Untitled Document
Sign Up | Login    
ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ:ಪೋಷಕರ ಅಸಮಾಧಾನ

ಸಾಂದರ್ಭಿಕ ಚಿತ್ರ

ಪೂರ್ವ ಪ್ರಾಥಮಿಕ ಅಥವಾ ಒಂದನೆ ತರಗತಿಗಳಿಗೆ ಕಡ್ಡಾಯ ಶಿಕ್ಷಣ ಕಾಯ್ದೆ (ಆರ್ ಟಿ ಇ)ಅಡಿಯಲ್ಲಿ ಪ್ರವೇಶ ನೀಡಲಾಗುತ್ತದೆಯಾದರೂ ಖಾಸಗಿ ಶಾಲೆಗಳು ಇತರ ತರಗತಿಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸಿವೆ. ಪ್ರತಿ ವರ್ಷದ ದಾಖಲಾತಿ ಸಂದರ್ಭದಲ್ಲಿ ಪೋಷಕರು ಪಾವತಿಸಬೇಕಾದ ವಾರ್ಷಿಕ ಶುಲ್ಕವನ್ನು ಅರ್ಧಪಟ್ಟು ಹೆಚ್ಚಿಸಿವೆ. ನಗರದ ಹಲವು ಖಾಸಗಿ ಶಾಲೆಗಳು ಪ್ರವೇಶ ಶುಲ್ಕ ಹೆಚ್ಚಿಸಿರುವುದು ಪೋಷಕರ ಪರದಾಟಕ್ಕೆ ಕಾರಣವಾಗಿದೆ.

ಖಾಸಗಿ ಶಾಲೆಗಳಲ್ಲಿ ಆರ್ ಟಿ ಇ ಅಡಿ ಶೇ.25ರಷ್ಟು ಸೀಟುಗಳನ್ನು ಉಚಿತವಾಗಿ ಹಂಚುವುದರಿಂದ ಆರ್ಥಿಕ ಹೊರೆ ಹೆಚ್ಚುತ್ತಿದೆ ಎಂದು ಕ್ಯಾತೆ ತೆಗೆಯುತ್ತಿದ್ದ ಖಾಸಗಿ ಶಾಲೆಗಳು ಈಗ ಈ ನಷ್ಟವನ್ನು ಭರಿಸಲು ಉಳಿದ ಮಕ್ಕಳ ಪ್ರವೇಶ ಶುಲ್ಕವನ್ನು ಹೆಚ್ಚಿಸಿ ಪೋಷಕರಿಗೆ ಬರೆ ಎಳೆಯುತ್ತಿವೆ.

ಬೆಂಗಳೂರಿನ ಹಲವು ಖಾಸಗಿ ಶಾಲೆಗಳು ಈ ವರ್ಷದ ಪ್ರವೇಶ ಶುಲ್ಕವನ್ನು ಶೇ.40ರಷ್ಟು ಹೆಚ್ಚಿಸಿದ್ದರೆ ಇನ್ನು ಕೆಲ ಶಾಲೆಗಳು ಶೇ.30ರಷ್ಟು ಹೆಚ್ಚಿಸಿವೆ. ಇದರ ಜೊತೆಗೆ ಮಾಸಿಕ ಶುಲ್ಕವನ್ನೂ ದುಪ್ಪಟ್ಟುಗೊಳಿಸಿವೆ. ಅಲ್ಲದೇ ಈ ಹೆಚ್ಚುವರಿ ಶುಲ್ಕವನ್ನು ಚೆಕ್ ಅಥವಾ ಡಿದಿ ರೂಪದಲ್ಲಲ್ಲದೇ ನಗದು ರೂಪದಲ್ಲೇ ನೀಡಬೆಕು ಎಂದು ಈ ಶಿಕ್ಷಣ ಸಂಸ್ಥೆಗಳು ಹೇಳುತ್ತಿವೆ.
ಕೆಲ ಪೋಷಕರ ಪ್ರತಿಕ್ರಿಯೆ:

ಬರ ಬರುತ್ತಾ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುವುದೇ ಕಷ್ಟಕರವಾಗಿದೆ. ವರ್ಷದಿಂದ ವರ್ಷಕ್ಕೆ ಮನಬಂದಂತೆ ಫೀಸ್ ತೆಗೆದುಕೊಳ್ಳುತ್ತಿದ್ದಾರೆ ಇದರಿಂದ ನಮ್ಮಂತ ಮಧ್ಯಮ ವರ್ಗದ ಜನರಿಗೆ ತುಂಬಾ ಕಷ್ಟವಾಗುತ್ತಿದೆ ಎಂದು ಸತೀಶ್ ಎಂ ಎಸ್ ತಮ್ಮ ಅಳಲು ತೋಡಿಕೊಂಡರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಯೊಬ್ಬರ ಪಾಲಕ ಸದಾಶಿವ, ಹೆಚ್ಚುವರಿ ಶುಲ್ಕ ಕಟ್ಟಲಾಗದಿದ್ದರೆ ನಿಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಿ ಎಂದು ಕಡಾ ಖಂಡಿತವಾಗಿ ಹೇಳುತ್ತಾರೆ. ಒಂದು ವರ್ಷದಿಂದ ಇನ್ನೊಂಡು ವರ್ಷಕ್ಕೆ ಪ್ರವೇಶ ಶುಲ್ಕ ಹೆಚ್ಚಿಸಿ, ಪೋಷಕರಿಂದ ಖಾಸಗಿ ಶಾಲೆಗಳು ಲೂಟಿ ಮಾಡುತ್ತಿವೆ. ಬರ ಬರುತ್ತಾ ಮಕ್ಕಳಿಗೆ ಶಿಕ್ಷಣ ನೀಡುವುದೇ ಕಷ್ಟವಾಗಿದೆ ಎಂದು ಅಲವತ್ತುಕೊಂಡರು.

ಇದ್ದಕ್ಕಿದ್ದಂತೆ ಮನಬಂದಂತೆ ಪ್ರವೇಶ ಶುಲ್ಕಗಳನ್ನು ಹೆಚ್ಚಿಸಿರುವ ಬಗ್ಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸಮರ್ಥಿಸಿಕೊಳ್ಳುತ್ತಿವೆ. ಆರ್ ಟಿ ಇ ಅಡಿ ಶೇ. 25ರಷ್ಟು ಮೀಸಲಾತಿ ಸೀಟುಗಳಿಗೆ ಪ್ರವೇಶ ಪಡೆದ ಮಕ್ಕಳಿಗೆ ಸರ್ಕಾರ ನೀಡುವ ಹಣ ಸಾಲದು. ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ, ಖರ್ಚು ಹೆಚ್ಚಾಗಿರುತ್ತವೆ. ಆರ್ ಟಿ ಇ ನೀಡುವ ಶುಲ್ಕದ ಬಗ್ಗೆ ಪರಿಶೀಲಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ ಹೀಗಾಗಿ ಶುಲ್ಕ ಹೆಚ್ಚಳ ಅನಿವಾರ್ಯ ಎಂಬುದು ಅವರ ವಾದ.

ಒಟ್ಟಿನಲ್ಲಿ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳದಿಂದಾಗಿ ಶುಲ್ಕ ಕಟ್ಟಲು ಪೋಷಕರು ಸಂಕಟ ಪಡುತ್ತಿದ್ದರೆ, ಆಡಳಿತ ಮಂಡಳಿ ಹೆಚ್ಚು ಶುಲ್ಕ ವಸೂಲಿಯಿಂದ ಸಂತಸ ಪಡುತ್ತಿದೆ ಎಂಬಂತಾಗಿದೆ.

 

Author : ಚಂದ್ರಲೇಖಾ ರಾಕೇಶ್

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited