Untitled Document
Sign Up | Login    
ಹನಿಯೂರಿನ ಮೂಕಮಾರಮ್ಮ ಅದ್ದೂರಿ ಮಹೋತ್ಸವ


'ಗೊಂಬೆಗಳಬೀಡು' ಎನಿಸಿದ ಚನ್ನಪಟ್ಟಣ, ನಾಡಿನ ನೈಸರ್ಗಿಕ ಸಂಪತ್ತಿನ ಮೂಲನೆಲೆಗಳಲ್ಲಿ ಒಂದು. ಅಲ್ಲದೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯಲ್ಲೂ ಚನ್ನಪಟ್ಟಣ ಸದಾ ಮುಂದಿರುವ ತಾಲೂಕು. ಅದರಲ್ಲೂ ಧಾರ್ಮಿಕವಾಗಿ ಅನೇಕ ವಿಶಿಷ್ಟತೆಯುಳ್ಳ ದೈವಗಳ ಸಂಗಮ ಕೇಂದ್ರವೂ ಹೌದು. ಅದರಲ್ಲೂ ಈ ತಾಲೂಕಿನಲ್ಲಿರುವ ಬೆಟ್ಟ-ಗುಡ್ಡಗಳು 'ಬೆಟ್ಟದ ದೇವರ ನೆಲೆ'ಗೆ ಹೇಳಿಮಾಡಿಸಿದಂತಹವು.

ಈ ಬೆಟ್ಟದ ದೇವರುಗಳಲ್ಲಿ ಬಹುತೇಕ ಗಂಡುದೇವತೆಗಳಿಗೇ ಪ್ರಾಶಸ್ತ್ಯ. ಆದರೆ, ಹೆಣ್ಣು ದೇವತೆಗಳ ಹಾಡು-ಪಾಡೇನು? ಎಂಬ ಪ್ರಶ್ನೆ ಮನದಲ್ಲಿ ಮೂಡುವುದು ಸಹಜ. ಅಂತಹ ಪ್ರಶ್ನೆಗೂ ಇಲ್ಲಿ ಉತ್ತರವಿದೆ. ಚನ್ನಪಟ್ಟಣ ತಾಲೂಕಿನಾದ್ಯಂತ ಗಂಡುದೇವತೆಗಳಿಗೆಷ್ಟು ಪ್ರಾಮುಖ್ಯತೆಯಿದೆಯೋ ಅಷ್ಟೇ ಪ್ರಾಮುಖ್ಯತೆ ಹೆಣ್ಣುದೇವತೆಗಳಿಗಿದೆ. ಅಂತಹ ಹೆಣ್ಣುದೇವತೆಗಳನ್ನು ಹೆಸರಿಸಬಹುದಾದಲ್ಲಿ; ಹುಣಸನಹಳ್ಳಿ ಬಿಸಲಮ್ಮ, ಬೈರಶೆಟ್ಟಿಹಳ್ಳಿದೊಡ್ಡಿಯ ದೊಡ್ಡಮ್ಮತಾಯಿ, ಸಿಂಗರಾಜಪುರ-ಕೋಡಂಬಳ್ಳಿ ರಸ್ತೆಯ ದಂಡಿನಮಾರಮ್ಮ, ಕಬ್ಬಾಳಿನ ಕಬ್ಬಾಳಮ್ಮದೇವಿ, ಚಕ್ಕೆರೆಯ ಚೌಡಮ್ಮದೇವಿ, ಬೆಳಕೆರೆಯ ಮಂಚಮ್ಮದೇವಿ, ಮತ್ತಿತರೆ ದೇವತೆಗಳನ್ನು ಹೆಸರಿಸಬಹುದು.

ಅದರಲ್ಲೂ ಪ್ರತಿಗ್ರಾಮದಲ್ಲೂ ಇರುವ ಗ್ರಾಮದೇವತೆ ಮಾರಮ್ಮದೇವಿಯನ್ನು ಇಲ್ಲಿ ಉಲ್ಲೇಖಿಸಬಹುದು. ಆದರೆ, ಎಲ್ಲಾ ಗ್ರಾಮಗಳಲ್ಲಿರುವ ಮಾರಮ್ಮ ದೇವತೆಗಿಂತಲೂ ಇದೇ ತಾಲೂಕಿನ ಹನಿಯೂರಿನ ಗ್ರಾಮದೇವತೆ ಮಾರಮ್ಮ ವಿಶಿಷ್ಟತೆಯುಳ್ಳ ದೇವತೆ. ಅದೇನೆಂದರೆ, ಆಕೆ 'ಮೂಕಿ' ಎಂಬುದೇ ವಿಶೇಷ. ಅದಕ್ಕಾಗಿ ಆ ದೇವತೆಯನ್ನು'"ಮೂಕಮಾರಮ್ಮ, ಮೂಗುಮಾರಿ, ಮೂಕಿಮಾರಿ' ಎಂಬಿತ್ಯಾದಿ ಹೆಸರಿನಿಂದ ಭಕ್ತರು ಕರೆಯುತ್ತಾರೆ.

ಏನಿದು ವಿಶೇಷ:

ಊರ ಜನರನ್ನು ಭಯಾನಕ, ಮೃತ್ಯುಕಾರಕ ರೋಗಗಳಿಂದ ರಕ್ಷಿಸಲೆನ್ನುವ ಉದ್ದೇಶದಿಂದ ಎಲ್ಲಾ ಗ್ರಾಮಗಳಲ್ಲೂ ಮಾರಮ್ಮ ದೇವಿಯನ್ನು ಪ್ರತಿಷ್ಠಾಪಿಸಿ, ಪೂಜಿಸುವುದು ಸಾಮಾನ್ಯ. ಹಾಗಾಗಿ, ಪ್ರತಿಗ್ರಾಮದಲ್ಲೂ 'ಮಾರಮ್ಮದೇವಿಯ ದೇವಸ್ಥಾನ' ಇರುವುದನ್ನು ಕಾಣಬಹುದು. ಆದರೆ, ಈ ಎಲ್ಲಾ ದೇವತೆಗಳು, ಪೂಜಾರಿಯ ಮೈಮೇಲೆ ಬಂದು, ಭಕ್ತರ ಕಷ್ಟ-ನಷ್ಟಗಳನ್ನು ಕೇಳಿ, ಪರಿಹರಿಸುವುದು ಸಾಮಾನ್ಯ ಸಂಗತಿ. ಆದರೆ, ನಾನು ಸಂಶೋಧಿಸಿದಂತೆ, ಇತರೆಡೆಯಲ್ಲಿನ ಮಾರಮ್ಮನಂತೆ, ಹನಿಯೂರಿನ ಗ್ರಾಮದೇವತೆ ಮಾರಮ್ಮ, ಮಾತನಾಡುವುದಿಲ್ಲ. ಬರೀ ಸನ್ನೆಯಲ್ಲಿಯೇ ಭಕ್ತರ ಕಷ್ಟ, ಬೇಡಿಕೆಯನ್ನು ಈಡೇರಿಸುತ್ತಾಳೆ. ಕೆಲವು ಸಂದರ್ಭಗಳಲ್ಲಿ ತಪ್ಪೆಸಗಿದವರು ಬಂದಲ್ಲಿ ಅವರಿಗೆ ಛಡಿಯೇಟು ಕೊಡುವುದನ್ನು ಕಾಣಬಹುದು. ಅಲ್ಲದೆ, ಇತರೆ ಗ್ರಾಮದ ಮಾರಮ್ಮ ದೇವಿಯ ಪೂಜಾರರು ಆಚರಿಸದ ಕೆಲವು ನಿಯಮಗಳನ್ನು ಹನಿಯೂರಿನ ಮಾರಮ್ಮದೇವಿಯ ಪೂಜಾರಿ ಅನುಸರಿಸುತ್ತಾರೆ. ದೇವಿಯನ್ನು ಪೂಜಿಸುವಾಗ (ತನ್ನ ಮುಖಕ್ಕೆ ಗದ್ದದಿಂದ ಹಿಡಿದು ಮೇಲ್ಮೂಗಿನವರೆಗೂ ಮಾತನಾಡಲಾಗದಂತೆ ಬಟ್ಟೆ ಕಟ್ಟಿಕೊಳ್ಳುತ್ತಾರೆ) ಮೈಮೇಲೆ ಬಂದಾಗ ಯಾವುದೇ ಮಾತಿಲ್ಲದೆ, ಕೇವಲ ಸನ್ನೆಯಲ್ಲಿಯೇ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. ಹಾಗಾಗಿ, ಹನಿಯೂರಿನ 'ಮೂಕಮಾರಮ್ಮದೇವಿ' ವಿಶಿಷ್ಟವೆನಿಸುತ್ತಾಳೆ.

ಈ ಕುರಿತು, ಗ್ರಾಮದ ಹಿರಿಯರಾದ ಗುಡ್ಡೇಗೌಡರನ್ನು ಕೇಳಿದರೆ, ಅವರು ಹೀಗೆನ್ನುತ್ತಾರೆ... ಪುರಾಣದಲ್ಲಿ ಒಮ್ಮೆ ಶಿವನನ್ನು ಕುರಿತು ಲಂಕೇಶ್ವರನಾದ ರಾವಣನು ತಪಸ್ಸನಾಚರಿಸುತ್ತಿರುತ್ತಾನೆ. ಆ ಸಂದರ್ಭದಲ್ಲಿ ಪಾರ್ವತಿಸಮೇತ ಬಂದ ಶಿವನನ್ನು ಕುರಿತು, ತನ್ನ ಉದ್ದೇಶವನ್ನೇ ಮರೆತು ಸೌಂದರ್ಯವತಿಯಾದ ಪಾರ್ವತಿಯನ್ನೇ ನನಗೆ ಕೊಡುವಂತೆ ಕೇಳುತ್ತಾನೆ. ಆಗ ಭಕ್ತರ ಇಚ್ಛೆಯನ್ನು ಪೂರೈಸಲು ಶಿವ, ಪಾರ್ವತಿಯನ್ನು ರಾವಣನ ಹಿಂದೆ ಕಳುಹಿಸುತ್ತಾನೆ. ಹೀಗೆ, ರಾವಣ ಮುಂದೆ, ಮನಸಿಲ್ಲದ ಮನಸಿನಲ್ಲಿ ಪಾರ್ವತಿ ರಾವಣನ ಹಿಂದೆ ಹೋಗುತ್ತಿರುತ್ತಾರೆ. ಆಗ ಪಾರ್ವತಿ ಬರುತ್ತಿದ್ದಾಳೆಯೋ ಇಲ್ಲವೋ ಎಂದು ತಿರುಗಿ-ತಿರುಗಿ ನೋಡಲು, ಪ್ರತಿಸಲವೂ ಒಂದೊಂದು ರೀತಿಯಲ್ಲಿ ಪಾರ್ವತಿ ರಾವಣನಿಗೆ ಕಾಣಿಸುತ್ತಾಳೆ. ಒಮ್ಮೆ ಕಾಳಿ, ಇನ್ನೊಮ್ಮೆ ಭದ್ರಕಾಳಿ, ಮತ್ತೊಮ್ಮೆ ಮಾರಮ್ಮ...ಹೀಗಿರುವಾಗ ರಾವಣ ಭಯಗೊಂಡು ಅವಳನ್ನು ಶಿವನ ಬಳಿಗೆ ಹಿಂದಿರುಗಿಸಲು ಬರುತ್ತಾನೆ.

ಆದರೆ, ಇದನ್ನು ಒಪ್ಪದ ಶಿವ, ಒಮ್ಮೆ ಕೊಟ್ಟ ವರವನ್ನು ವಾಪಾಸು ಪಡೆಯುವುದಿಲ್ಲವೆನ್ನುತ್ತಾನೆ. ಆಗ ಮತ್ತೊಂದು ಉಪಾಯವನ್ನು ತಿಳಿಸಿ, ಪಾರ್ವತಿಯನ್ನು ತನ್ನೊಡನೆ ಕರೆದೊಯ್ಯಲು ತಿಳಿಸುತ್ತಾನೆ. ಅದೇನೆಂದರೆ, ನೀನು ಪಾರ್ವತಿಯ ಕೈಯನ್ನು ಹಿಡಿದುಕೊಂಡು, ಮಾತನಾಡಿಸುತ್ತಾ ಕರೆದೊಯ್ಯಿ ಎನ್ನುತ್ತಾನೆ. ಹಾಗೆ ಮಾತಾಡುತ್ತಾ ಸಾಗಲು, ಅವಳು ಏನೊಂದೂ ಮಾತನಾಡದೆ ರಾವಣನಿಗೆ ಕೋಪಬರುವಂತೆ ಮಾಡುತ್ತಾಳೆ. ಆಗ ರಾವಣ ಸಿಟ್ಟಿಗೆದ್ದು ಈ ಮೂಕಮಾರಿಯನ್ನು ತನ್ನ ಅರಮನೆಗೆ ಕರೆದೊಯ್ಯುತ್ತಾನೆ. ನಂತರ, ಹೇಗಪ್ಪಾ ಸಂತೈಸಿ, ಮಾತನಾಡಿಸೋದು? ಎಂದು ಚಿಂತಿಸುತ್ತಾ, ಈ ಮೂಗಿಯನ್ನು ಊರ ಜನರಿಂದ ಪೂಜಿಸಿ, ಅವಳನ್ನು ಒಲಿಸಿಕೊಳ್ಳಲು ಯೋಚಿಸಿ, ಪ್ರತಿಗ್ರಾಮಗಳಲ್ಲಿ ಮಾರಮ್ಮ ದೇವಾಲಯ ನಿರ್ಮಿಸುವಂತೆ ಆಜ್ಞಾಪಿಸುತ್ತಾನೆ. ಇದಾಗಿ ಕೆಲವರುಷಗಳ ಬಳಿಕ ಕೆಲ ಗ್ರಾಮಸ್ಥರ ಪೂಜೆಗೆ ಒಲಿದ ಪಾರ್ವತಿ ಮಾತನಾಡಿ, ಭಕ್ತರನ್ನು ಕಾಪಾಡುತ್ತಾಳೆ. ಆದರೆ, ರಾವಣನ ಮನೆಯಲ್ಲಿದ್ದ ಪಾರ್ವತಿ ಮಾತ್ರ ಮೂಕಿಯಾಗಿಯೇ ಇರುತ್ತಾಳೆ. ಆ ಮೂಕಿಯೇ ನಮ್ಮೂರ 'ಮೂಗುಮಾರಮ್ಮ' ಎನ್ನುತ್ತಾರವರು.

ಇಂತಹ ಪೌರಾಣಿಕ ಹಿನ್ನೆಲೆಯುಳ್ಳ ಮೂಗುಮಾರಮ್ಮ ದೇವಿಯ ಮಹೋತ್ಸವವನ್ನು ಹನಿಯೂರು ಗ್ರಾಮಸ್ಥರು ಎರಡು ವರ್ಷಗಳಿಗೊಮ್ಮೆ 4 ದಿನಗಳ ಕಾಲ (ಇದೇ ಮೇ ತಿಂಗಳ 9 ರಿಂದ 13 ನೇ ತಾರೀಕಿನವರೆಗೂ) ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

-9ನೇ ತಾರೀಕಿನಂದು ಬೆಳಿಗ್ಗೆ ಮಾರಮ್ಮದೇವಿಯ ಆರಂಭಿಕ ಮಹಾಪೂಜೆ, ಅದೇ ಸಂಜೆ ಸುತ್ತಮುತ್ತಲ ಊರುಗಳಿಂದ ಕೊಂಡಕ್ಕೆ 'ಎಳವಾರ' ಬರುತ್ತದೆ.
-1೦ ನೇ ತಾರೀಕು ಮಂಗಳವಾರ 'ಕೊಂಡ ಹಾಯುವುದು', ನಂತರ ದೇವಿಗೆ ಪೂಜೆ ಸಲ್ಲಿಸಿ, ತಂಪನ್ನು ನೀಡುವುದು(ಪಾನಕ ಹಂಚುವುದು) ಸಂಜೆಗೆ ಪಟ್ಟಲದಮ್ಮದೇವಿಗೆ ಪೂಜೆ ಇರುತ್ತದೆ.
-11ನೇ ತಾರೀಕು ಬುಧವಾರ ಸಂಜೆ, ನಮ್ಮೂರ ಆರಾಧ್ಯದೈವ ಶ್ರೀಗವಿರಂಗಸ್ವಾಮಿ ದೇವರನ್ನು, ಮಾರಮ್ಮದೇವಿಯ ಪೂಜಾಕುಣಿತ, ಕರಗ ದೊಂದಿಗೆ ಪಲ್ಲಕ್ಕಿಯಲ್ಲಿ ಊರತುಂಬೆಲ್ಲಾ ಅಹೋರಾತ್ರಿ ಮೆರವಣಿಗೆ ಮಾಡುವುದು.
-12 ನೇ ತಾರೀಕು ಗುರುವಾರ ಬೆಳಿಗ್ಗೆ, ಮೂಗುಮಾರಮ್ಮ ದೇವಿಯ ಶ್ರೇಷ್ಟ ಪೂಜಾವಿಧಿಗಳು ಆರಂಭ. ಅಲ್ಲದೆ ಉತ್ಸವದ ಪ್ರಯುಕ್ತ ಗ್ರಾಮಸ್ಥರಿಗೆ ವಿವಿಧ ಗ್ರಾಮೀಣ ಆಟೋಟ ಸ್ಪರ್ಧೆಗಳು ನಡೆಯುವವು.
-13 ನೇ ತಾರೀಕು ಶುಕ್ರವಾರ "ನಾಡಮಾರಮ್ಮದೇವಿ"ಗೆ ಬಲಿಕೊಡುವುದು. ಮತ್ತು ದೇವಿಯ ಉತ್ಸವದಲ್ಲಿ ಪಾಲ್ಗೊಂಡವರೆಲ್ಲರಿಗೂ ಸಾಮೂಹಿಕ ಪ್ರಸಾದ ಮತ್ತು ಭೋಜನದ ವ್ಯವಸ್ಥೆ. ಅದೇ ಸಂಜೆ "ನಾಡಮಾರಮ್ಮ"ದೇವಿಯನ್ನು ಊರಿನ ಸರಹದ್ದಿನ ಆಚೆಗೆ ಕೊಂಡೊಯ್ದು ಇಡುವುದು. ಆ ಮೂಲಕ ಉತ್ಸವಕ್ಕೆ ಮಂಗಳ.
ಓಕೆ, ಇಂದಿನ ಒತ್ತಡದ ಜೀವನದ ನಡುವೆ ಕಳೆದುಹೋಗುತ್ತಿರುವ ನಾವೆಲ್ಲಾ ಜಾನಪದ ಸಂಸ್ಕೃತಿಯನ್ನು ತಿಳಿಸಿಕೊಡುವ ಇಂತಹ ಉತ್ಸವಗಳಲ್ಲಿ ಪಾಲ್ಗೊಳ್ಳೋಣ. ಬನ್ನಿ, ನಮ್ಮೂರಿಗೆ ಮೂಗುಮಾರಮ್ಮದೇವಿಯ ಕೃಪೆಗೆ ಪಾತ್ರರಾಗುವುದರ ಜೊತೆಗೆ ಸಮುದ್ರಮಟ್ಟದಿಂದ ಸುಮಾರು 36೦೦ ಅಡಿ ಎತ್ತರವಿರುವ ಬೃಹತ್ ಏಕಶಿಲಾ ಬೆಟ್ಟ 'ಶ್ರೀಗವಿಂಗಸ್ವಾಮಿ ಬೆಟ್ಟ'ವನ್ನು ನೋಡಬಹುದು. ಇದು ಧಾರ್ಮಿಕಾಸಕ್ತರಿಗೂ ಚಾರಣಿಗರಿಗೂ ಹೇಳಿಮಾಡಿಸಿದಂತಿದೆ. ಇದಲ್ಲದೆ, ಕಬ್ಬಾಳಮ್ಮದೇವಾಲಯ, ಕಬ್ಬಾಳು ದುರ್ಗವನ್ನೂ ನೋಡಬಹುದು. ಹಾಗೆಯೇ ಪ್ರಸಿದ್ಧ ನಿಸರ್ಗಧಾಮಗಳಾದ ಮೇಕೆದಾಟು-ಸಂಗಮ ಮತ್ತು ವನ್ಯಧಾಮವೆನಿಸಿದ ಮುತ್ತತ್ತಿ ಇಲ್ಲಿಂದ 25 ಕಿ.ಮೀ.ದೂರದಲ್ಲಿದೆ.

ಇಲ್ಲಿಗೆ ತಲುಪುವುದು ಹೇಗೆ:

ಅಂದಹಾಗೆ, ಹನಿಯೂರಿಗೆ ಬರಬೇಕಾದರೆ, ನೀವು ಚನ್ನಪಟ್ಟಣದಿಂದ ಬರುವುದಾದರೆ, ಸಾತನೂರು-ಚನ್ನಪಟ್ಟಣ ರಸ್ತೆಯಲ್ಲಿ (ಹೊಂಗನೂರಿನಲ್ಲಿ ಎಡಕ್ಕೆ) ಸುಮಾರು 15 ಕಿ.ಮೀ. ಕ್ರಮಿಸಬೇಕು. ಕನಕಪುರ ರಸ್ತೆಯ ಕಡೆಯಿಂದ ಬರುವುದಾದರೆ, ಸಾತನೂರಿನಿಂದ ಚನ್ನಪಟ್ಟಣ-ಸಾತನೂರು ರಸ್ತೆಯಲ್ಲಿ ಸುಮಾರು 8 ಕಿ.ಮೀ. ದೂರದಲ್ಲಿದೆ.

ಸರಿ, ಬನ್ನಿ. ನಿಮಗಾಗಿ ನಾವೆಲ್ಲಾ ಆದರದಿಂದ ಸ್ವಾಗತಿಸಲು ಕಾಯುತ್ತಿರುತ್ತೇವೆ.

 

Author : ಹನಿಯೂರು ಚಂದ್ರೇಗೌಡ. ನಾಗದೇವನಹಳ್ಳಿ,

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited