Untitled Document
Sign Up | Login    
ವಿಶ್ವ ಮಹಿಳಾ ದಿನ

ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.

ಸಬಲ, ವಿದ್ಯಾವಂತ, ಅಭಿವೃದ್ಧಿಶೀಲ ಮಹಿಳಾ ಸಮಾಜದಿಂದ ಸಮಾಜದ ಉನ್ನತಿ ಸಾಧ್ಯ. ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಗಂಡಿಗೆ ಸಮಾನವಾಗಿ ದುಡಿಯುತ್ತಿರುವ ಮಹಿಳೆಯರ ಸಾಧನೆಗೆ ಗೌರವ ಸೂಚಿಸುವ ಸಲುವಾಗಿ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಬಹುಮುಖ್ಯ ಎಂಬ ಸಂದೇಶವನ್ನು ವಿಶ್ವದಾದ್ಯಂತ ಸಾರುವ ಸಲುವಾಗಿಯೇ ವಿಶ್ವ ಸಂಸ್ಥೆ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿದೆ.

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 1909ರಲ್ಲಿ ನಡೆದ ಕೂಲಿ ಚಳುವಳಿಯಿಂದ ಮಹಿಳಾ ದಿನದ ಕಲ್ಪನೆ ಮೂಡಿತ್ತು. ವಿವಿಧ ಬೇಡಿಕೆಗಳಿಗಾಗಿ ಬಹುದೊಡ್ಡ ಪ್ರಮಾಣದಲ್ಲಿ ಅಂದು ನಡೆದ ‘ಸರ್ಕಾರಿ ಕಾರ್ಮಿಕರ ಚಳುವಳಿ’ಯಲ್ಲಿ ಮಹಿಳಾ ಕಾರ್ಮಿಕರು ಬಹುದೊಡ್ಡ ಪ್ರಮಾಣದಲ್ಲಿ ಪ್ರತಿಭಟಿಸಿದ್ದರು. ಅಂದಿನ ಚಳುವಳಿಯಲ್ಲಿ ಪ್ರತಿಭಟನೆಯ ಬಲ ಹೆಚ್ಚಿಸಿದ್ದ ಮಹಿಳೆಯರಿಗಾಗಿ ಮೊದಲ ಬಾರಿಗೆ ಮಹಿಳಾ ದಿನವನ್ನು ಅರ್ಪಿಸಲಾಗಿತ್ತು. ಫೆ.28ರಂದು ಅಮೆರಿಕ ಸಂಸ್ಥಾನ ಮಹಿಳಾ ದಿನವನ್ನಾಗಿ ಆಚರಿಸಿತ್ತು.
ನಂತರದ ದಿನಗಳಲ್ಲಿ 1913ರಿಂದ 1914ರ ಅವಧಿಯಲ್ಲಿ ಭುಗಿಲೆದ್ದಿದ್ದ 1ನೇ ವಿಶ್ವ ಯುದ್ಧದ ಆತಂಕದ ವಾತಾವರಣವನ್ನು ಶಮನಮಾಡುವಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಸಹಕಾರಿಯಾಯಿತು. ದೇಶ ದೇಶಗಳ ನಡುವೆ ಸಂಬಂಧ ಬೆಸೆದು ಅಲ್ಲಿಯ ಮಹಿಳಾ ಪ್ರಜೆಗಳ ಏಳಿಗೆಯ ಸಂದೇಶವನ್ನು ನೀಡುವುದು ಮಹಿಳಾ ದಿನದಿಂದ ಸಾಧ್ಯವಾಗಿತ್ತು. ವಿಶ್ವದ ಶಾಂತಿಗಾಗಿ ಯುದ್ಧದಿಂದ ಬಿಡುಗಡೆ ಬಯಸಿ ರಷ್ಯಾದ ಮಹಿಳೆಯರು ಫೆಬ್ರವರಿಯ ಕೊನೆಯ ವಾರದಲ್ಲಿ ಬೃಹತ್‌ ಚಳುವಳಿ ನಡೆಸಿದ್ದರು. ಯೂರೋಪಿನಲ್ಲಿಯ ಹಲವು ದೇಶಗಳಲ್ಲಿಯೂ ಮಾ.8 ರಂದು ಶಾಂತಿಗಾಗಿ ಚಳುವಳಿ ನಡೆದವು. ಜಗತ್ತಿನಾದ್ಯಂತ ಏಕಕಾಲದಲ್ಲಿ ಶಾಂತಿಯ ದನಿ ಎತ್ತಿದ ಮಹಿಳೆಯರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ 1975ರಲ್ಲಿ ಮಾ.8ನ್ನೇ ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲು ಕರೆ ನೀಡಿತು.

ನಮ್ಮ ದೇಶದಲ್ಲಿಯೂ ಕೂಡ, ಮಾ.8ರ ದಿನವನ್ನು ವಿಶ್ವ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆ ಹಾಕಿಕೊಟ್ಟ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳ ಮಾರ್ಗಸೂಚಿಗಳು ಅದೆಷ್ಟು ಕಾರ್ಯರೂಪಕ್ಕೆ ಬರುತ್ತವೆಯೋ ಗೊತ್ತಿಲ್ಲ. ಆದರೆ, ಮಹಿಳಾ ದಿನದಂದು ನಮ್ಮ ದೇಶದ ಬಹುದೊಡ್ಡ ಸವಾಲಾಗಿರುವ ಮಹಿಳೆಯ ರಕ್ಷಣೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲೇ ಬೇಕಾದ ಅನಿವಾರ್ಯತೆಯಂತೂ ಇದೆ.

ಅಭಿವೃದ್ಧಿಯ ದಾರಿಯಲ್ಲಿ ಸಾಗಲು ಮೊದಲು ರಕ್ಷಣೆ ಬೇಕು. ನಿರ್ಭಯ ವಾತಾವರಣ ಬೇಕು. ತಾನು ಇಲ್ಲಿ ಸುರಕ್ಷಿತ ಎಂಬ ಭಾವನೆ ಭಾರತೀಯ ಮಹಿಳೆಯರ ಮನಸ್ಸಿನಲ್ಲಿದ್ದಾಗ ಮಾತ್ರ ಅವರು ತಮ್ಮ ಏಳಿಗೆ, ಅಭಿವೃದ್ಧಿಯ ಕುರಿತು ಚಿಂತಿಸಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನಮ್ಮ ದೇಶದಲ್ಲಿ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗೆ ಒಂದರ ಹಿಂದೆ ಒಂದು ನಡೆಯುತ್ತಿರುವ ಮಾನಭಂಗಗಳಂತಹ ಪ್ರಕರಣಗಳೇ ಉತ್ತರಿಸುತ್ತವೆ.
ಮಹಿಳಾ ಸಶಕ್ತಿಕರಣ, ಮಹಿಳೆಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಜಾಗೃತಿಯಂತಹ ಯೋಜನೆಗಳು ಭಾರತದಂತ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಏಳಿಗೆ ಕಂಡಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಮಹಿಳೆಯ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಗೆ ಬಂದಿವೆ. ದೇಶದ ಅಭಿವೃದ್ಧಿಯ ದಾರಿಯಲ್ಲಿ ಇಂದಿಗೂ ಇರುವ ಅದೆಷ್ಟೋ ಸವಾಲುಗಳಲ್ಲಿ ಮಹಿಳೆಯ ಅಭಿವೃದ್ಧಿ ಹಾಗೂ ಸಶಕ್ತಿಕರಣವೂ ಒಂದು.

ನೈಸರ್ಗಿಕವಾಗಿ ಮಹಿಳೆ ಪುರುಷನಿಗಿಂತ ಕಡಿಮೆ ದೈಹಿಕ ಶಕ್ತಿಯುಳ್ಳವಳು ಎಂಬುದು ವೈಜ್ಞಾನಿಕ ಸತ್ಯ. ಆದರೆ, ಮಹಿಳೆ ದುರ್ಬಲಳು ಎಂಬ ಕಾರಣಕ್ಕೆ ಹಿಂದಿನಿಂದಲೂ ಅವಳನ್ನು ಪುರಷ ಸಮಾಜ ಅಲಕ್ಷ್ಯ ಮಾಡಿತ್ತು. ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರದಿಂದ ಮಹಿಳೆ ದೂರವೇ ಉಳಿಯುವಂತೆ ಮಹಿಳೆಯನ್ನು ಹತ್ತಿಕ್ಕಲಾಗಿತ್ತು. ಈ ಬೇಧ ಭಾವ ಭಾರತದಲ್ಲೊಂದೇ ಅಲ್ಲ... ವಿಶ್ವದೆಲ್ಲೆಡೆ ಸರ್ವೇ ಸಾಮಾನ್ಯವಾಗಿತ್ತು. ಕ್ರಮೇಣ ಎಲ್ಲ ವಿಶ್ವದ ಹಲವೆಡೆ ಮಹಿಳಾ ಜಾಗೃತಿ ಮೂಡಲು ಪ್ರಾರಂಭವಾಯಿತು. ತಮ್ಮ ಅಭಿವೃದ್ಧಿ, ಸ್ವಾತಂತ್ರ್ಯಕ್ಕೋಸ್ಕರ ವಿಶ್ವದಾದ್ಯಂತ ಮಹಿಳೆಯರು ದನಿ ಎತ್ತಿದರು. 1945ರ ಹೊತ್ತಿಗೆ ಯೂರೋಪಿನಲ್ಲಿ ಲಿಂಗ ಸಮಾನತಾ ತತ್ವಗಳು ಜಾರಿಗೆ ಬಂದವು. ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಹೀಗಾಗಿ ಯೂರೋಪ್‌ನ ದೇಶಗಳ ಅಭಿವೃದ್ಧಿಯ ಜೊತೆ ಜೊತೆಗೆ ಮಹಿಳಾ ಸಶಕ್ತೀಕರಣವೂ ನಡೆದಿದೆ.

ಆದರೆ, ನಮ್ಮದೇಶದಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಪ್ರಜಾಸಮೂಹದಲ್ಲಿ ಅನಕ್ಷರತೆ ಸಮಸ್ಯೆ ಇದೆ. ಅವರಲ್ಲಿಯೂ ಮಹಿಳಾ ಅನಕ್ಷರಸ್ತರ ಸಂಖ್ಯೆ ಬಹುದೊಡ್ಡದಿದೆ. ಜೊತೆಗೆ, ಬಾಲ್ಯವಿವಾಹ, ಹೆಣ್ಣು ಬ್ರೂಣ ಹತ್ಯೆ, ಯುವತಿಯರ ಮಾರಾಟ ಪ್ರಕರಣಗಳು ಆತಂಕ ಹುಟ್ಟಿಸಿವೆ. ಅತ್ಯಾಚಾರದಂತಹ ಪ್ರಕರಣಳು ದಿಗ್ಭ್ರಾಂತಿ ಮೂಡಿಸುತ್ತಿವೆ. ಮೇಲ್ನೋಟಕ್ಕೆ ಗೋಚರವಾಗದ ಸೂಕ್ಷ್ಮ ಸಾಮಾಜಿಕ ಸಮಸ್ಯೆಗಳಲ್ಲಿ ಹುದುಗಿಹೋಗಿದೆ ಭಾರತೀಯ ಹೆಣ್ಣುಮಕ್ಕಳ ಸರ್ವತೋಮುಖ ಅಭಿವೃದ್ಧಿ.
ಹೀಗಾಗಿ ವಿಶ್ವ ಮಹಿಳಾ ದಿನದಂದು, ನಮ್ಮ ದೇಶದ ಸಮಸ್ತ ಜನತೆಯೂ ಮಹಿಳೆಯರ ರಕ್ಷಣೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಮಹಿಳಾ ದಿನದ ಅಭಿವೃದ್ಧಿಯ ಸಂದೇಶಗಳ ಜೊತೆ ಜೊತೆಗೇ ಮಹಿಳೆಯ ರಕ್ಷಣೆಯ ಜಾಗೃತಿಯನ್ನೂ ಮೂಡಿಸಬೇಕು. ಭಾರತೀಯ ಮಹಿಳೆಯರಿಗೆ ಸಂಪೂರ್ಣ ರಕ್ಷಣೆ ದೊರಕಿ, ಅವರ ಏಳಿಗೆಯ ದಾರಿ ಸುಗಮವಾಗಲಿ ಎಂಬುದು ನಮ್ಮ ಹಾರೈಕೆ.

ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.

 

Author : ಅಮೃತಾ ಹೆಗಡೆ

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited