Untitled Document
Sign Up | Login    
ಬದಲಾಗುತ್ತಿದ್ದಾಳೆ ಹೆಣ್ಣು: ತೆರೆಸಿದ್ದಾಳೆ ಸಮಾಜದ ಕಣ್ಣು

ಹುಡುಗರಿಗಿಂತ ನಾವೇನು ಕಮ್ಮಿ?..

ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು, ಗುಲಾಮಿ ಇವಳಲ್ಲ, ಸಲಾಮು ಹೊಡೆಯೋಲ್ಲ... ಎನ್ನುವುದು ಶುಭಮಂಗಳ ಚಲನಚಿತ್ರದಲ್ಲಿ ಆರತಿ ಅಭಿನಯಿಸಿದ ಸುಂದರ ಹಾಡು. ಇಂದು ಈ ಹಾಡಿನ ಸಂದೇಶ ಸಾಕಾರವಾಗುತ್ತಿದೆ. ಮಹಿಳೆ ಎಚ್ಚೆತ್ತುಕೊಂಡಿದ್ದಾಳೆ. ತನ್ನ ಅಧಿಕಾರ ಮತ್ತು ಹಕ್ಕುಗಳು ಹಾಗೂ ಜೊತೆಯಲ್ಲಿ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಚೆನ್ನಾಗಿ ಅರಿತುಕೊಂಡಿದ್ದಾಳೆ ಮತ್ತು ನಿಭಾಯಿಸಿಕೊಂಡು ಬಂದಿದ್ದಾಳೆ.

ಮಹಿಳೆಯರು ಕಾಲಿಟ್ಟಿರುವ ಪ್ರತಿಯೊಂದು ಕ್ಷೇತ್ರದಲ್ಲೂ ಸಫಲತೆಯನ್ನು ತೋರಿಸಿಕೊಟ್ಟಿದ್ದಾಳೆ. ತನ್ನ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ಯಾವ ಅಮಿಷಕ್ಕೂ ಬಲಿಯಾಗದೆ, ದಕ್ಷತೆ ಎಂದರೇನು ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ. ಪೋಲಿಸ್ ಅಧಿಕಾರಿಯಾಗಿ, ವಕೀಲರಾಗಿ, ಸರಕಾರಿ ಅಧಿಕಾರಿಯಾಗಿ, ಕಂಪೆನಿ ಎಕ್ಸ್‌ಕ್ಯೂಟಿವ್ ಆಗಿ, ಬಹು ರಾಷ್ಟ್ರೀಯ ಕಂಪೆನಿಗಳಲ್ಲಿ ಚೆಯರ್‌ಮೆನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ, ಅಧ್ಯಾಪಕಿ-ಪ್ರೊಫೆಸರ್ ಆಗಿ, ರಾಜಕೀಯ ಪುಡಾರಿಯಾಗಿ ಯಶಸ್ವಿಯಾಗಿ ಮುನ್ನಡೆಯುತ್ತಾ ಸಮಾಜದಲ್ಲಿ ತನ್ನದೇ ಆದ ವಿಶಿಷ್ಟ ಪ್ರಭಾವವನ್ನು ತೋರಿಸಿ ಕೊಟ್ಟಿದ್ದಾಳೆ.

ಈ ಬಾರಿ ಐಎಎಸ್ ಪರೀಕ್ಷೆಯಲ್ಲಿ ಕಳೆದ ವರ್ಷದಂತೆ ಪುನಹ ಒಬ್ಬ ಮಹಿಳೆ ಟಾಪರ್ ಆಗಿ ಫಸ್ಟ್ ರಾಂಕ್ ಪಡೆದಿದ್ದಾಳೆ. 27ವರ್ಷ ಪ್ರಾಯದ ಕೇರಳದ ಹರಿತ ವಿ ಕುಮಾರ್ ಅವರು ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಎಕ್ಸಾಮ್ 2012 ರಲ್ಲಿ ಮೊದಲನೇ ರಾಂಕ್ ಪಡೆದಿದ್ದಾರೆ. ಇದು ಅವರದ್ದು ನಾಲ್ಕನೇ ಪ್ರಯತ್ನ. ನಾಲ್ಕು ವರ್ಷಗಳ ಹಿಂದೆ ಮೈನ್ ಎಕ್ಸಾಮ್‌ನಲ್ಲಿ ಕೇವಲ 18 ಅಂಕಗಳಿಂದ ಸೋತಿದ್ದರು. ಹಾಗಿದ್ದರೂ ಪ್ರಯತ್ನ ಬಿಡಲಿಲ್ಲ. ಈ ವರ್ಷ ಯಶಸ್ಸು ದೊರಕಿದೆ. ಇನ್ನೊಂದು ಉದಾಹರಣೆ ಗುಜರಾತಿನ ಕೋಮಲ್ ಪರ್ವೀನ್‌ಭಾಯಿ ಗನತ್ರ ಅವರದ್ದು. ಇವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 591ನೇ ರಾಂಕ್ ಪಡೆದಿದ್ದಾರೆ. ಐದು ವರ್ಷಗಳ ಹಿಂದೆ ಇವರಿಗೆ ಒಬ್ಬ ಓಖI ಜೊತೆಗೆ ವಿವಾಹವಾಗಿತ್ತು. ಆದರೆ ಮನೆಯಲ್ಲಿ ಹಣಕಾಸು ಸ್ಥಿತಿ ಸರಿಯಾಗಿಲ್ಲದ ಕಾರಣ ವರದಕ್ಷಿಣೆ ನೀಡಲಾಗಲಿಲ್ಲ. ಕೇವಲ 15 ದಿನಗಳಲ್ಲಿಯೇ ವಿವಾಹ ಮುರಿದು ಬಿತ್ತು. ಗಂಡನ ಮನೆಯವರು ಆಕೆಯನ್ನು ಮನೆಯಿಂದ ಹೊರಹಾಕಿದ್ದರು. ಇದೀಗ ಐದು ವರ್ಷಗಳ ಬಳಿಕ ಐಎಎಸ್ ಪಾಸ್ ಆಗಿದ್ದಾಳೆ. ಬಿಟ್ಟು ಹೋಗಿರುವ ಗಂಡನಿಗೆ ಚೆನ್ನಾಗಿ ಬುದ್ಧಿಕಲಿಸುತ್ತೇನೆ ಎಂದು ಹೇಳಿದ್ದಾಳೆ. ದೇವರು ಅವಳಿಗೆ ಎಲ್ಲಾ ಶಕ್ತಿಯನ್ನು ಕೊಡಲಿ ಎಂದು ಹಾರೈಸೋಣ.

ವಿದ್ಯೆ ಕಲಿಸಿದರೆ ಪೊರಕೆ ಹಿಡಿದ ಕೈಯಲ್ಲಿ ಕಂಪ್ಯೂಟರ್ ಹಿಡಿಯಲಾರರೆ?..
ಮಹಿಳೆಯರ ಮುನ್ನಡೆಯ ಈ ಬಿರುಗಾಳಿ ಸಮಾಜದಲ್ಲಿ ಸಾಕಷ್ಟು ಅಲ್ಲೋಲ-ಕಲ್ಲೋಲವನ್ನುಂಟುಮಾಡುತ್ತಿದೆ. ಮಹಿಳೆಯು ಗೃಹಿಣಿಯಾಗಿ, ಸತಿಯಾಗಿ ಮನೆಗೆ ಮಾತ್ರವೆ ಸೀಮಿತವಾಗಿದ್ದಾಳೆ ಎಂಬ ಶತಮಾನದ ಸಿದ್ಧಾಂತವನ್ನು ಬದಲಾಯಿಸಿದೆ. ಮಹಿಳೆಯರ ಈ ಪ್ರಗತಿಯನ್ನು ಎಷ್ಟೋ ಮಂದಿ ಪುರುಷರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಸೂಚಿಸುವ ಹಲವಾರು ನಿದರ್ಶನಗಳು ಸಮಾಜದಲ್ಲಿ ಕಂಡು ಬರುತ್ತಿದೆ. ಎಷ್ಟೋ ಮನೆಗಳಲ್ಲಿ ಪತ್ನಿಯ ವಿದ್ಯಾರ್ಹತೆ ಪತಿಗಿಂತ ಅಧಿಕವಾಗಿವೆ. ಇದರ ಲಾಭ ಪಡೆದುಕೊಂಡು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವುದಕ್ಕೆ ಬದಲಾಗಿ ಸಮಸ್ಯೆ/ವಿವಾದಗಳಿಗೆ ಕಾರಣವಾಗಿದೆ. ಪತ್ನಿಯ ವಿದ್ಯಾರ್ಹತೆಯನ್ನು ಸಹಿಸಲಾಗದೆ ಪತಿಯಂದಿರು ತೋರಿಸುವ ಅಸಮಾಧಾನಗಳು ಎಷ್ಟೋ ಕುಟುಂಬಗಳನ್ನು ಒಡೆದು ಹಾಕಿದೆ, ಹಲವಾರು ದಂಪತಿಗಳು ವಿವಾಹ ವಿಚ್ಛೇದನದ ಹಾದಿ ಹಿಡಿದಿದ್ದಾರೆ.
ಅಮ್ಮನ ಮಮತೆ ಇನ್ಯಾರಲ್ಲಿ ಕಾಣಲು ಸಾಧ್ಯ?..
ಇಂದು ಹೆಚ್ಚಿನ ಮನೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸದ ಇತಿಹಾಸವನ್ನು ಅವಲೋಕಿಸಿ ನೋಡಿದಾಗ ಮಹಿಳೆಯರು ಪುರುಷರನ್ನು ಮೀರಿಸಿರುವುದು ಕಂಡು ಬರುತ್ತಿದೆ. ಪ್ರತಿ ವರ್ಷ ಬಾಲಕಿಯರು ಬಾಲಕರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದುತ್ತಿದ್ದಾರೆ. ಗಂಡು ಮಕ್ಕಳ ವಿಧ್ಯಾಭ್ಯಾಸ 10ನೇ ತರಗತಿಯಲ್ಲಿ ಫೇಲ್ ಆಗುವುದು ಅಥವಾ ಡಿಗ್ರಿಯಲ್ಲಿ ಫೇಲ್ ಆಗುವುದರೊಂದಿಗೆ ನಿಂತು ಹೋಗುತ್ತದೆ. ಆದರೆ ಬಾಲಕಿಯರು ಒಂದೊಂದೇ ತರಗತಿಯಲ್ಲಿ ತೇರ್ಗಡೆ ಹೊಂದುತ್ತಾ ಹೆಚ್ಚು ಹೆಚ್ಚು ಅಂಕಗಳೊಂದಿಗೆ ಮುಂದೆ ಸಾಗುತ್ತಾ ತಮ್ಮ ಗುರಿಯನ್ನು ತಲುಪುತ್ತಾರೆ.

ಬೆಳೆದು ದೊಡ್ಡವರಾದ ಗಂಡು ಮಕ್ಕಳು ತಂದೆ-ತಾಯಿಗಳನ್ನು ನಿರ್ಲಕ್ಷಿಸಿದ ಅಥವಾ ಬೀದಿ ಪಾಲು ಮಾಡಿರುವ ಅನೇಕ ಉದಾಹರಣೆಯಿದೆ. ಆದರೆ ಹೆಣ್ಣು ಮಕ್ಕಳು ಹಾಗಲ್ಲ. ವೃದ್ಧರಾದ ತಂದೆ-ತಾಯಿಗಳಿಗೆ ಆಸರೆಯಾಗಿ ನಿಲ್ಲುತ್ತಾರೆ. ತನ್ನ ತಂದೆ-ತಾಯಿಗಳಿಗೆ ಸಹಾಯ ಮಾಡುವುದನ್ನು ಮುಂದುವರಿಸುವಲ್ಲಿ ಅಡ್ಡಿಯಾಗಬಾರದು ಎಂಬ ಷರತ್ತನ್ನು ಇಟ್ಟುಕೊಂಡೇ ವಿವಾಹವಾಗಿರುವ ಕನ್ಯೆಯರ ಹಲವಾರು ದೃಷ್ಟಾಂತಗಳಿವೆ. ಇಲ್ಲವಾದಲ್ಲಿ ಮದುವೆಯೇ ಆಗುವುದಿಲ್ಲ ಎಂಬ ತ್ಯಾಗವನ್ನೂ ಕೂಡಾ ಮಹಿಳೆಯರು ಮಾಡಿದ್ದಾರೆ. ಇತ್ತ ಪುರುಷರನ್ನು ನೋಡಿ. ಶ್ರೀಮಂತ ಸಂಬಂಧ ಸಿಕ್ಕಿದ ಒಡನೆಯೇ ತಂದೆ-ತಾಯಿಗಳನ್ನು ಕೈ ಬಿಟ್ಟು ಮಾವನ ಮನೆಯಲ್ಲಿ ಮನೆ-ಅಳಿಯನಾಗಿ ಬಿದ್ದಿರುವ ಅಥವಾ ತಂದೆ-ತಾಯಿಗಳಿಂದ ದೂರವಾಗಿ ಪ್ರತ್ಯೇಕ ಮನೆ ಮಾಡಿಕೊಂಡಿರುವ ಸಾವಿರಾರು ಉದಾಹರಣೆಗಳಿವೆ.

ಈ ಪ್ರಕಾರವಾಗಿ ಯಾವ ವಿಧದಿಂದ ನೋಡಿದರೂ ಹೆಣ್ಣು ಮಕ್ಕಳಿಂದ ಪ್ರಯೋಜನವೇ ಹೊರತು ಯಾವತ್ತೂ ಹಾನಿಯಾಗಲಾರದು. ಹಾಗಿದ್ದರೂ ಕೂಡಾ ಹೆಣ್ಣುಮಗು ಹುಟ್ಟಿನಿಂದಲೇ ತಾರತಮ್ಯ ಭಾವನೆಗಳಿಗೆ ಬಲಿಯಾಗುತ್ತಿದ್ದಾಳೆ. ಕೆಲವು ಹೆಣ್ಣುಮಕ್ಕಳನ್ನು ಭ್ರೂಣಾವಸ್ಥೆಯಲ್ಲೇ ಕೊಂದುಹಾಕಿ ಈ ಪೃಥ್ವಿಗೆ ಬರುವುದಕ್ಕೆಯೇ ಬಿಡುತ್ತಿಲ್ಲ. ಅಲ್ಟ್ರಾ ಸೌಂಡ್ ಟೆಸ್ಟ್ ಮೂಲಕ ಗಂಡೋ/ಹೆಣ್ಣೋ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ ಮತ್ತು ಹೆಣ್ಣೆಂದು ತಿಳಿದು ಬಂದಲ್ಲಿ ಮಗುವನ್ನು ಗರ್ಭದಲ್ಲೇ ಹೊಸಕಿ ಹಾಕಲಾಗುತ್ತದೆ. ಜನಿಸಿದ ಬಳಿಕವೂ ಕೂಡಾ ಗಂಡು ಮಕ್ಕಳ ಮೇಲೆ ವಿಶೇಷ ಅಕ್ಕರೆ ತೋರಿಸುವುದು. ಹೆಣ್ಣಿಗಾದರೆ ಸರಕಾರಿ ಶಾಲೆ ಸಾಕು, ಗಂಡು ಮಗುವಿಗಾದರೆ ಡೊನೇಷನ್ ಕೊಟ್ಟು ಒಳ್ಳೆಯ ಖಾಸಗಿ/ಪ್ರತಿಷ್ಟಿತ ಶಾಲೆಗೆ ಸೇರಿಸಲಾಗುತ್ತದೆ. ಈ ಪ್ರಕಾರವಾಗಿ ಹೆಣ್ಣು ಮಗುವಿನ ಮೇಲೆ ಭೇಧ-ಭಾವ ಬಾಲ್ಯದಿಂದಲೇ ಪ್ರಾರಂಭವಾಗಿರುತ್ತದೆ. ಯುವತಿಯ ಬಗ್ಗೆ ಸಮಾಜದಲ್ಲಿ ಏನೆಲ್ಲಾ ಅಪಾಯಗಳಿವೆ ಎಂಬುದನ್ನು ನೀವೇ ಊಹಿಸಬಹುದು.
ಆದ್ದರಿಂದ, ಹೆಣ್ಣು-ಹೆಂಗಸರ ಬಗ್ಗೆ ಗಂಡಸರು ಮತ್ತು ಒಟ್ಟಾರೆಯಾಗಿ ಸಮಾಜ ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ. ಆಕೆಯನ್ನು ತಾತ್ಸಾರದಿಂದ ನೋಡುವುದನ್ನು ನಿಲ್ಲಿಸಬೇಕು. ಮಹಿಳೆಯನ್ನು ಬಲಾತ್ಕಾರ ಮಾಡಿದ ಆರೋಪಿಗೆ ಉಗ್ರ ಶಿಕ್ಷೆ ಸಿಗಬೇಕು ಮಾತ್ರವಲ್ಲದೆ ಅಂತವರ ಮುಖಕ್ಕೆ ಮಸಿ ಬಳಿದು ರಸ್ತೆಯಲ್ಲಿ ಮೆರವಣಿಗೆ ಮಾಡಬೇಕು. ಮಹಿಳೆಯರ ಮೀಸಲಾತಿ ಕಾಯಿದೆ ಸಂಸತ್ತಿನಲ್ಲಿ ತಕ್ಷಣವೇ ಅಂಗೀಕಾರ ಪಡೆದು ಶಾಸನವಾಗಬೇಕು. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯ ಪ್ರವೇಶಿಸಬೇಕು. ಅವರನ್ನು ಸಮಾನತೆ/ಗೌರವದಿಂದ ಕಾಣಬೇಕು. ದೇವಿಯಂತೆ ಪೂಜಿಸುತ್ತೇವೆ ಎಂದು ಸುಳ್ಳು ಹೇಳಬೇಡಿ. ಮಾನವಳಂತೆ ಗೌರವ, ನೆಮ್ಮದಿಯಿಂದ ಬಾಳಲು ಬಿಡಿ, ಅಷ್ಟೇ ಸಾಕು.

 

Author : ಎ.ವಿ.ಚಿತ್ತರಂಜನ್ ದಾಸ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited