಿ, ಸುರುಳಿ ಹುಳು, ಎಲೆ ತಿನ್ನುವ ಹುಳು, ಕಾಯಿಕೊರಕಗಳು ಮತ್ತು ಹಿಲಿಯೋಥಿಸ್ ಕೀಟಗಳು ಪ್ರಮುಖವಾದವುಗಳು.

ಕಾಂಡದ ನೊಣ: ಮರಿಹುಳುಗಳು ಎಲೆ ತುಂಬು ಹಾಗೂ ಕಾಂಡವನ್ನು ಪ್ರವೇಶಿಸಿ ಕಾಂಡದ ಮಧ್ಯದ ಭಾಗವನ್ನು ತಿನ್ನುತ್ತವೆ. ಇದರಿಂದ ಹಾನಿಯಾದ ಭಾಗದಿಂದ ಮೇಲ್ಬಾಗಕ್ಕೆ ಆಹಾರ ಹಾಗೂ ನೀರು ಸಾಗಾಣಿಕೆ ಕುಂಠಿತಗೊಳ್ಳುವುದರಿಂದ ಈ ಭಾಗ ಮೊದಲು ಬಾಡಿ ನಂತರ ಒಣಗುತ್ತದೆ.

ಸುರಳಿ ಹುಳು: ತಿಳಿ ಹಳದಿ ಬಣ್ಣದ ಚಿಕ್ಕ ಮರಿ ಹುಳುಗಳು ಎಲೆಯನ್ನು ಕೊರೆದು ಸುರಂಗ ಮಾಡುತ್ತವೆ. ನಂತರ ದೊಡ್ಡ ಕೀಡೆಗಳು ಎಲೆಗಳನ್ನು ಕೂಡಿಸಿಕೊಂಡು ಒಳಗಿನಿಂದಲೇ ಎಲೆಯನ್ನು ಕೆರೆದು ತಿನ್ನುತ್ತವೆ. ಇದರಿಂದ ಬೆಳೆಯ ಎಲೆಗಳು ಸುಟ್ಟಂತೆ ಕಾಣುತ್ತವೆ.

ನೀಲಿದುಂಬಿ: ಈ ದುಂಬಿಯ ತಲೆಯ ಭಾಗ ಕೆಂಪು ಬಣ್ಣದ್ದಿದ್ದು ಇನ್ನುಳಿದ ದೇಹದ ಭಾಗ ಕಡು ನೀಲಿ ಬಣ್ಣದ್ದಿರುತ್ತದೆ. ಈ ದುಂಬಿಯು ಎಳೆಯ ಎಲೆ ಹಾಗೂ ಕುಡಿಯ ಭಾಗವನ್ನು ತಿನ್ನುತ್ತದೆ. ಕೀಟದ ಬಾಧೆ ಹೆಚ್ಚಾದಂತೆ ಎಲೆಗಳು ಕತ್ತರಿಸಿದಂತೆ ಕಾಣುತ್ತವೆ.

ಕೊಂಡಿಲು ಹುಳು: ಹಸಿರು ಹಾಗೂ ಕಂದು ಬಣ್ಣದ ಕೀಡೆಗಳು ಚಲಿಸುವಾಗ ಹೊಟ್ಟೆಯ ಭಾಗವನ್ನು ಕೊಂಡಿಯ ತರಹ ಬಾಗಿಸುತ್ತವೆ. ಮೊದಲ ಹಂತದ ಮರಿ ಕೀಡೆಗಳು ಎಲೆಗಳನ್ನು ಕೆರೆದು ಹಸಿರು ಭಾಗವನ್ನು ತಿನ್ನುವುದರಿಂದ ಎಲೆಯ ಅಳಿದುಳಿದ ಭಾಗ ಜಾಳಿಗೆಯಂತೆ ಕಾಣುತ್ತದೆ. ಇನ್ನು ಬಲಿತ ಕೀಡೆಗಳು ಎಲೆಗಳನ್ನು ಅಂಚಿನಿಂದ ಕತ್ತರಿಸಿ ತಿನ್ನುತ್ತವೆ.

ಸ್ಪೊಡೊಪ್ಟೆರಾ ಕೀಡೆ: ಮರಿ ಕೀಡೆಗಳು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ದೊಡ್ಡ ಕೀಡೆಗಳು ಎಲೆಗಳನ್ನು ಪೂರ್ತಿಯಾಗಿ ತಿನ್ನುತ್ತವೆ. ಎಳೆಯ ಕಾಯಿಯನ್ನು ಕೂಡಾ ಕತ್ತರಿಸಿ ತಿನ್ನುತ್ತವೆ. ಈ ಕೀಡೆಗಳು ರಾತ್ರಿ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತವೆ.

ಕಾಯಿ ಕೊರಕಗಳು: ಎಳೆಯ ಕಾಯಿ, ಕಾಯಿಯ ತೊಗಟೆ, ಕಾಳುಗಳನ್ನು ಸ್ಪೊಡೊಪ್ಟೆರಾ ಕೀಡೆ, ಹಿಲಿಯೊಥಿಸ ಕೀಡೆ ಮತ್ತು ಸಿಡಿಯಾ ಹುಳುಗಳು ತಿನ್ನುವುದರಿಂದ ಇಳುವರಿ ಕುಂಠಿತವಾಗುತ್ತದೆ.

ಸೋಯಾಬಿನ್ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ:

ಬೆಳೆಯ ವಿವಿಧ ಹಂತಗಳಲ್ಲಿ ಹಲವಾರು ಕೀಟ ಪೀಡೆಗಳು ಹಾನಿ ಮಾಡುವುದರಿಂದ ಸಮಗ್ರ ಪೀಡೆ ನಿರ್ವಹಣೆ ಹೆಚ್ಚು ಸೂಕ್ತವಾಗುತ್ತದೆ.

ಸಮಗ್ರ ಪೊಷಕಾಂಶಗಳ ಉಪಯೋಗ: ಸಾರಜನಕ, ರಂಜಕ, ಪೊಟ್ಯಾಷ್ ಮತ್ತು ಗಂಧಕ ಪೋಷಕಾಂಶಗಳನ್ನು ಹೆಕ್ಟೇರಿಗೆ 2೦: 6೦-8೦ : 2೦ : 2೦ ಕಿ.ಗ್ರಾಂ. ಪ್ರಮಾಣದಲ್ಲಿ, ಬಿತ್ತನೆ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು. ಮಣ್ಣು ಪರೀಕ್ಷೆಯ ಆಧಾರದ ಮೇಲೆ ಈ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಬಹುದು. ಸಾರಜನಕವನ್ನು ಶಿಫಾರಿತ ಪ್ರಮಾಣಕ್ಕಿಂತ ಹೆಚ್ಚಿಗೆ ಹಾಕುವುದರಿಂದ ಎಲೆ ತಿನ್ನುವ ಕೀಡೆಗಳು ಉಲ್ಬಣವಾಗುವುದನ್ನು ತಡೆಯಬಹುದು. ಸರಿಯಾಗಿ ಕಳಿತ ಸಾವಯವ ಗೊಬ್ಬರ ಹಾಕುವುದರಿಂದ ಗೊಣ್ಣೆ ಹುಳುವಿನ ಬಾಧೆ ಕಡಿಮೆ ಮಾಡಿಬಹುದು. ಬಿತ್ತನೆ ಸಮಯದಲ್ಲಿಯೇ ಎಲ್ಲ ರಸಗೊಬ್ಬರಗಳನ್ನು ಹಾಕಬೇಕು.

ತಳಿ: ಜೆ.ಎಸ್ 71-೦೫, ಜೆ.ಎಸ್ 8೦-21, ಜೆ.ಎಸ್ 93-೦5 ಮತ್ತು ಎಮ್.ಎ.ಯು.ಎಸ್ 45೦: ಈ ತಳಿಗಳು ಎಲೆ ತಿನ್ನುವ ಕೀಟ ಬಾಧೆಗೆ ಸಹನ ಶೀಲತೆ ಹೊಂದಿವೆ.

ಲೈಂಗಿಕಾಕರ್ಷಕ ಬಲೆ: ಮೋಹಕ ವಸ್ತು ಹೊಂದಿದ ಬಲೆಗಳನ್ನು ಬಳಸಿ ಗಂಡು ಪತಂಗಗಳನ್ನು ಆಕರ್ಷಿಸಿ ನಾಶಪಡಿಸಬಹುದು ಅಥವಾ ಪತಂಗ ಸಮೀಕ್ಷೆ ನಡೆಸಿ ಜೈವಿಕ ಅಥವಾ ರಸಾಯನಿಕ ಕ್ರಮಗಳನ್ನು ಕೈಗೊಂಡು ಕೀಟ ನಿರ್ವಹಣೆ ಮಾಡಬಹುದು. ಎಕರೆಗೆ 4 ಬಲೆ ಹಾಕಿ ಪತಂಗ ಆಕರ್ಷಿಸಿ ನಾಶಪಡಿಸಬೇಕು. ಬಿತ್ತನೆಯಾದ 15 ದಿನಗಳ ನಂತರ ಪತಂಗ ಸಮೀಕ್ಷೆ ಕೈಗೊಳ್ಳಲು ಬಲೆ ಬಳಸಬಹುದು.

ಪಕ್ಷಿ ಆಶ್ರಯ: ಗಿಡಗಳ ಟೊಂಗೆ ಮತ್ತು ಇನ್ನಿತರ ವಸ್ತು ಬೆಳೆಯ ಜಮೀನಿನಲ್ಲಿ ನಿಲ್ಲಿಸಿ ಪಕ್ಷಿಗಳು ಕುಳಿತುಕೊಳ್ಳಲು ಆಶ್ರಯ ಒದಗಿಸುವುದರಿಂದ, ಪಕ್ಷಿಗಳು ಕೀಡೆಗಳನ್ನು ಆರಿಸಿ ತಿನ್ನುತ್ತವೆ. ಹೀಗಾಗಿ ಕೀಡೆ ಸಂಖ್ಯೆ ಕಡಿಮೆಯಾಗುತ್ತದೆ ಪ್ರತಿ ಎಕರೆಗೆ 15-2೦ ಟೊಂಗೆಗಳನ್ನು ನಿಲ್ಲಿಸಬೇಕು. ಬಿತ್ತನೆಯಾದ 15 ದಿನಗಳ ನಂತರ ಪಕ್ಷಿ ಆಶ್ರಯಗಳನ್ನು ಬೆಳೆಯಲ್ಲಿ ನಿಲ್ಲಿಸಬೇಕು.

ಕೀಟಗಳು ಉಲ್ಬಣಗೊಳ್ಳದಂತೆ ನಿರ್ವಹಣೆ ಮಾಡುವ ಉಪಾಯಗಳು:

ಬಾಧೆಗೊಳಗಾದ ಸಸ್ಯ ನಾಶಪಡಿಸುವಿಕೆ: ಕಾಂಡ ಕೊರಕ, ತಂಬಾಕಿನ ಎಲೆ ತಿನ್ನುವ ಕೀಡೆಗಳು ಬಾಧೆಗೊಳಗಾದ ಸಸ್ಯಗಳ ಮೇಲೆ ಜಾಸ್ತಿಯಿರುವುದರಿಂದ ಇಂಥಹ ಸಸ್ಯಗಳನ್ನು ನಾಶಪಡಿಸುವುದರಿಂದ ಕೀಡೆ/ಕೀಟಗಳ ಪ್ರಮಾಣ ಕಡಿಮೆ ಮಾಡಬಹುದು. ಸಸ್ಯದ ಮೇಲೆ ಕೀಟ ಪ್ರಮಾಣ ಸಮೀಕ್ಷೆ ಮಾಡಿ ಬಾಧೆಗೊಳಗಾದ ಸಸ್ಯಗಳನ್ನು ನಾಶಪಡಿಸಬೇಕು.
ಜೈವಿಕ ಕೀಟನಾಶಕಗಳ ಉಪಯೋಗ: ಜೈವಿಕ ಕೀಟನಾಶಕಗಳನ್ನು ಉಪಯೋಗಿಸುವುದರಿಂದ ಪರಿಸರ ಮತ್ತು ಮಿತ್ರ ಕೀಟಗಳಿಗೆ ತೊಂದರೆಯಾಗದಂತೆ ಹಾನಿಕಾರಕ ಕೀಟ ಬಾಧೆ ಕಡಿಮೆ ಮಾಡಬಹುದು ಇವುಗಳಲ್ಲಿ ಹಲವಾರು ವಿಧಗಳಿವೆ.

ಬಿಟಿ ಕೀಟನಾಶಕ: ಬ್ಯಾಕ್ಟೀರಿಯಾದಿಂದ ಉತ್ಪಾದಿಸಲ್ಪಟ್ಟ ವಿಷವನ್ನು ಎಲೆ ತಿನ್ನುವ ಕೀಡೆಗಳನ್ನು ನಿರ್ವಹಿಸಲು 1ಲೀಟರ ನೀರಿಗೆ 1 ಗ್ರಾಂ ಪ್ರಮಾಣದಲ್ಲಿ ಉಪಯೋಗಿಸಬಹುದು.

ಶಿಲೀಂದ್ರ ಕೀಟನಾಶಕ: ನೊಮೊರಿಯಾ ರಿಲಾಯಿ ಶಿಲೀಂದ್ರ ಜನ್ಯ ಕೀಟನಾಶಕವನ್ನು ಎಲೆ ತಿನ್ನುವ ಕೀಟ ಹತೋಟಿಗೆ 1 ಲೀಟರ ನೀರಿಗೆ 1 ಗ್ರಾಂ ಪ್ರಮಾಣದಲ್ಲಿ ಉಪಯೋಗಿಸಿ ಕೀಡೆ ನಿರ್ವಹಣೆ ಮಾಡಬಹುದು. ಈ ಕೀಟನಾಶಕಗಳನ್ನು ತಂಪಾದ ಹಾಗೂ ಹೆಚ್ಚು ಆರ್ಧ್ರತೆಯುಳ್ಳ ವಾತಾವರಣವಿರುವಾಗ ಸಿಂಪರಿಸುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಬಳಸಬಹುದು.

ಪೊರೆ ಕಳಚುವಿಕೆ ಕ್ರಿಯೆ ಮುಂದೂಡಿಕೆ ಕೀಟನಾಶಕಗಳು:

ಪೊರೆ ಕಳಚುವಿಕೆ ಕ್ರಿಯೆ ಮುಂದೂಡುವುದರಿಂದ ಕೀಡೆ ಒಂದೇ ಹಂತದಲ್ಲಿ ಬಹಳ ದಿನಗಳವರೆಗೆ ಉಳಿದು ಸಾವನ್ನಪ್ಪುತ್ತವೆ. ಡೈಪ್ಲುಬೆಂಜುರಾನ 25 ಡಬ್ಲೂಪಿ - ೦.6 ಗ್ರಾಂ ಅಥವಾ ಲ್ಯುಫೆನುರಾನ 5 ಇ.ಸಿ. 1 ಮಿ.ಲಿ. ಒಂದು ಲೀಟರ ನೀರಿಗೆ ಬೆರೆಸಿ ಸಿಂಪರಿಸಬೇಕು.

ರಾಸಾಯನಿಕ ಕೀಟನಾಶಕಗಳ ಉಪಯೋಗ:

ಕೀಟಗಳ ಮೊಟ್ಟೆ ಕೀಡೆ ಮತ್ತು ಪ್ರೌಢ ಹಂತಗಳನ್ನು ನಾಶಪಡಿಸಲು ಪರಿಣಾಮಕಾರಿಯಾಗಿ ಕೀಟನಾಶಕಗಳನ್ನು ಸಿಂಪಡಿಸಬಹುದು. ಕ್ಲೋರೊ ಪೈರಿಫಾಸ 2೦ ಇ.ಸಿ. - 2 ಮಿ.ಲಿ. ಅಥವಾ ಟ್ರೈಜೋಫಾಸ 4೦ ಇ.ಸಿ. 2 ಮಿ.ಲಿ. ಅಥವಾ ಲ್ಯಾಂಬ್ಡಾಸಾಯಲಥ್ರಿನ - 5 ಇ.ಸಿ. - ೦.5 ಮಿ.ಲಿ. ಒಂದು ಲೀಟರ ನೀರಿಗೆ ಬೆರೆಸಿ ಸಿಂಪರಿಸುವುದರಿಂದ ಕೀಡೆಗಳನ್ನು ನಿರ್ವಹಿಸಬಹುದು. ಮೊಟ್ಟೆ ಹಾಗೂ ಕೀಡೆ ನಾಶಕ ಮಿಥೊಮಿಲ್ ೪೦ ಎಸ್.ಪಿ. 1 ಮಿ.ಲಿ. ಒಂದು ಲೀಟರ ನೀರಿಗೆ ಬೆರೆಸಿ ಸಿಂಪರಿಸಬೇಕು.

ಕಾಂಡ ಕೊರಕ ರಸ ಹೀರುವ ಕೀಟಗಳನ್ನು ನಿರ್ವಹಣೆ ಮಾಡಲು ಥೈಯಾಮಿಥಾಕ್ಸಾಮ್ - 25 ಡಬ್ಲೂಪಿ- ೦.2 ಗ್ರಾಂ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ೦.2 ಮಿ.ಲಿ. ಅಥವಾ ಮೊನೋಕ್ರೋಟೋಪಾಸ್ 36 ಎಸ್.ಎಲ್. 1ಮಿ.ಲಿ. ಒಂದು ಲೀಟರ ನೀರಿಗೆ ಬೆರೆಸಿ ಸಿಂಪರಿಸಬೇಕು.

ಈ ಮೇಲೆ ತಿಳಿಸಿದ ಕೀಟ ನಾಶಕಗಳನ್ನು ಕೈಚಾಲಿತ ಸ್ಪ್ರೇಯರ್ ಅಥವಾ ಪಂಪುಗಳಿಗೆ ಶಿಫಾರಿಸಲಾಗಿದೆ. ಪೆಟ್ರೋಲ್ ಅಥವಾ ಪವರ್ ಚಾಲಿತ ಪಂಪುಗಳಿಗೆ ಒಂದು ಲೀಟರ ನೀರಿಗೆ ಈ ಮೇಲೆ ಸೂಚಿಸಲಾದ ಕೀಟನಾಶಕಗಳ ಪ್ರಮಾಣವನ್ನು 2.5 ಪಟ್ಟು ಹೆಚ್ಚಿಸಿ ಉಪಯೋಗಿಸಬೇಕು.

 

Author : ಡಿ.ಸಿ. ಚೌಗಲಾ, ಎಮ್.ಎನ್.ಮಲಾವಡಿ, ಕುಮಾರಿ ರಜನಿ ರಜಪೂತ

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited