Untitled Document
Sign Up | Login    
ರಾಮನವಮಿಯ ನಿಮಿತ್ತ ರಾಮನ ಬಗ್ಗೆ ವಿಶೇಷ ಮಾಹಿತಿ


ಶ್ರೀರಾಮನವಮಿ :

ಶ್ರೀ ವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮಪ್ರಿತ್ಯರ್ಥವಾಗಿ ಶ್ರೀರಾಮನವಮಿಯನ್ನು ಆಚರಿಸುತ್ತಾರೆ. ‘ಚೈತ್ರ ಶುಕ್ಲ ನವಮಿಯನ್ನು ರಾಮನವಮಿ ಎನ್ನುತ್ತಾರೆ. ಈ ದಿನ ಪುಷ್ಯ ನಕ್ಷತ್ರದಲ್ಲಿ, ಮಧ್ಯಾಹ್ನ ಕಾಲದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಪಂಚಗ್ರಹಗಳಿದ್ದಾಗ, ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನನವಾಯಿತು. ಅನೇಕ ರಾಮಮಂದಿರಗಳಲ್ಲಿ ಚೈತ್ರ ಶುಕ್ಲ ಪಾಡ್ಯದಿಂದ ಒಂಬತ್ತು ದಿನಗಳ ಕಾಲ ಈ ಉತ್ಸವವು ಜರಗುತ್ತದೆ. ರಾಮಾಯಣದ ಪಾರಾಯಣ, ಹರಿಕಥೆ, ಕೀರ್ತನೆಗಳ ಆಯೋಜನೆ ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರಗಳು, ರಥದಲ್ಲಿ ಮೆರವಣಿಗೆ ಮುಂತಾದ ವಿಧಗಳಲ್ಲಿ ಈ ಉತ್ಸವವು ಆಚರಿಸಲ್ಪಡುತ್ತದೆ. ನವಮಿಯಂದು ಮಧ್ಯಾಹ್ನ ರಾಮಜನ್ಮದ ಹರಿಕಥೆ ಯಾಗುತ್ತದೆ. ಮಧ್ಯಾಹ್ನ ಕುಂಚಿಗೆ (ಕುಲಾವಿ) ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ. ಭಕ್ತರು ಅದರ ಮೇಲೆ, ಗುಲಾಲು ಮತ್ತು ಹೂಗಳನ್ನು ಅರ್ಪಿಸುತ್ತಾರೆ.’

ರಾಮನವಮಿಯ ಮಹತ್ವ :

ತ್ರೇತಾಯುಗದಲ್ಲಿ ಯಾವಾಗ ರಾಮನ ಜನ್ಮವಾಯಿತೋ ಆಗ ಕಾರ್ಯನಿರತವಾಗಿದ್ದ ಶ್ರೀ ವಿಷ್ಣುವಿನ ಸಂಕಲ್ಪ, ತ್ರೇತಾಯುಗದಲ್ಲಿನ ಅಯೋಧ್ಯಾವಾಸಿಗಳ ಭಕ್ತಿಭಾವ ಮತ್ತು ಪೃಥ್ವಿಯಲ್ಲಿನ ಸಾತ್ತ್ವಿಕ ವಾತಾವರಣಗಳಿಂದಾಗಿ ಪ್ರಭು ಶ್ರೀ ರಾಮನ ಜನ್ಮದ ಪರಿಣಾಮವು ಶೇ. ೧೦೦ ರಷ್ಟು ಆಗಿತ್ತು. ಅನಂತರ ಪ್ರತಿವರ್ಷ ಬರುವಂತಹ ಚೈತ್ರ ಶುಕ್ಲ ನವಮಿಗೆ ಬ್ರಹ್ಮಾಂಡದಲ್ಲಿನ ವಾತಾವರಣದಲ್ಲಿ ರಾಮತತ್ತ್ವವು ಪ್ರಕ್ಷೇಪಿಸಿ ವಾತಾವರಣವನ್ನು ಸಾತ್ತ್ವಿಕ ಮತ್ತು ಚೈತನ್ಯಮಯವನ್ನಾಗಿಸಲು ವಿಷ್ಣುಲೋಕದಿಂದ ಶ್ರೀರಾಮ ತತ್ತ್ವಯುಕ್ತ ವಿಷ್ಣುತತ್ತ್ವವು ಭೂಲೋಕದ ದಿಕ್ಕಿನತ್ತ ಪ್ರಕ್ಷೇಪಿತವಾಗುತ್ತದೆ ಮತ್ತು ಆ ದಿನ ಶ್ರೀರಾಮನ ಅಂಶಾತ್ಮಕ ಜನ್ಮವಾಗುತ್ತದೆ. ಇದರ ಪರಿಣಾಮವು ಇಡೀ ವರ್ಷವಿದ್ದು ಬ್ರಹ್ಮಾಂಡ ದಲ್ಲಿ ರಾಮತತ್ತ್ವಯುಕ್ತ ಸಾತ್ತ್ವಿಕತೆ ಮತ್ತು ಚೈತನ್ಯದ ಪ್ರಕ್ಷೇಪಣೆಯಾಗುತ್ತದೆ. ರಾಮತತ್ತ್ವಯುಕ್ತ ಸಾತ್ತ್ವಿಕತೆ ಮತ್ತು ಚೈತನ್ಯವನ್ನು ಬ್ರಹ್ಮಾಂಡದಲ್ಲಿನ ಪ್ರತಿಯೊಂದು ಸಜೀವ ಮತ್ತು ನಿರ್ಜೀವ ವಸ್ತುಗಳು ಗ್ರಹಿಸಿಕೊಳ್ಳುತ್ತವೆ ಮತ್ತು ಅದರಿಂದ ಅವುಗಳಿಗೆ ತಮ್ಮ ಕಾರ್ಯವನ್ನು ಒಳ್ಳೆಯ ರೀತಿಯಿಂದ ಮಾಡಲು ಸಾಧ್ಯವಾಗುತ್ತದೆ.

ಮರ್ಯಾದಾ ಪುರುಷೋತ್ತಮ ಶ್ರೀರಾಮನ ವೈಶಿಷ್ಟ ಗಳು:

ಆದರ್ಶ ಪುತ್ರ : ರಾಮನು ತಂದೆ ತಾಯಿಯರ ಆeಯನ್ನು ಪಾಲಿಸಿದನು; ಆದರೆ ಸಂದರ್ಭ ಬಂದಾಗ ಹಿರಿಯರಿಗೂ ಉಪದೇಶ ಮಾಡಿದನು. ಉದಾ. ವನವಾಸದ ಪ್ರಸಂಗದಲ್ಲಿ ದುಃಖಿತರಾಗಬೇಡಿ ಎಂದು ತಂದೆತಾಯಿಗೆ ಹೇಳಿದನು. ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಅನುಭವಿಸಲು ಕಳುಹಿಸಿದ ಕೈಕೇಯಿ ಮಾತೆಯನ್ನು ವನವಾಸದಿಂದ ಹಿಂತಿರುಗಿ ಬಂದ ರಾಮನು ನಮಸ್ಕರಿಸಿ ಪ್ರೇಮದಿಂದ ಮಾತನಾಡಿಸಿದನು.

ಆದರ್ಶ ಸಹೋದರ : ಇಂದಿಗೂ ಆದರ್ಶ ಸಹೋದರರ ಪ್ರೇಮಕ್ಕೆ ರಾಮ-ಲಕ್ಷ ಣರ ಉಪಮೆಯನ್ನೇ ಕೊಡುತ್ತಾರೆ.

ಆದರ್ಶ ಪತಿ : ಶ್ರೀರಾಮನು ಏಕಪತ್ನಿ ವ್ರತಸ್ಥನಾಗಿದ್ದನು. ಸೀತೆಯನ್ನು ತ್ಯಾಗ ಮಾಡಿದ ನಂತರ ರಾಮನು ವಿರಕ್ತ ಜೀವನವನ್ನು ನಡೆಸುತ್ತಿದ್ದನು. ಮುಂದೆ ಯಜ್ಞವನ್ನು ಮಾಡುವಾಗ ಪತ್ನಿಯ ಅವಶ್ಯಕತೆ ಇದ್ದರೂ ಬೇರೆ ಪತ್ನಿಯನ್ನು ಸ್ವೀಕರಿಸದೇ ಸೀತೆಯ ಪ್ರತಿಮೆಯನ್ನು ತನ್ನ ಪಕ್ಕದಲ್ಲಿ ಇರಿಸಿಕೊಂಡಿದ್ದನು. ಇದರಿಂದ ರಾಮನ ಏಕಪತ್ನಿ ವ್ರತವು ಕಂಡು ಬರುತ್ತದೆ. ಆ ಕಾಲದಲ್ಲಿ ರಾಜರು ಹಲವಾರು ರಾಣಿಯರನ್ನು ವರಿಸುವ ವಾಡಿಕೆಯಿತ್ತು. ಈ ಹಿನ್ನೆಲೆಯಲ್ಲಿ ರಾಮನ ಏಕಪತ್ನಿ ವ್ರತವು ವಿಶಿಷ್ಟವಾಗಿದೆ.

ಆದರ್ಶ ಮಿತ್ರ : ರಾಮನು ಸುಗ್ರೀವ, ವಿಭೀಷಣ ಮುಂತಾದವರಿಗೆ ಅವರ ಸಂಕಟದ ಸಮಯದಲ್ಲಿ ಸಹಾಯ ಮಾಡಿದನು.

ಆದರ್ಶ ರಾಜ : ಪ್ರಜೆಗಳು ಸೀತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ ದಾಗ ರಾಮನು ತನ್ನ ವೈಯಕ್ತಿಕ ಸುಖದ ಬಗ್ಗೆ ಚಿಂತಿ ಸದೇ, ರಾಜನ ಧರ್ಮವೆಂದು ತನ್ನ ಧರ್ಮಪತ್ನಿ ಯನ್ನು ತ್ಯಜಿಸಿದನು. ಇದರ ಬಗ್ಗೆ ಕಾಳಿದಾಸನು ‘ಕೌಲಿನ ಭೀತೇನ ಗೃಹನ್ನಿರಸ್ತಾ ನ ತೇನ ವೈದೇಹ ಸುತಾ ಮನಸ್ತಃ |’ (ಅರ್ಥ : ಜನರ ಆಪಾದನೆಯ ಭಯದಿಂದ ರಾಮನು ಸೀತೆಯನ್ನು ಮನೆಯಿಂದ ಹೊರಗೆ ಹಾಕಿದನು, ಮನಸ್ಸಿನಿಂದ ಅಲ್ಲ.) ಎನ್ನು ವಂತಹ ಮಾರ್ಮಿಕ ಶ್ಲೋಕವನ್ನು ರಚಿಸಿದ್ದಾನೆ.

ಆದರ್ಶ ಶತ್ರು : ರಾವಣನ ಮೃತ್ಯುವಿನ ನಂತರ ರಾವಣನ ತಮ್ಮನಾದ ವಿಭೀಷಣನು ಅಣ್ಣನಿಗೆ ಅಗ್ನಿಸಂಸ್ಕಾರವನ್ನು ಮಾಡಲು ನಿರಾಕರಿಸಿದಾಗ, ರಾಮನು ‘ಮರಣದೊಂದಿಗೆ ಶತ್ರುತ್ವವೂ ಮುಗಿದು ಹೋಗುತ್ತದೆ, ನೀನು ರಾವಣನ ಅಂತ್ಯಸಂಸ್ಕಾರವನ್ನು ಮಾಡದಿದ್ದರೆ ನಾನೇ ಮಾಡುತ್ತೇನೆ; ಅವನು ನನಗೂ ಸಹೋದರನೇ ಆಗಿದ್ದಾನೆ’ ಎಂದು ಹೇಳಿದನು.

ಧರ್ಮಪಾಲಕ : ರಾಮನು ಧರ್ಮದ ಎಲ್ಲ ನಿಯಮಗಳನ್ನು ತಪ್ಪದೆ ಪಾಲಿಸುತ್ತಿದ್ದುದ ರಿಂದ ಅವನನ್ನು ‘ಮರ್ಯಾದಾ ಪುರುಷೋತ್ತಮ’ ಎನ್ನುತ್ತಾರೆ.
ಏಕವಚನೀ : ಯಾವುದೇ ಒಂದು ವಿಷಯವನ್ನು ಸತ್ಯವಾಗಿದೆ ಎಂದು ಒತ್ತಿ ಹೇಳ ಬೇಕಾದರೆ, ನಾವು ಅದನ್ನು ಮತ್ತೆ ಮತ್ತೆ ಹೇಳುತ್ತೇವೆ ಅಥವಾ ‘ನಾನು ತ್ರಿವಾರ ಸತ್ಯ ಹೇಳುತ್ತೇನೆ’ ಎನ್ನುತ್ತೇವೆ. ‘ಶಾಂತಿಃ | ಶಾಂತಿಃ | ಶಾಂತಿಃ |’ ಹೀಗೂ ಮೂರು ಬಾರಿ ಹೇಳುತ್ತಾರೆ. ‘ತ್ರಿವಾರ ಸತ್ಯ’ದಲ್ಲಿನ ‘ತ್ರಿವಾರ’ ಈ ಶಬ್ದವನ್ನು ಮುಂದಿನ ಎರಡು ಅರ್ಥಗಳಲ್ಲಿ ಉಪಯೋಗಿಸಲಾಗಿದೆ.
ಅ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಮೇಲೆ ಆಣೆ ಇಟ್ಟು ಹೇಳುತ್ತೇನೆ. ಆ. ತ್ರಿವಾರ ಶಬ್ದವು ‘ತ್ರಿ ವಾರ’ (ಎಂದರೆ ಮೂರು ಬಾರಿ)ದಿಂದ ಉಂಟಾಗಿದೆ. ಒಂದೇ ವಿಷಯದ ಬಗ್ಗೆ ಮೂರು ಬಾರಿ ಸ್ವಪ್ನ ಕಂಡರೆ ಅದನ್ನು ಕೇವಲ ಸ್ವಪ್ನವೆಂದು ತಿಳಿಯದೇ ಸ್ವಪ್ನದೃಷ್ಟಾಂತ ಎಂದು ತಿಳಿಯಬೇಕು. ಅದರಲ್ಲಿನ ಸೂಚನೆಯಂತೆ ನಡೆದುಕೊಳ್ಳಬೇಕು ಅಥವಾ ಅದರ ಬಗ್ಗೆ ಉನ್ನತರಲ್ಲಿ ವಿಚಾರಿಸಬೇಕು. ಹಾಗೆಯೇ ಮೂರು ಬಾರಿ ಯಾವುದೇ ವಿಷಯವನ್ನು ಕೇಳಿದರೆ ಅದು ಸತ್ಯವೆಂದು ತಿಳಿಯಬೇಕು.

ರಾಮನು ಮಾತ್ರ ಏಕವಚನಿಯಾಗಿದ್ದನು, ರಾಮನು ಒಂದು ಸಲ ಏನಾದರೂ ಹೇಳಿದರೆ ಅದು ಸತ್ಯವೇ ಆಗಿರುತ್ತಿತ್ತು. ಆ ವಿಷಯವನ್ನು ಮತ್ತೆ ಮತ್ತೆ ಮೂರು ಬಾರಿ ಹೇಳುವ ಅವಶ್ಯಕತೆ ಇರುತ್ತಿರಲಿಲ್ಲ. ರಾಮನಿಗೆ, ಈ ವಿಷಯವು ಸತ್ಯವೇನು ಎಂದು ಯಾರೂ ಕೇಳುತ್ತಿರಲಿಲ್ಲ.
ಸಂಸ್ಕ ತ ವ್ಯಾಕರಣದಲ್ಲಿ ಏಕವಚನ, ದ್ವಿವಚನ ಮತ್ತು ಬಹುವಚನ ಹೀಗೆ ಮೂರು ವಚನಗಳಿವೆ. ಅದರಲ್ಲಿ ‘ರಾಮ’ ಎನ್ನುವುದು ಏಕವಚನ ವಾಗಿದೆ. ಇದರ ಅರ್ಥ, ರಾಮನೊಂದಿಗೆ ಏಕರೂಪವಾಗುವುದು ಎಂದರೆ ಮೂರರಿಂದ ಎರಡರ ಕಡೆಗೆ ಅಂದರೆ ಗುರು ಮತ್ತು ಶಿಷ್ಯ ಇವುಗಳ ಕಡೆಗೆ ಅಂದರೆ ರಾಮನ ಕಡೆಗೆ ಹೋಗುವುದು. ಅನೇಕದಿಂದ ಏಕದತ್ತ ಮತ್ತು ಏಕದಿಂದ ಶೂನ್ಯದತ್ತ ಹೋಗುವುದೇ ಅಧ್ಯಾತ್ಮದಲ್ಲಿನ ಪ್ರಗತಿ ಯಾಗಿದೆ. ಇಲ್ಲಿ ಶೂನ್ಯವೆಂದರೆ ಪೂರ್ಣಾವತಾರ ಕೃಷ್ಣ.

ಏಕಬಾಣೀ : ರಾಮನ ಒಂದೇ ಬಾಣವು ಗುರಿಯನ್ನು ಭೇದಿಸುತ್ತಿತ್ತು. ಆದುದ ರಿಂದ ಅವನು ಎರಡನೆಯ ಬಾಣವನ್ನು ಪ್ರಯೋಗಿಸುತ್ತಿರಲಿಲ್ಲ.
ರಾಮಾಯಣದ ಉತ್ಪತ್ತಿ:

ಉತ್ಪತ್ತಿ ಮತ್ತು ಅರ್ಥ : ರಾಮಾಯಣ ಶಬ್ದವು ರಂ + ಅಯನ ಈ ಎರಡು ಶಬ್ದಗಳಿಂದ ನಿರ್ಮಾಣವಾಗಿದೆ. ರಮ್ ರಮಯತೇ ಎಂದರೆ ತಲ್ಲೀನರಾಗುವುದು, ‘ಸಾಧನೆಯಲ್ಲಿ ತಲ್ಲೀನರಾಗುವುದು’. ಅಯನ ಎಂದರೆ ಸಪ್ತಲೋಕಗಳು. ಸಾಧನೆಯಲ್ಲಿ ತಲ್ಲೀನರಾಗಿ ಆನಂದ ದಲ್ಲಿದ್ದು, ಸಪ್ತಲೋಕಗಳನ್ನು ದಾಟಿ ಮೋಕ್ಷಕ್ಕೆ ಹೋಗುವುದನ್ನು ರಾಮಾಯಣದಲ್ಲಿ ಹೇಳಲಾಗಿದೆ. ‘ಸಮಸ್ತ ಅಯನಂ ರಾಮಾಯಣಮ್ |’ ಅಯನ ಎಂದರೆ ಹೋಗುವುದು, ಮಾರ್ಗ ಇತ್ಯಾದಿಯೂ ಆಗುತ್ತದೆ. ಯಾವುದು ಪರಬ್ರಹ್ಮ ಪರಮಾತ್ಮ ಸ್ವರೂಪನಾದ ಶ್ರೀರಾಮನ ಕಡೆಗೆ ಕೊಂಡೊಯ್ಯುತ್ತದೆಯೋ, ಅದರತ್ತ ಹೋಗಲು ಚಾಲನೆ ನೀಡುತ್ತದೆಯೋ ಅಥವಾ ಸ್ಫೂರ್ತಿ, ಉತ್ಸಾಹ ನೀಡುತ್ತದೆಯೋ, ಜೀವನದ ನಿಜವಾದ ಮಾರ್ಗವನ್ನು ತೋರಿಸುತ್ತದೆಯೋ ಅದುವೇ ‘ರಾಮಾಯಣ’ವಾಗಿದೆ.

ನಿಜವಾದ ರಾಮರಾಜ್ಯ (ಭಾವಾರ್ಥ)

ರಾಮನೊಬ್ಬನೇ ಬುದ್ಧಿವಂತನಾಗಿದ್ದನೆಂದಲ್ಲ. ತ್ರೇತಾಯುಗದಲ್ಲಿ ಎಲ್ಲ ಜನರೂ ಬುದ್ಧಿವಂತರಾಗಿದ್ದರು. ಆದ್ದರಿಂದ ರಾಮರಾಜ್ಯದಲ್ಲಿ ಒಂದೇ ಒಂದು ತಕರಾರು ರಾಮನ ದರಬಾರಿಗೆ ಬರುತ್ತಿರಲಿಲ್ಲ. ಪಂಚಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಳು, ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂಕಾರ ಇವುಗಳ ಮೇಲೆ ಹೃದಯದೊಳಗಿನ ರಾಮನ (ಆತ್ಮಾರಾಮನ) ರಾಜ್ಯವಿರುವುದೇ ನಿಜವಾದ ರಾಮರಾಜ್ಯ.

ಆಧಾರ : ಸನಾತನ ನಿರ್ಮಿತ ಕಿರು ಗ್ರಂಥ ‘ರಾಮ’

 

Author : ಮೋಹನ ಗೌಡ

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited