Untitled Document
Sign Up | Login    
ಕರಿಕುರಿನಗರದ ಸೆಫಾಲಜಿಸ್ಟ್ ಸಿದ್ದೇಸಪ್ಪನ ವಿಶೇಷ ಸಂ'ದರ್ಶನ'..

ಕರಿಕುರಿನಗರದ ಸೆಫಾಲಜಿಸ್ಟ್ ಸಿದ್ದೇಸಪ್ಪನ ವಿಶೇಷ ಸಂ'ದರ್ಶನ'..

ಕಳೆದ ಹಾಗೂ ಈಗ ಬರುತ್ತಿರುವ ಚುನಾವಣೆಗಳ ನಡುವಿನ ಅಂತರದಲ್ಲಿ ಮರಿಗುಂಟೆಪಾಳ್ಯದ 'ಸಿದ್ದೇಸ' ಈಗ 'ಸಿದ್ದೇಸಪ್ನೋರು' ಆಗಿ ಬೆಳೆದಿದ್ದು ನೋಡಿದರೆ ಯಾರಾದ್ರೂ ಅಚ್ಚರಿ, ಅಸೂಯೆ ಪಡುವಂತಿದೆ. ಪಾಳ್ಯದ ಹಾಗೂ ಸುತ್ತಮುತ್ತಲಿನ ಜನ್ರಿಗೆ ರೇಶನ್ ಕಾರ್ಡ್, ವೋಟರ್ ಕಾರ್ಡ್ ವಗೈರೆ ವಗೈರೆ ಮಾಡ್ಸಿ ಕೊಡ್ತಾ ಇದ್ದ ಸಿದ್ದೇಸ ಕೆಲವೇ ವರ್ಷಗಳಲ್ಲಿ ಇಷ್ಟೊಂದು ದುಡ್ಡು'ಮಾಡಿ' ದೊಡ್ಡಪ್ಪ ಆಗಿದ್ದು ಗೊತಾಗ್ಬಿಟ್ರೆ ಯವ್ದಾದ್ರೂ ಫೇಮಸ್ ಎಂಬಿಎ ಕಾಲೇಜ್ನೋರು ಕರ್ಸಿ ಆರ್ತಿ ಎತ್ತಿ ಹುಡ್ಗುರ್ಗೆ ಪಾಠ ಹೇಳ್ಸಿರೋರು..

ಅದಿರ್ಲಿ, ಸಿದ್ದೇಸ, ಯಾನೆ ಸಿದ್ದೇಸಪ್ನೋರ ಗುಣವಿಶೇಷಗಳ್ನ ಹೇಳ್ದಷ್ಟೂ ಕಡ್ಮೇನೆ.. ಯಾರ್ಯಾರ್ದೋ ಪುಡಿಗೆಲ್ಸಕ್ಕೆ ಬಾಡ್ಗೆ ಸೈಕ್ಲಲ್ಲಿ ಊರೆಲ್ಲಾ ಸುತ್ತಿಬರ್ತಾ ಇದ್ದ ಸಿದ್ದೇಸ ಈಗ 4 ಬಹುಮಹಡಿ ಕಟ್ಟಡಗಳಲ್ಲಿ ಒಟ್ಟು 32 ಸಣ್ಣ ಮನೆಗಳನ್ನ ಕಟ್ಟಿ ಸ್ವಂತಮನೆ ಇಲ್ಲದ ದೌರ್ಭಾಗ್ಯರಿಗೆ ಬಾಡಿಗೆಗೆ ಕೊಟ್ಟಿದ್ದಾನೆ. ಅಲ್ಲದೆ, 6 ಏಸಿ ಗಾಡಿಗಳ್ನ ಬಾಡಿಗೆಗೆ ಓಡುಸ್ತಾ ಇದ್ದಾನೆ.. ಜೊತೆಗೆ ತನ್ನ ಸ್ವಂತ ಉಪಯೋಗಕ್ಕೆ ಅಂತ ಒಂದು ಏಸಿ ಕಾರು ಮತ್ತು ಒಂದು ಜೊತೆ ಬೈಕುಗಳನ್ನ ಇಟ್ಕೊಂಡಿದಾನೆ.

ಡ್ರೈವರ್ ಇಟ್ಕೊಂಡು ಏಸಿ ಕಾರಲ್ಲಿ ಬರ್ತಾ ಇರೋ ಗತ್ತು ನೋಡಿದ್ರೆ ಥೇಟ್ ಪಿಡಬ್ಲ್ಯುಡಿ ಮಿನಿಷ್ಟ್ರು ಅಂದ್ರೂ ನಂಬ್ದೆ ಇರ್ಲಾರ್ರು.. ಆದ್ರೂ ಸುತ್ತಮುತ್ತ ತಿರ್ಗಾಡೋಕೆ ಬೈಕನ್ನೆ ನಂಬಿದೋನು ಸಿದ್ದೇಸಪ್ಪ.

ಇಂತಿಪ್ಪ ಸಿದ್ದೇಸಪ್ಪಂಗೆ ಚುನಾವಣೆ ಹತ್ರ ಬಂತು ಅಂದ್ರೆ ಇನ್ನಿಲ್ಲದ ಡಿಮ್ಯಾಂಡು. ಕ್ಷೇತ್ರದ ಎಮ್ಮೆಲ್ಲೆ, ಮನೆಗೆ ಕರ್ಸಿ ಗುಪ್ತ ಸಮಾಲೋಚನೆ ಮಾಡೋರು.. ಅದೂ ಒಂದ್ಸಲ ಅಲ್ಲ, ವಾರಕ್ಕೆ ಮೂರುಬಾರಿ!.. ಪಾಳ್ಯದ 4 ಸಾವಿರ 'ಮನೆ'ಗಳಲ್ಲಿರೋ ಹತ್ರತ್ರ 9 ಸಾವಿರ ವೋಟುಗಳ ಉಸ್ತುವಾರಿ ಅವ್ನ ಕೈಲಿದೆ ಅನ್ನೋದೇ ಅವ್ನಿಗಿರೋ ಮರ್ಯಾದೆಗೆ ಕಾರಣ.

ಚುನಾವಣೆ ವಿಷಯ ಬಂತು ಅಂದ್ರೆ ಸಾಕು, ನ್ಯಾಶನಲ್ಲು, ಇಂಟರ್ನ್ಯಾಶನಲ್ಲು ಚಾನಲ್ಗಳಲ್ಲಿ ಏಸಿ ಸ್ಟುಡ್ಯೋಗಳಲ್ಲಿ ದಿನವಿಡೀ ಕೂತು ಹೇಳಿದ್ದನ್ನೇ ಹೇಳೋ ಸೆಫಾಲಜಿಸ್ಟುಗಳಿಗಿಂತ್ಲೂ ವಿವರವಾಗಿ, ಆಕ್ಯುರೇಟಾಗಿ ಎನಾಲಿಸಿಸ್ ಮಾಡೋ ಕೆಪಾಸಿಟಿನಲ್ಲಿ ಸಿದ್ದೇಸನ್ನ ಬೀಟ್ ಮಾಡೋರೇ ಇಲ್ಲ ಅನ್ಬೋದು.. ಆದ್ರೆ ಅವ್ನ ನಾಲೇಜು ಪಾಳ್ಯವೂ ಸೇರಿದಂತೆ ಕೇವಲ ಕರಿಕುರಿನಗರಕ್ಕೆ ಮಾತ್ರ ಸೀಮಿತವಲ್ಲ, ದೇಶದ ಎಲ್ಲಾ ರಾಜ್ಯಗಳ ಬಗ್ಗೂ ಕರಾರುವಾಕ್ಕಾಗಿ ವಿಶ್ಲೇಷಣೆ ಮಾಡೋ ಕೆಪ್ಯಾಸಿಟಿ ಇರೋ ಆಸಾಮಿ.

ಚುನಾವಣೆ ಕಾಲಕ್ಕೆ ಬೇಕಾದ 'ಎಲ್ಲಾ' ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ, ಯಾವುದೇ ಇವೆಂಟ್ ಮ್ಯಾನೇಜುಮೆಂಟ್ ಕಂಪನಿಗೂ ಕಡ್ಮೆ ಇಲ್ಲ ಅನ್ನೋಹಾಗೆ ಎರೇಂಜು ಮಾಡೋ ಪಾಳ್ಯದ ಹೆಮ್ಮೆಯ ಪುತ್ರ ಸಿದ್ದೇಸ.

ಬೆಳಗ್ಗೆ ಆಫೀಸ್ ಕಡೆ ಹೋಗ್ತಾ ದಾರೀಲೇ ಸಿಕ್ದ..

'ಏನಪ್ಪಾ ಸಿದ್ದೇಶಾ, ಚೆನ್ನಾಗಿದ್ದೀಯಾ' ಅಂತ ಕೇಳ್ದೆ.. (ಐದಾರು ವರ್ಷಗಳ ಹಿಂದಿನವರೆಗೂ ನಂ ಮನೆ ನೀರು,ಲೈಟು ಬಿಲ್ಲು,ಬಾಣ ಎಲ್ಲಾ ಕಟ್ಟುಸ್ಕೊಂಡು ಉಳ್ದಿದ್ ಚಿಲ್ರೆ ಇಟ್ಕೊಂತಿದ್ದ, ಈಗ ಬಹುವಚನ ಉಪ್ಯೋಗ್ಸಿ ಕರೀಬೇಕು ಅಂದ್ರೂ ಸಡನ್ನಾಗಿ ಬರೋದಿಲ್ಲ)..

'ಇದೀನಿ ಸ್ಸಾರ್.. ಎಲೆಕ್ಸನ್ ಬಂತಲ್ಲ.. ಸ್ವಲ್ಪ ಓಡಾಟ ಜಾಸ್ತಿ ಅಷ್ಟೆ..'
'ನೀನ್ ಸಿಕ್ಕಿದ್ದು ಒೞೇದಾಯ್ತು.. ಹೇಗಿದೆ ಟ್ರೆಂಡು ? ಕುರಿನಗರದಲ್ಲಿ ಯಾರು ಬರ್ಬೋದು ಈಸಲ?'
'ಏನ್ಸಾರ್ ಹೀಗ್ ಕೇಳ್ತೀರಿ ?.. ಕಾಸ್ ಬಿಚ್ಚಿದ್ರೆ ಯಾರ್ ಬೇಕಾದ್ರೂ ಗೆಲ್ಬೋದು ಬಿಡಿ..'
'ಹಾಗಂತೀಯಾ?.. ಆದ್ರೂ ಜನ್ರು ಯಾರ್ಗೆ ವೋಟಾಕ್ತಾರೆ ಅಂತ ನಿನ್ಗಿಂತ ಚೆನ್ನಾಗಿ ಯಾರ್ಗೆ ಗೊತ್ತಾಗುತ್ತೆ ಹೇಳು..'
'ನೋಟಿಗೊಂದು ಓಟು ಅನ್ನೋ ಕಾಲ ಇತ್ತು ಸ್ಸಾರ್.. ಈಗೀಗ ಜನ್ರೂ ಕಲ್ತೊಂಡವ್ರೆ.. ಕೆಂಪು ನೋಟೇ ಬೇಕು ಅಂತಾರೆ, ಅಷ್ಟೇ ಅಲ್ಲ, ಕುಕ್ಕರ್ರು, ಮೊಬೈಲೂ, ಬಾಟಲ್ಲೂ, ಅಕ್ಕಿ-ಪಿಕ್ಕಿ ಅಂತ ಸಿಕ್ಕಾಪಟ್ಟೆ ಡಿಮ್ಯಾಂಡ್ ಮಾಡ್ತಾರೆ.. ಇವ್ರನ್ನ ಸಾಕೋದೇ ಕಷ್ಟ ಸ್ಸಾರ್.. ನೋಡಿ, ಕಾಲಾನೇ ಕೆಟ್ಟೋಯ್ತು.. ಅಷ್ಟೆಲ್ಲ ಕೊಟ್ರೂ ನಮ್ಗೇ ಓಟಾಕ್ತಾರೆ ಅಂತ ಗ್ಯಾರಂಟಿ ಇಲ್ಲ, ಅದ್ಕೇ ಕಣ್ಣಲ್ಲೂ ಎಣ್ಣೆ ಬಿಟ್ಕೊಂಡು ಕಾಯ್ತಾ ಇರ್ಬೇಕು, ಬೇರೆಯವ್ರು ಅವ್ರ ಓಟು ಕಸೀದಂಗೆ..'
'ಹೌದಾ.. ವೋಟು ಅಷ್ಟೊಂದು ಕಾಸ್ಟ್ಲೀ ಆಗೋಯ್ತಾ?.. ಕಲಿಗಾಲ ಬಿಡು.. ಏನ್ಮಾಡೋಕಾಗುತ್ತೆ.. ಇರ್ಲಿ.. ನಿನ್ ಸ್ಟ್ರಾಟಜಿ ಏನು, ನಿನ್ ಕೈಲಿರೋ ಜನ ಬೇರೆ ಅಭ್ಯರ್ಥಿಗೆ ವೋಟು ಹಾಕ್ದಂಗೆ ಮಾಡೊಕೆ?'..
'ನೋಡಿ ಸ್ಸಾರ್, ಬೇರೆ ಯಾರ್ಗೂ ಹೇಳ್ಬೇಡಿ.. ಎಲೆಕ್ಸನ್ನು ಬರುತ್ತೆ ಅಂತ ಗೊತ್ತಾಗ್ಲಿಂದ ದಿವ್ಸಕ್ಕೆ ನಾಲ್ಕು ಗಾಡಿಗಳಲ್ಲಿ ಈ ಜನ್ರನ್ನ ಬ್ಯಾಚ್ ಬೈ ಬ್ಯಾಚ್ ಕೂಡಾಕ್ಕೊಂಡು ಶಿರ್ಡಿ, ಕೊಲ್ಲೂರು, ಮುಂತಾದ ಕಡೆ ಎಲ್ಲಾ ತೀರ್ಥಯಾತ್ರೆ ಮಾಡಿಸ್ತಾ ಇದೀವಿ.. ಗಾಡಿ ಹತ್ತೋ ಮುಂಚೆ ಕೈಗೆ ಎಲೆ ಅಡಿಕೆ ಜೊತೆಗೆ ನೂರು ರುಪಾಯಿ ನೋಟು ಇಟ್ಟು, ಹಣೆಗೆ ದಪ್ಪ ನಾಮ ಹಾಕ್ಸಿ ನಂ ಯಜ್ಮಾನ್ರ ಹೆಸ್ರಲ್ಲಿ ಹುಂಡಿಗೆ ಹಾಕ್ರಪ್ಪ ಅಂಥೇಳಿ ಇನ್ನೊಂದು ಐವತ್ರ ನೋಟು ಇಡ್ತೀವಿ..' ಊಟ,ತಿಂಡಿ ಅಂತ ಏನಿಲ್ಲಾಂದ್ರೂ ಒಬ್ಬೊಬ್ಬ್ರಿಗೆ 5-6 ಸಾವ್ರ ಖರ್ಚಾಗುತ್ತೆ, ಏನ್ಮಾಡೊದು ಹೇಳಿ..' ಅಂತ ತನ್ನ ಪ್ರಾಬ್ಲಂ ಹೇಳ್ಕೊಂಡ..

'ಅದ್ಯಾಕೆ ಅಷ್ಟೊಂದು ಖರ್ಚುಮಾಡಿ ತೀರ್ಥಯಾತ್ರಗೆ ಕರ್ಕೊಂಡು ಹೋಗ್ಬೇಕು? ದುಡ್ದು, ಬಾಟ್ಲಿ ಕೊಟ್ರೆ ವೋಟ್ ಗುದ್ದಲ್ವಾ?'

'ಅಂಥಾ ಕಾಲ ಎಲ್ಲಾ ಹೋಯ್ತು ಸ್ಸಾರ್.. ಈಗ ಜನ್ರಿಗೆ ನಿಯತ್ತೇ ಇಲ್ಲ.. ಎಲ್ರೂ ಐಟಿಬಿಟಿ ಜನ್ರ ಥರಾನೇ ಡಿಮ್ಯಾಂಡ್ ಮಾಡ್ತಾರೆ.. ಜೊತೆಗೆ ಎಲ್ಲಾ ತಗಂಡು ಕೊನೇ ಘಳ್ಗೇಲಿ ಬೇರೆ ಯಾರ್ಗಾದ್ರೂ ಗುದ್ದಿದ್ರೂ ಗುದ್ದಿದ್ರೇ.. ಅದ್ಕಾಗಿ ತೀರ್ಥಯಾತ್ರೆಗೆ ಕರ್ಕೊಂಡೊಯ್ತೀವಿ.. ಏಟ್ಳೀಸ್ಟ್ ದೇವ್ರನ್ನ ತೋರ್ಸಿದ್ರಲ್ಲ ಅಂತ ಸ್ವಲ್ಪ ನಿಯತ್ತು ಇರುತ್ತಲ್ಲ.., ಯಾವ್ದಕ್ಕೂ ಅಷ್ಟೊಂಡು ದುಡ್ ಇನ್ವೆಸ್ಟ್ ಮಾಡ್ಬಿಟ್ಟು ವೇಸ್ಟಾದ್ರೆ ಹೆಂಗೆ ಅಲ್ವಾ?..' ಅಂತ ತನ್ನ ಬಿಸಿನೆಸ್ ಪ್ಲಾನ್ ಬಗ್ಗೆ ಹೇಳ್ಕೊಂಡ..

'ಅದ್ಸರಿ, ನಿಂಗೆ ಎಲ್ಲಾ ಅಭ್ಯರ್ಥಿಗಳೂ ತಮ್ಗೇ ಸಪೋರ್ಟ್ ಮಾಡು ಅಂತ ಪ್ರೆಷರ್ ಬರೋಲ್ವ?.. ಎಲ್ರಿಂದ್ಲೂ ದುಡ್ ತಗೊಂಡ್ರೆ ಯಾರ್ಗೇ ಅಂತ ವೋಟ್ ಕೊಡಿಸ್ತೀಯಾ?..'

'ಛೆ, ಛೆ, ಎಲ್ಲಾದ್ರೂ ಉಂಟಾ, ನನ್ ಬಗ್ಗೆ ಗೊತ್ತಿದ್ದೂ ಕೇಳ್ತೀರಾ.. ಸ್ಸಾರ್, ನಾನು ನಿಯತ್ತಿನ ಮನುಷ್ಯ.. ಚುನಾವಣೆ ಅನೌನ್ಸ್ ಆದ್ ಕೂಡ್ಳೆ ಎಲ್ಲ್ರೂ ನನ್ನ ಕರ್ಸ್ಕೊಂತಾರೆ, ಸಪೋರ್ಟ್ ಬೇಕು ಅಂತ.. ನಾನು ಯಾರ್ಗೂ ಮೋಸ ಆಗ್ಬಾರ್ದೂ ಅಂತ ಎಲ್ರಿಗೂ ಸಪರೇಟಾಗಿ 'ಬಿಡ್' ಮಾಡೋಕೆ ಹೇಳ್ತೀನಿ.. ನನ್ ಕೈಲಿ ಏನೇನು ಮಾಡೋಕಾಯ್ತದೆ, ಅವ್ರಿಗೆ ಏನೇನು ಬೇಕು ಅಂತೆಲ್ಲಾ ಲಿಸ್ಟ್ ಮಾಡ್ಕೊಂಡು ಯಾರು ಜಾಸ್ತಿ ಕೊಡ್ತಾರೆ, ಅವ್ರನ್ನ ಫೈನಲ್ ಮಾಡ್ಕೊತೀನಿ.. ಎಲ್ಲಾ ಕೆಲ್ಸಾನೂ ಅಡ್ವಾನ್ಸ್ ತಗೊಂಡೇ ಮಾಡ್ತೀನಿ.. ಒಂದ್ಸಲ ಮಾತು ಕೊಟ್ಬಿಟ್ರೆ, ಇನ್ನು ಕೋಟಿ ಜಾಸ್ತಿ ಕೊಡ್ತೀನಿ ಅಂತಂದ್ರೂ ತಿರ್ಗಿ ನೋಡೊಲ್ಲ.. ಈ ನಿಯತ್ತು ಇರೋದ್ರಿಂದ್ಲೇ ನನ್ನ ಹುಡುಕ್ಕೊಂಡು ಬರ್ತಾರೆ ಸ್ಸಾರ್'.. ಅಂತ ಹೇಳಿದಾಗ ನಂಗೆ ಕಲಿಯುಗದಲ್ಲಿ ಸತ್ಯಹರಿಶ್ಚಂದ್ರನೇ ಎದುರು ನಿಂತಾಗಾಯ್ತು..

'ಇಷ್ಟೆಲ್ಲಾ ಸುವ್ಯವಸ್ಥಿವಾಗಿ ಮಾಡ್ತೀರಲ್ಲಾ, ಎಲೆಕ್ಷನ್ ಕಮಿಷನ್, ಪೊಲೀಸ್ನೋರ ಕೈಲಿ ಸಿಕ್ಕಾಕೊಳಲ್ವಾ?.. ಅಂತ ಮುಗ್ದನಾಗಿ ಕೇಳಿದೆ..

'ಹ್ಹ ಹ್ಹ ಹ್ಹ.. ಏನ್ಸಾರ್ ನೀವು?.. ಅವ್ರು ಚಾಪೆ ಕೆಳಗೆ ನುಸುಳಿದ್ರೆ ನಾವು ರಂಗೋಲಿ ಕೆಳ್ಗೆ ಅಲ್ಲ, ನೆಲದ ಕೆಳಗೇ ತೂರ್ಕೊಂಡು ಕೆಲ್ಸ ಮಾಡ್ತೀವಿ.. ನೀವಿನ್ನೂ ಕಲಿಯೋದು ಬೇಕಾದಷ್ಟಿದೆ' ಅಂತ ರಸ್ತೆ ಮಧ್ಯದಲ್ಲೇ ನನ್ನ ಪರ್ಫಾಮೆನ್ಸ್ ಅಪ್ಪ್ರೈಸಲ್ ಮಾಡೇಬಿಟ್ಟ.

'ಎಲ್ಲಾ ಓಕೆ, ಅದ್ರೆ... ದುಡ್ ಕೊಟ್ಟು ವೋಟು ಹಾಕೋದು, ಹಾಕ್ಸೋದು ತಪ್ಪಲ್ವಾ ಸಿದ್ದೇಶಾ?' ಅಂತ ತಡೀಲಾರ್ದೆ ಗಾಂಧೀಜಿ ನೆನಪು ಮಾಡ್ಕೊಂಡು ಕೇಳ್ದೆ..

'ನೀವೇನು ಹೇಳ್ತೀರಿ ಸ್ಸಾರ್.. ಸುದ್ಧಿಗಾಗಿ ಕಾಸು, ಪೇಯ್ಡ್ ನ್ಯೂಸ್ ಅಂತೆಲ್ಲ ದುಡ್ ತಗೊಂಡು ನಿಮ್ಮಂಥೋರೆ ತಾನೆ ಬರ್ಯೋದು ಪೇಪರ್ನಾಗೆ?.. ಎಂತೆಂಥಾ ಖದೀಮ್ರನ್ನ, ಕ್ರಿಮಿನಲ್ಗಳ್ನ ಹೊಗ್ಳಿ ಹೊಗ್ಳಿ ಬರೀಯೋದು ನಿಮ್ಮಂತವ್ರೇ ತಾನೆ? ನಾವು ಒಂದಿಸ್ಟು ಪುಡಿಗಾಸು ಮಾಡ್ಕೊಂಡ್ರೆ ತಪ್ಪು ಅಂತೀರಾ?' ಅಂತ ನನ್ಗೇ ರಿವರ್ಸ್ ಶಾಟ್ ಹೊಡ್ದೇ ಬಿಟ್ಟ..

'ಸರೀನಪ್ಪ, ಆಫೀಸ್ಗೆ ಲೇಟಾಯ್ತು, ಬರ್ತೀನಿ' ಅಂತ ಸ್ಕೂಟರ್ ಸ್ಟಾರ್ಟ್ ಮಾಡ್ದೆ..

 

Author : ಸಶಮ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited