Untitled Document
Sign Up | Login    
ಯುಗಾದಿ ಹಬ್ಬ: ಸಹಬಾಳ್ವೆ-ಸಮನ್ವಯ ಜೀವನಕ್ಕೆ ನಾಂದಿ

ಯುಗಾದಿ ಹಬ್ಬದ ಆಚರಣೆ

ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸವರುಷಕೆ-ಹೊಸಹರುಷವ ಹೊಸತು ಹೊಸತು ತರುತಿದೆ- ದ.ರಾ.ಬೇಂದ್ರೆ

ಹೌದು. ಪ್ರಕೃತಿಯು ತನ್ನ ಹಳೆಯ ತೊಗಲನ್ನು ಬಿಟ್ಟು ಹೊಸತೊಗಲನ್ನು ಮೈವೆತ್ತುತ್ತಾ ಬರುವ ಈ ಸುಸಮಯದಲ್ಲಿ ಇಡೀ ನಾಡು ಹೊಸತನದ ಗೆಟಪ್ಪಿನಲ್ಲಿದೆ. ಗಿಡ-ಮರ-ಬಳ್ಳಿಗಳು ತಮ್ಮ ಹಳೆಯ ರೂಪವನ್ನು ಬದಲಾಯಿಸಿಕೊಂಡು ಹೊಂಬಣ್ಣದ ಚಿಗುರೆಲೆಯನ್ನು ಹೊದ್ದು ಚಿನ್ನಾಟವಾಡುತ್ತಾ ತೂಗಾಡುತ್ತಿವೆ. ಸಂತನ ಆಗಮನದಿಂದ ಪುಳಕಿತರಾದಂತೆ ಇಡೀ ನಾಡು ತೋರುತ್ತಿದೆ. ಇಂತಹ ಹೊತ್ತಲ್ಲಿ ಇದಕ್ಕೆ ಸೆಡ್ಡು ಹೊಡೆಯುವಂತೆ ಸೂರ್ಯನು ತನ್ನ ರಣಬಿಸಿಲಿನಝಳವನ್ನು ತೋರುತ್ತಾ ಕುಹಕವಾಡುವಂತೆ ಜನರು ಬೆವರಲ್ಲಿ ಮೀಯುತ್ತಾ ಬಸವಳಿದಿದ್ದಾರೆ.

ಆದರೂ ವಸಂತ ಋತುವಿನ ಚೆಲುವು, ಮೋಹಕತೆಗೆ ಆನಂದ ತುಂದಿಲರಾಗಿದ್ದಾರೆ. ಅಲ್ಲದೆ, ಬಿಸಿಲ ಬೇಗೆಯ ನಿವಾರಣೆಗೆ ಮದ್ದೆಂಬಂತೆ ಹೊಂಗೆಯ ನೆರಳು, ತುಂಗೆಯ ಕಂಪು, ಬೇವು-ಮಾವುಗಳ ಗೊಂಚಲು- ಗೊಂಚಲುಗಳ ತೊನೆದಾಟ ಬಸವಳಿದ ಮನಕ್ಕೆ ಉಲ್ಲಾಸ ನೀಡುವಂತಿದೆ. ಬಿಸಿಲ ಬೇಗೆಯನ್ನು ತುಂಗೆ ಹೂವಿನ ಕಂಪು, ಮರಿದುಂಬಿಗಳ ಝೇಂಕಾರ, ಹೊಂಗೆ ಮರದ ನೆರಳು ಕೊಂಚ ತಗ್ಗಿಸುವಂತಿವೆ... ಭಾರತೀಯ ಸಂಸ್ಕೃತಿಯಲ್ಲಿ 'ಯುಗಾದಿ ಹಬ್ಬ'ಕ್ಕೆ ತನ್ನದೇ ಆದ ಒಂದು ಅತ್ಯುನ್ನತವಾದ ಸಾಂಸ್ಕೃತಿಕ ಮಹತ್ವವಿದೆ.

ಆದುದರಿಂದ ಭಾರತೀಯರು ಅದರಲ್ಲೂ ದಕ್ಷಿಣ ಭಾರತದವರಲ್ಲಿ ಕರ್ನಾಟಕದ ಜನರು ತಮ್ಮ ಹೊಸ ವರುಷದ ದಿನವು 'ಯುಗಾದಿ'ಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ.

ಹೀಗೆ, ಯುಗಾದಿ ಹಬ್ಬವು ಜನರಲ್ಲಿ ಸಂಭ್ರಮ-ಸಡಗರ ನೀಡುವ ಜೊತೆಗೆ ಅವರ ಮನದಲ್ಲಿ ಹೊಸಭರವಸೆ, ಆಶಯ, ಗುರಿ, ಉದ್ದೇಶ, ಬಯಕೆ, ಕನಸನ್ನು ಚಿಗುರಿಸುತ್ತಾ ನವವರುಷಕ್ಕೆ ಆಶಾಕಿರಣವಾಗಿ ಬರುತ್ತಿದೆ; ಬಂದಿದೆ.

ಗ್ರಾಮೀಣರ ಆಡುಮಾತಿನಲ್ಲಿ ಹೇಳುವುದಾದರೆ, ಯುಗಾದಿಯು "ಉಗಾದಿ" ಎನಿಸಿಕೊಳ್ಳುತ್ತದೆ. ಉಗಾದಿ ಹಬ್ಬವು ಶಿಶಿರ ಋತು ಕಳೆದು ವಸಂತನಾಗಮನದ ಮೊದಲ ಹಬ್ಬ.

ಇದು ಭಾರತೀಯರ ಪಾಲಿಗೆ 'ನವ ಮನ್ವಂತರ'. ಅಲ್ಲದೆ, ಇದು ಭಾರತೀಯರಾದ ನಮ್ಮ ಪಾಲಿಗೆ 'ಹೊಸವರುಷ'ದ
ಮೊದಲ ದಿನ.

ಯುಗಾದಿಯಂದು ಹರಳೆಣ್ಣೆಯನ್ನು ಮೈ- ಕೈಗೆ ಹಚ್ಚಿಕೊಂಡು, ಸ್ನಾನಮಾಡಿ, ಹೊಸಬಟ್ಟೆ ತೊಟ್ಟು ಸಂಭ್ರಮಿಸುವುದು ವಾಡಿಕೆ. ಅಲ್ಲದೆ ಅಂದು ಜೀವನದ ಸಮನ್ವಯ ಸೂತ್ರದ ಸಂಕೇತವಾದ 'ಬೇವು-ಬೆಲ್ಲ ತಿನ್ನುವುದು' ಒಂದು ಸತ್ಸಂಪ್ರದಾಯಕ್ಕೆ ಬರೆದ ಮುನ್ನುಡಿಯಾಗುತ್ತದೆ. ಬೇವು-ಬೆಲ್ಲ ತಿನ್ನುವುದರ ಮೂಲ ಉದ್ದೇಶವಿಷ್ಟೆ; ಕಷ್ಟ-ಸುಖ, ನೋವು ನಲಿವು ಪ್ರತಿಯೊಬ್ಬರ ಬಾಳಲ್ಲಿ ಸಮನಾಗಿರಲಿ ಎಂಬುದು. ಇಂಥ ಸದ್ಭಾವನೆಯನ್ನು ಯುಗಾದಿ ಎಲ್ಲರಿಗೂ ತಿಳಿಸುತ್ತದೆ.
ನಲಿವಿನ ಧ್ಯೋತಕ-ಯುಗಾದಿ:

ಭಾರತೀಯ ಸಂಸ್ಕೃತಿಯಲ್ಲಿ 'ಯುಗಾದಿ ಹಬ್ಬ'ಕ್ಕೆ ತನ್ನದೇ ಆದ ಒಂದು ಅತ್ಯುನ್ನತವಾದ ಸಾಂಸ್ಕೃತಿಕ ಮಹತ್ವವಿದೆ. ಆದುದರಿಂದ ಭಾರತೀಯರು ಅದರಲ್ಲೂ ದಕ್ಷಿಣಭಾರತದವರಲ್ಲಿ ಕರ್ನಾಟಕದ ಜನರು ತಮ್ಮ ಹೊಸವರುಷದ ದಿನವು 'ಯುಗಾದಿ'ಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ. ಅದಕ್ಕಾಗಿಯೇ ಅಂದು ತಮ್ಮ ನೆಂಟರಿಷ್ಟರು, ಬಂಧು- ಬಾಂಧವರು, ಕುಟುಂಬವರ್ಗದವರೆಲ್ಲರೂ ಒಂದೆಡೆ ಸೇರಿ ಯುಗಾದಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ತೊಡಗುತ್ತಾರೆ.

ಅದಕ್ಕಾಗಿಯೇ ದೊಡ್ಡ ಮರಗಳಿಗೆ ಜೋಕಾಲಿಗಳನ್ನು ಕಟ್ಟಿ ಉಯ್ಯಾಲೆಯಾಡುತ್ತಾ ಕೇಕೆ ಹಾಕಿ ಸಂಭ್ರಮಿಸುತ್ತಾ, ಖುಷಿಪಡುತ್ತಾರೆ.

ಇಂತಹ ಸಂಭ್ರಮದ ನೋಟಗಳನ್ನು ಕಾಣಬೇಕಾದರೆ ಗ್ರಾಮೀಣ ಭಾಗಕ್ಕೇ ಹೋಗಬೇಕು. ಆದರೆ, ಶುದ್ಧ ಮನರಂಜನಾತ್ಮಕವಾದ ಇಂಥ ಸಂಭ್ರಮದ ನೋಟಗಳು ನೋಡಲು ಇಂದು ವಿರಳವಾಗಿವೆ.

ಒಲವು ವೃದ್ಧಿಯ ಯುಗಾದಿ:

ನಾವು ಸಂಬಂಧಗಳನ್ನೇ ಅನುಮಾನದಿಂದ ನೋಡುವಂತಹ ಪರಿಸ್ಥಿತಿಯ ದಿನಮಾನದಲ್ಲಿ ಯುಗಾದಿ ಹಬ್ಬವು, ಪರಸ್ಪರರಲ್ಲಿ ಒಲವು ವೃದ್ಧಿಸುವಂತಹ ಆಚರಣೆಯಾಗಿದೆ. ಕೆಲಸ-ಕಾರ್ಯದ ಕಾರಣದಿಂದಲೋ ಮತ್ಯಾವುದೋ ಕಾರಣದಿಂದಲೋ ಅಪರೂಪಕ್ಕೆ ಒಂದೆಡೆ ಸೇರುವ, ವೈಮನಸ್ಸಿನ ಕಾರಣದಿಂದಲೋ ದೂರಾಗಿರುವ ಸಂಬಂಧಿಕರನ್ನು ಮತ್ತೆ ಒಂದೆಡೆ ಸೇರಿಸುವಲ್ಲಿ ಇಂತಹ ಹಬ್ಬ-ಆಚರಣೆಗಳು
ಸಹಕಾರಿಯಾಗುತ್ತವೆ.

ಅಲ್ಲದೆ, ಅಷ್ಟೇನೂ ಆಪ್ತರಾಗಿಲ್ಲದ, ಪರಸ್ಪರ ಗೌರವ, ಪ್ರೀತಿ, ವಿಶ್ವಾಸವಿರದವರ ನಡುವೆ ಆತ್ಮೀಯತೆ ಬೆಳೆಯಲು ಇವು ನಾಂದಿಯಾಡುತ್ತವೆ. ಕನ್ನಡದ ಶ್ರೇಷ್ಠ ಕವಿ ದ.ರಾ.ಬೇಂದ್ರೆ ಯವರ ಕವಿತೆ, 'ನಾನು ಬಡವ, ಆಕೆ ಬಡವಿ; ಒಲವೇ ನಮ್ಮ ಬದುಕು' ಎಂಬಂತೆ, ಯುಗಾದಿ ಹಬ್ಬವು ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ಗೌರವ ಮನೋಭಾವನೆಯ ಒರತೆಯನ್ನು ಉಕ್ಕಿಸುತ್ತದೆ.
ಸಹಬಾಳ್ವೆ-ಸಮನ್ವಯಕ್ಕೆ ನಾಂದಿ:

ಯುಗಾದಿ ಹಬ್ಬದಂದು ಬೇವು-ಬೆಲ್ಲ ತಿನ್ನುವ ಆಚರಣೆಯು ಒಂದು ವಿಶಿಷ್ಟ ಪರಿಕಲ್ಪನೆಯೇ ಸರಿ. ಸಿಹಿ-ಕಹಿ, ಸುಖ-ಕಷ್ಟ, ನಲಿವು-ನೋವು ಎಂಬ ಮಾತಿನಂತೆ, ಜೀವನದಲ್ಲಿ
ಇವೆರಡರ ಸಮಾನ ಇರುವಿಕೆ ಅಗತ್ಯವಾಗಿದೆ. ಆಗ ಮಾತ್ರ ಜೀವನ ಸುಗಮವಾಗಿ ಸಾಗಲು ಸಾಧ್ಯ. ಆದರೆ, ಕಷ್ಟಕ್ಕಿಂತ ಸುಖವೇ ಬೇಕು ಎಂದು ಬಯಸುವವರು ಹೆಚ್ಚಿರುವ ಪರಿಸ್ಥಿತಿಯಲ್ಲಿ ಕಷ್ಟವನ್ನು, ಕಹಿಯನ್ನು, ನೋವನ್ನು ಬಯಸುವವರೇ ಇಲ್ಲವೆನ್ನುವಂತಾಗಿದೆ. ಆದರೆ, ಜೀವನ ಎನ್ನುವುದು ಕಷ್ಟ-ಸುಖಗಳ ಸಂಯೋಜನೆಯಾಗಿದೆ. ಹಾಗಾಗಿ, ಇವೆರಡು ಒಂದನ್ನೊಂದು ಬಿಟ್ಟಿರಲಾರವು.

ಇವು ಒಂಥರಾ ಕತ್ತಲು-ಬೆಳಕು, ರಾತ್ರಿ-ಹಗಲು ಹೇಗೆ ಒಂದನೊಂದು ಬಿಟ್ಟಿರಲಾರವೋ ಹಾಗೆಯೇ ಕಷ್ಟವಿಲ್ಲದೆ, ಸುಖವಿಲ್ಲ; ಸುಖವಿಲ್ಲದೆ ಕಷ್ಟವಿಲ್ಲ ಎಂಬುದು ಸತ್ಯವಾಗಿದೆ. ಈ ಆಶಯದಂತೆ ನಾವು ಯುಗಾದಿ ಹಬ್ಬದಲ್ಲಿ ಬೇವು- ಬೆಲ್ಲವನ್ನು ಹಂಚಿ ತಿನ್ನುತ್ತೇವೆ.

ಕೂಡಿ ಬಾಳಿದರೆ ಸ್ವರ್ಗಸುಖ ಎಂಬುದು ಯುಗಾದಿ ಹಬ್ಬದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಜೀವನದಲ್ಲಿ ಏನೇ ಏರುಪೇರಾದರೂ ಸರ್ವರೂ ಸುಖದಿಂದ, ಸಮನ್ವಯದಿಂದ, ಒಟ್ಟಾಗಿ ಬಾಳಬೇಕೆನ್ನುವ ಆಶಯವೂ ಇದರಲ್ಲಿದೆ. ಆ ಮೂಲಕ ಸ್ವರ್ಗಕ್ಕೆ ಕಿಚ್ಚುಹಚ್ಚುತ್ತಾ ಬಾಳುವೆ ನಡೆಸಬೇಕು. 'ಸುಖಜೀವನ' ನಡೆಸುವುದೇ ಸ್ವರ್ಗದ ಹೋಲಿಕೆಗಿರುವ ಮತ್ತೊಂದು ಶಬ್ದ. ಇಂತಹ ಉತ್ತಮೋತ್ತಮ ನಡೆ, ಗುಣಗಳನ್ನು, ಬಿತ್ತುವುದಕ್ಕೆ ಯುಗಾದಿ ನಾಂದಿಯಾಗಲಿದೆ. ಜನರಲ್ಲಿ ಹಳತಾದುದರ ಕೊನೆಯೇ ಹೊಸತನಕ್ಕೆ ಆರಂಭ.
ನಾವು ಯಾವುದೇ ಹೊಸದು ಬಂದಮೇಲೆ ಹಳೆಯದರ ಕುರಿತು ಅಸಡ್ಡೆ ಹೊಂದುವುದು ಸಾಮಾನ್ಯ. ಆದರೆ, ಹೊಸತಾದುದು ಬರಲು ಹಳೆಯದು ಅವಕಾಶ ಮಾಡಿಕೊಡದಿದ್ದರೆ ಹೊಸದು, ಹೊಸತನ ಬರಲು ಹೇಗೆ ಸಾಧ್ಯ? ಆದುದರಿಂದ ಹೊಸತನದ, ಹೊಸದರ ಆರಂಭವಾಗಲು 'ಹಳೆಯದರ' ಪಾಲು, ಸಹಾಯ, ಸಹಕಾರ ಪ್ರಮುಖವಾಗಿದೆ. ಹಾಗಾಗಿ, ಹೊಸತು-ಹಳತು ಎಂಬುವು ಪ್ರಕೃತಿಯ ಬದಲಾವಣೆಯ ಎರಡು ಮುಖಗಳು.

ಇವೆರಡರಲ್ಲಿ ಯಾವುದಿರದಿದ್ದರೂ ಮತ್ತೊಂದಕ್ಕೆ ಬೆಲೆಯಿರುವುದಿಲ್ಲ. ಈ ವಿಷಯವಾಗಿ ಯುಗಾದಿ ಹಬ್ಬವು ಮೌನವಾಗಿಯೇ ಜನರಲ್ಲಿ ಅರಿವನ್ನು ಮೂಡಿಸುತ್ತದೆ.

ಅದಕ್ಕೆಂತಲೇ ಯುಗಾದಿ ಅಂದರೆ, ಮತ್ತೊಂದು ಯುಗದ ಆದಿ; ಆರಂಭ; ಮನ್ವಂತರದ ಬದಲಾವಣೆಯ ಕಾಲ. ಈ ನವಮನ್ವಂತರವು ಸಕಲ ಜೀವಾತ್ಮರಿಗೂ ಲೇಸನ್ನು ತರಲಿ ಎಂಬುದು ಎಲ್ಲರ ಆಶಯವಾಗಲಿ; ಅದು ಪ್ರತಿಯೋರ್ವರ ಆತ್ಮಸಿದ್ಧಿಯ ಭಾವಮಂತ್ರವಾಗಲಿ.

ಯುಗಾದಿ ಹಬ್ಬದ ಶುಭಾಷಯಗಳು.

 

Author : ಹನಿಯೂರು ಚಂದ್ರೇಗೌಡ.

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited