Untitled Document
Sign Up | Login    
ಶಂಕರ ಪಂಚಮಿ: ಮರೆಯಾಗುತ್ತಿದೆ ಶಂಕರರ ತತ್ವಗಳು, ಉಳಿಸಿಕೊಳ್ಳಬೇಕಿದೆ ಧರ್ಮವನ್ನು

ಶ್ರೀಶಂಕರಾಚಾರ್ಯರು

ವೈಶಾಖ ಶುದ್ಧ ಪಂಚಮಿ,( ಈ ವರ್ಷ ಮೇ.15), ರಾಜಾಡಳಿತದಲ್ಲಿ ಛಿಧ್ರ ಛಿದ್ರವಾಗಿ ಹೋಗಬೇಕಿದ್ದ ನಮಗೆ ದೇಶ, ರಾಷ್ಟ್ರ ಎಂಬ ಪರಿಕಲ್ಪನೆ ನೀಡಿ, ಅದ್ವೈತ ಸಿದ್ಧಾಂತಗಳನ್ನು ಜಗತ್ತಿಗೇ ತೋರಿಸಿದ ಮಹಾನ್ ಚೇತನ ಶ್ರೀ ಶ್ರೀ ಶ್ರೀ ಶಂಕರ ಭಗವತ್ಪಾದರ ಜಯಂತಿ.

ಧರ್ಮ ನೇಪಥ್ಯಕ್ಕೆ ಸರಿಯುವ ಸಂಧ್ಯಾಕಾಲದಲ್ಲಿ ಶಂಕರರ ಕೃಪೆಯಿಂದ ಅವತರಿಸಿ ಮತ್ತೆ ಧರ್ಮವನ್ನು ಸ್ಥಾಪಿಸಿದವರು ಶ್ರೀ ಶಂಕರಾಚಾರ್ಯರು. ಇಂದು ಎಲ್ಲಾ ದೇಶಗಳಲ್ಲಿ ವಾಸಿಸುತ್ತಿರುವವರು ಸಹ ಅವರವರ ಧರ್ಮ ಪಾಲಿಸಿಕೊಂಡು ಬರುತ್ತಿದ್ದಾರೆ. ಅಂತೆಯೇ ಕರ್ಮಭೂಮಿಯೆಂದೇ ಕರೆಯಲ್ಪಡುವ ಭಾರತದಲ್ಲಿ ಆದಿ ಶಂಕರಾಚಾರ್ಯರು ಸನಾತನ ಧರ್ಮದ ನವೀನ ವ್ಯಾಖ್ಯೆಗೆ ಮೂಲ ಪರುಷರಾಗಿದ್ದು, ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಮಾಡಿ ದೇಶಾದ್ಯಂತ ಪಸರಿಸಲು ಆಮ್ನಾಯ ಮಠ ಮತ್ತು ಯತಿಪರಂಪರೆಗಳಿಗೆ ಬುನಾದಿಯಾಗಿದ್ದಾರೆ.

ಈಮೂಲಕ ಧರ್ಮವನ್ನು ಪರಿಪಾಲಿಸುವುದಕ್ಕೆ ನಮಗೆಲ್ಲರಿಗೂ ಆದಿ ಗುರುಗಳಾಗಿ ದಾರಿ ತೋರಿಸುತ್ತಿದ್ದಾರೆ. ಭಕ್ತಿ ಮತ್ತು ಜ್ಞಾನ ಮಾರ್ಗಗಳ ಸಮನ್ವಯತೆ ಸಾಧಿಸಿ ಅವತಾರ ಪುರುಷರೆನಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಂಕರ ಜಯಂತಿ, ಶಂಕರಾಚಾರ್ಯರ ಮಹತ್ವ ಅಥವಾ ಅವರ ತತ್ವ ಸಿದ್ಧಾಂತಗಳನ್ನು ಆಚರಿಸುವುದಿರಲಿ ಕನಿಷ್ಠ ಅದರ ಬಗ್ಗೆ ಅರಿರುವು ಇರುವವರನ್ನು ಗುರುತಿಸುವುದೂ ಸಹ ಕಷ್ಟ ಸಾಧ್ಯದ ಕೆಲಸವಾಗಿದೆ. ಶಂಕರರ ತತ್ವ ಸಿದ್ಧಾಂತಗಳ ಮಾತು ಬಿಡಿ, ಕನಿಷ್ಠ ಅವರು ನಮಗೆ ನೀಡಿದ 'ದೇಶ' ಎಂಬ ಪರಿಕಲ್ಪನೆಯೇ ನುಚ್ಚು ನೂರಾಗುವ ಸ್ಥಿತಿ ಎದುರಾಗುವಂತಾಗಿದೆ.
ಸನಾತನ ಧರ್ಮಕ್ಕೆ ಹೆಸರುವಾಸಿಯಾಗಿದ್ದ ಭಾರತವನ್ನೊಮ್ಮೆ ನೆನಪಿಸಿಕೊಳ್ಳಿ, ಮೈ ಜುಂ ಎನ್ನುತ್ತದೆ. ಆದರೆ ಈಗ.... ಒಂದೆಡೆ ಓಟ್ ಬ್ಯಾಂಕ್ ರಾಜಕಾರಣದ ಹಿಂದೆ ಓಡುತ್ತಾ ತಮ್ಮ ಮೂಲ ಸ್ವರೂಪವನ್ನೇ ಮರೆತಿರುವ ರಾಜಕಾರಣಿಗಳು, 'ಸೆಕ್ಯೂಲರ್' ಎಂಬ ಧೋರಣೆಯಲ್ಲಿ ಭಾರತದ ನಿಜವಾದ ಅಸ್ಥಿತ್ವವನ್ನೇ ಕೊಲ್ಲುತ್ತಿರುವವರು ಮತ್ತೊಂದೆಡೆ. ಅವರ ಮೂಲ ಧರ್ಮವನ್ನು, ಸಿದ್ಧಾಂತಗಳನ್ನು, ಅವರ ಗುರುಗಳು ತಿಳಿಸಿಕೊಟ್ಟ ಮಾರ್ಗಗಳನ್ನು ಗಾಳಿಗೆ ತೂರಿ ಮನಸೋಯಿಚ್ಛೆ ವರ್ತಿಸುವ ಯಾವುದಾದರೂ ರಾಷ್ಟ್ರವನ್ನು ನೋಡಿದ್ದೀರಾ?

ಆದರೆ ಭಾರತ ಇಂಥಹ ವಾದಕ್ಕೇ ಅಪವಾದ. ಪರೋಪಕಾರಕ್ಕಾಗಿ, ಪರರ ಏಳಿಗೆಗಾಗಿ ತಮ್ಮತನವನ್ನೇ ಮಾರಿಕೊಳ್ಳುವ ಜನರೇ ಭಾರತದಲ್ಲಿ ಹೆಚ್ಚು. ಆದ್ದರಿಂದಲೇ ಇಂದಿಗೂ ಸಹ ನಮ್ಮನ್ನು ಬಹಳ ಸುಲಭವಾಗಿ ಪರದೇಶಿಯರು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ನೀವು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭೇಟಿ ನೀಡಿ, ಅಲ್ಲಿನ ಗುರುಗಳ ಬಗ್ಗೆ ಹಗುರವಾಗಿ ಮಾತನಾಡಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಏಕೆಂದರೆ, ಅವರು ಭಾವನಾತ್ಮಕ ಜೀವಿಗಳಲ್ಲದಿದ್ದರೂ, ತಮ್ಮತನವನ್ನು ಎಂದಿಗೂ ಮಾರಿಕೊಳ್ಳುವುದಿಲ್ಲ. ಅಲ್ಲಿನ ಧರ್ಮದ ಬಗ್ಗೆ ಯಾರಾದರೂ ಅವಹೇಳನಕಾರಿಯಾಗಿ ಮಾತನಾಡಿದರೆ, ಸುಮ್ಮನೆ ಬಿಡುವುದಿಲ್ಲ.

ಮೊದಲಿನಿಂದಲೂ ಸಹ ಶೂದ್ರರಿಗೆ ವಿದ್ಯಾಧಿಕಾರ ಇದೆ (ಸರ್ವೇಷಾಂಚಾಧಿಕಾರೋ ವಿದ್ಯಾಯಾಂ) ಎಂದು ಹೇಳಿದ ಪ್ರಪ್ರಥಮ ಕ್ರಾಂತಿಕಾರಿ, ಭಗವತ್ಪಾದ ಶಂಕರಾಚಾರ್ಯರು.

ಹೀಗಿರುವ ಸಂದರ್ಭದಲ್ಲಿ ಭಾರತದಲ್ಲಿ ತಮ್ಮತನವನ್ನೇ ಅವಹೇಳನ ಮಾಡಿ ಸಂಸ್ಕೃತ ಪಂಡಿತರೆಂದು ಹೇಳಿಕೊಂಡು ತಿರುಗುವ ಕೆಲ ರೋಗಗ್ರಸ್ಥ ಮನಸ್ಥಿತಿಗಳು ನಮಗೆ ಅತ್ಯತ್ತಮವಾದ ಸಿದ್ಧಾಂತಗಳನ್ನು ನೀಡಿ ಜಗತ್ತೇ ಮೆಚ್ಚಿದ ಶಂಕರಾಚಾರ್ಯರ ಬಗ್ಗೆ ಅವಹೇಳನಕಾರಿ ಲೇಖನ ಬರೆದಿದ್ದರು, ಅದಕ್ಕೆ ತೀವ್ರ ವಿರೋಧ ವ್ಯಕ್ತವಾದಾಗ ಬೇರೆ ದಾರಿ ಕಾಣದೆ ತೆಪ್ಪಗಾದರು. ಇಂಥವರು ನಮ್ಮ ಸಮಾಜದ ಮಧ್ಯೆ ಇರಬೇಕಾದರೆ ಮುಂದಿನ ದಿನಗಳಲ್ಲಿ ನಮ್ಮ ಪಾಲಿಗೆ 'ಭಾರತ ದೇಶ ಎಂಬುದೊಂದು ಇತ್ತು' ಎಂದು ನೆನಪಿಸಿಕೊಳ್ಳುವ ದಿನ ಬಂದರೂ ಅಚ್ಚರಿಯಿಲ್ಲ.
ಸಂಸ್ಕೃತಿಯ ಅಭಿಮಾನ ಇಲ್ಲದ ಕೆಲವು ಸಂಸ್ಕೃತ ಪಂಡಿತರು, ಬುದ್ಧಿಜೀವಿಗಳು ಚಾರ್ವಕರ ತತ್ವಗಳನ್ನೇ ಚಾಚೂತಪ್ಪದೆ ಪಾಲಿಸುವವರು ಆರೋಪಿಸುವಂತೆ ಸಂಸ್ಕೃತವನ್ನು ಕೇವಲ ಕೆಲವರ್ಗಕ್ಕೇ ಸೀಮಿತಗೊಳಿಸಲಾಗಿತ್ತು, ಅನ್ಯರು ಸಂಸ್ಕೃತ ಕಲಿಯುವುದಕ್ಕೆ ಶಂಕರರು ವಿರೋಧಿಸಿದ್ದರು, ಎಂಬುದೇ ನಿಜವಾದರೆ......

ಒಮ್ಮೆ ಕಾಶಿಯಲ್ಲಿ ಶಂಕರಾಚಾರ್ಯರು ಬೆಳಗಿನ ಜಾವದಲ್ಲಿ ಗಂಗೆಯಲ್ಲಿ ಮಿಂದು ದೇವಾಲಯಕ್ಕೆ ಹೊರಟಿದ್ದಾಗ ಚಾಂಡಾಲನೊಬ್ಬನು ರಸ್ತೆಯ ಮಧ್ಯೆ ಮಲಗಿದ್ದನ್ನು ಕಂಡು ಅವರು ಅವನಿಗೆ ದಾರಿ ಬಿಡೆಂದು ಕೇಳಿದರು. ಆಗ ಅವನು 'ತನ್ನ ಕಾಯವನ್ನು ಪಕ್ಕಕ್ಕೆ ಸರಿಸಬೇಕೋ ಅಥವಾ ತನ್ನ ಆತ್ಮವನ್ನೋ?' ಎಂದು ಕೇಳಿದಾಗ ಆಚಾರ್ಯರು, 'ಈ ಚಂಡಾಲ ಆ ವಿಶ್ವೇಶ್ವರನೇ' ಎಂದು ತಿಳಿದು ಅವನ ಕಾಲಿಗೆಬಿದ್ದು ಅವನ ಕ್ಷಮೆ ಬೇಡಿದರಂತೆ. ಹೀಗೆ, ಆತ್ಮ-ಪರಮಾತ್ಮಗಳ ಐಕ್ಯದ ಪಾಠವನ್ನು ಅರಿತ ಶಂಕರರು ಅಧ್ವೈತ ಸಿದ್ಧಾಂತವನ್ನು ರಚಿಸಿ, 'ಆತ್ಮ ಮತ್ತು ಪರಮಾತ್ಮ ಎರಡೂ ಒಂದೇ' ಎಂದು ಜಗತ್ತಿಗೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಶಂಕರರು ಜ್ಞಾನಕ್ಕೆ ಹಾಗು ಆತ್ಮಕ್ಕೆ ಮಾತ್ರವೆ ಗೌರವ ನೀಡುತ್ತಿದ್ದರು. ಯಾವುದೇ ಜಾತಿ ಆಧಾರದ ಮೇಲೆ ಶಂಕರಾಚಾರ್ಯರು ಸಂಸ್ಕೃತ ಕಲಿಕೆಗೆ ವಿರೋಧಿಸಿಲ್ಲ. ಈಗ ನಮಗೆ ಸಂಸ್ಕೃತದ ಮಹತ್ವವೂ ತಿಳಿದಿಲ್ಲ. ಸಂಸ್ಕೃತವನ್ನು ಅನ್ಯ ದೇಶದವರು ಬಳಸಿಕೊಂಡು ಅಭಿವೃದ್ಧಿ ಹೊಂದುತ್ತಿದ್ದಾರೆಯೇ ಹೊರತು, ಸಂಸ್ಕೃತದ ಉಗಮಸ್ಥಾನವಾದ ಭಾರತದಲ್ಲೇ ಅದರ ಮಹತ್ವ ತಿಳಿಯದೇ ಇರುವುದು ವಿಪರ್ಯಾಸ. ಶಾಲೆಗಳಲ್ಲಿ ಸಂಸ್ಕೃತ ಕಲಿಸುವುದು 'ಸೆಕ್ಯುಲರ್ ವ್ಯಾಧಿ'ಗಳಿಗೆ ಅಲರ್ಜಿ ಅನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದುಬಿಟ್ಟಿದೆ.

ಒಟ್ಟಾರೆ, ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಪರಿವೆಯೇ ಇಲ್ಲದೆ ದೇಶದಲ್ಲಿ ನಡೆಯುತ್ತಿರುವ ಅನ್ಯಾಯಗಳ ಬಗ್ಗೆ ಚಕಾರವೆತ್ತದೆ ಶಂಕರರನ್ನು ವಿನಾಕಾರಣ ವಿರೋಧಿಸುವ ಕೆಲ 'ಸಂಸ್ಕೃತ ಪಂಡಿತ', 'ಸೆಕ್ಯೂಲರಿಸ್ಟ್' ಗಳಿಂದ ಖಂಡಿತವಾಗಿಯೂ ಅಪಾಯ ಎದುರಾಗುವುದು ಖಂಡಿತ. ಇನ್ನಾದರೂ ನಾವು ಶಂಕರರ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆದರೆ ಕನಿಷ್ಠ ಭಾರತ ದೇಶವಾದರೂ ನಮಗೆ ಉಳಿಯುತ್ತದೆ. ಇಲ್ಲವಾದರೆ.........?

 

Author : ಶ್ರೀನಿವಾಸ ರಾವ್

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited