Untitled Document
Sign Up | Login    
ವಿದ್ಯೆ ಕಲಿಯದಿದ್ದರೇನಂತೆ ವಿದ್ಯಾಲಯವನ್ನೇ ತೆರೆದರು....

ಅಭ್ಯಾಸದಲ್ಲಿ ನಿರತರಾಗಿರುವ ವಿದ್ಯಾರ್ಥಿನಿಯರು

’ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ನಾಣ್ನುಡಿಯಿದೆ. ಆದರೆ ಇಲ್ಲೊಬ್ಬರು ಮಹಿಳೆಯಿದ್ದಾರೆ. ಇವರು ಈ ನಾಣ್ನುಡಿಗೆ ಅಪವಾದ ಎನ್ನಬಹುದು. ಯಾಕೆಂದರೆ ಅಕ್ಷರಾಭ್ಯಾಸ ಮಾಡದೇ ವಸತಿ ಶಾಲೆಯನ್ನು ತೆರೆದು ಕಿವುಡು ಹಾಗೂ ಮೂಕ ವಿದ್ಯಾರ್ಥಿನಿಯರಿಗೆ ದಾರಿ ದೀಪವಾಗಿದ್ದಾರೆ. ಕೇಳಿದರೆ ಆಶ್ಚರ್ಯ ಮತ್ತು ಕುತೂಹಲ ಕೆರಳುತ್ತದೆ ಅಲ್ಲವೇ. ನಿಜ.. ಆ ತಾಯಿಯ ಸಾಧನೆಯೇ ಅಂಥದ್ದು.

ತಾನು ಅಕ್ಷರವನ್ನು ಕಲಿಯದಿದ್ದರೂ ವಿಶೇಷ ಹೆಣ್ಣು ಮಕ್ಕಳಿಗಾಗಿ ವಿದ್ಯೆದಾನ ನೀಡಬೇಕೆಂಬ ಹಂಬಲದಿಂದ ಕಿವುಡು ಹೆಣ್ಣು ಮಕ್ಕಳಿಗಾಗಿ ವಸತಿ ಶಾಲೆಯೊಂದನ್ನು ತೆರೆದರು. ಆ ಶಾಲೆಯೇ ಮೈಸೂರಿನ ’ಪುಟ್ಟವೀರಮ್ಮ ಕಿವುಡು ಹೆಣ್ಣು ಮಕ್ಕಳ ವಸತಿ ಶಾಲೆ’.

ಮೂಲತಹ ಮಂಡ್ಯದವರಾದ ಪುಟ್ಟವೀರಮ್ಮ ಪ್ರತಿ ಮಹಿಳೆಗೂ ಮಾದರಿಯಾಗಿದ್ದಾರೆ, ಮಾತ್ರವಲ್ಲ ಅವರ ಜೀವನ ಪ್ರತಿ ಮಹಿಳೆಗೂ ಸ್ಪೂರ್ತಿಯಾಗಿದೆ. ಸಂಕಷ್ಟಗಳ ಸರಮಾಲೆಗಳನ್ನೇ ಜೀವನದುದ್ದಕ್ಕೂ ಎದುರಿಸಿ ನಿಂತು, ಬದುಕಿನಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟು ಸಾಗಿದ ಇವರ ಬದುಕೇ ಒಂದು ಯಶೋಗಾಥೆ.... ಪುಟ್ಟವೀರಮ್ಮ ಓದಿದವರಲ್ಲ. ಹಾಗಂತ ಆರ್ಥಿಕವಾಗಿ ಸ್ಥಿತಿವಂತರೂ ಅಲ್ಲ. ಆದರೆ ಹೆಣ್ಣು ಮಕ್ಕಳಿಗಾಗಿ ವಸತಿ ಶಾಲೆ ನಿರ್ಮಿಸಿ, ಕಿವುಡು ಹೆಣ್ಣು ಮಕ್ಕಳಿಗೆ ಬದುಕಿನಾಸರೆಯಾಗಿದ್ದಾರೆ.

1989ರಲ್ಲಿ ಮೈಸೂರಿನ ವಾಗ್ದೇವಿನಗರದಲ್ಲಿ ಪ್ರಾರಂಭವಾದ ಈ ವಸತಿ ಶಾಲೆಯಲ್ಲಿ ಪ್ರಾರಂಭದಲ್ಲಿ ಕೇವಲ ಮೂರು ವಿದ್ಯಾರ್ಥಿನಿಯರಿದ್ದರು. ಅದೇ ಶಾಲೆ ಪ್ರಸ್ತುತ ದಿನದಲ್ಲಿ ನೂರು ವಿದ್ಯಾರ್ಥಿನಿಯರ ಬಾಳ ಬೆಳಕಿಗೆ ಮಾರ್ಗದರ್ಶನವಾಗಿದೆ.

1-10ನೇ ತರಗತಿವರೆಗೆ ವಸತಿಯೊಂದಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿರುವ ಈ ಶಾಲೆಯಲ್ಲಿ ವಿದ್ಯಾರ್ಥಿನಿಯರು ತಮಗಿರುವ ವೈಕಲ್ಯವನ್ನು ಮೀರಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2011-12ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶವನ್ನು ಪಡೆದಿದ್ದಾರೆ ಎಂಬು ಇನ್ನೊಂದು ವಿಶೇಷ.

ಇಲ್ಲಿ ಓದುವ ಮಕ್ಕಳಿಗೆ ಉಚಿತ ವಸತಿಯೊಂದಿಗೆ ಊಟ-ಬಟ್ಟೆ-ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತದೆ. 100 ವಿದ್ಯಾರ್ಥಿನಿಯರಿಗೆ ಸಮರ್ಥವಾಗಿ ಬೋಧನೆ ಮಾಡಲು 11 ಬೋಧಕ ಸಿಬ್ಬಂದಿಗಳಿದ್ದಾರೆ. ಕಿವುಡು ಹೆಣ್ಣು ಮಕ್ಕಳ ಶಾಲೆಯಾದರೂ ಸರ್ಕಾರದ ಸಹಾಯವಿಲ್ಲದಿದ್ದರೂ ಇತರ ಶಾಲೆಗಳಿಗಿಂತ ಸೌಲಭ್ಯದಲ್ಲಾಗಲಿ, ವಿದ್ಯಾರ್ಥಿಗಳ ಕಲಿಕೆಯಲ್ಲಾಗಲಿ ಕಡಿಮೆಯಿಲ್ಲ.

ಶಾಲೆಯ ಶಿಕ್ಷಕ ಹಾಗೂ ವಾರ್ಡನ್ ಆಗಿರುವ ಮಂಜುನಾಥ್, ಸರ್ಕಾರ ಇಂತಹ ಶಾಲೆಗಳನ್ನು ಗುರುತಿಸಿ ಸಹಾಯ ಮಾಡಬೇಕು. ಇತರ ಶಾಲೆಗಳಲ್ಲಿ ಓದುವ ಮಕ್ಕಳಿಗೆ ನೀಡುವಂತೆ ಉಚಿತ ಪಠ್ಯ-ಪುಸ್ತಕಗಳನ್ನು ಒದಗಿಸಬೆಕು. ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು ಎಂದು ಹೇಳುತ್ತಾರೆ.

ಪುಟ್ಟವೀರಮ್ಮ
23 ವರ್ಷಗಳ ಹಿಂದೆ ಮೈಸೂರು ಜಿಲ್ಲೆಯಲ್ಲಿ ಕೇವಲ ಅಂಗವಿಕಲ ಬಾಲಕರಿಗಷ್ಟೇ ವಸತಿ ಶಾಲೆಯಿತ್ತು. ಇದರಿಂದಾಗಿ ಅಂಗವಿಕಲ ಹೆಣ್ಣು ಮಕ್ಕಳಿಗೆ ಯಾವುದೇ ವಸತಿ ಶಾಲೆಗಳ ಸೌಲಭ್ಯವಿರಲಿಲ್ಲ. ಇದರಿಂದಾಗಿ ಕಿವುಡು ಹೆಣ್ಣು ಮಕ್ಕಳಿಗಾಗಿ ವಸತಿ ಶಾಲೆಯನ್ನು ನಿರ್ಮಿಸಿದರು. ಪ್ರಾರಂಭದಲ್ಲಿ ಈ ಶಾಲೆಗೆ ಇಬ್ಬರು ಹೆಣ್ಣು ಮಕ್ಕಳು ಬಂದು ಸೇರಿದರು. ಪುಟ್ಟವೀರಮ್ಮ ಸ್ವತಹ ತಾವೇ ಆ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಪ್ರಾರಂಭಿಸಿದರಲ್ಲದೇ ಊಟೋಪಚಾರಕ್ಕಾಗಿ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಧವಸ-ಧಾನ್ಯಗಳನ್ನು ಪಡೆದು ಬರುತ್ತಿದ್ದರು. ತಾವೇ ಅಡುಗೆ ತಯಾರಿಸಿ ಬಡಿಸಿ ಹೆಣ್ಣುಮಕ್ಕಳಿಗೆ ಪ್ರೀತಿ-ವಾತ್ಸಲ್ಯಗಳ ಧಾರೆಯೆರೆದು ಬೆಳೆಸಿದರು. ಆ ವಿದ್ಯಾರ್ಥಿನಿಯರ ಭವ್ಯ ಭವಿಷ್ಯದ ಬುನಾದಿಯಾಗಿ ನಿಂತರು. ಪ್ರಾರಂಭದಲ್ಲಿ ಮೂರನೇ ತರಗತಿ ವರೆಗೆ ನಡೆಯುತ್ತಿದ್ದ ಶಾಲೆ ಕಾಲ ಕ್ರಮೆಣ 10ನೇ ತರಗತಿವರೆಗೆ ವಿಸ್ತರಿಸಿತು.

ಪುಟ್ಟವೀರಮ್ಮ ಜೀವನ: ಸಂಕಷ್ಟಗಳನ್ನು ಮೆಟ್ಟಿ ನಿಂತ ಸಾಧಕಿ

1916ರಲ್ಲಿ ಜನಿಸಿದ ಪುಟ್ಟವೀರಮ್ಮ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಿರೇಮರಳ್ಳಿ ಗ್ರಾಮದವರು. ಕೆಂಚೇಗೌಡ-ಮಂಚಮ್ಮ ತಂದೆ-ತಾಯಿಯರು. ಅವರ ಮೂವರು ಮಕ್ಕಳಲ್ಲಿ ಪುಟ್ಟವೀರಮ್ಮ ಕೊನೆಯವರು. ತಂದೆ-ತಾಯಿಯರ ಮೂಲ ಕಸುಬು ಕೃಷಿಯಾದರೂ ಬಡತನದಿಂದ ಕೂಲಿ ಕೆಲಸವನ್ನೂ ಮಾಡುತ್ತಿದ್ದರು. ಪುಟ್ಟವೀರಮ್ಮ ತಾಯಿಯ ಗರ್ಭದಲ್ಲಿರುವಾಗಲೆ ತಂದೆ ಕೆಂಚೇಗೌಡರನ್ನು ಕಳೆದುಕೊಂಡರು. ಹೀಗಾಗಿ ಪುಟ್ಟವಿರಮ್ಮ ತಂದೆಯ ವಾತ್ಸಲ್ಯವಿರಲಿ, ಮುಖವನ್ನೂ ನೋಡಿರಲಿಲ್ಲ.

ಹೀಗಿರುವಾಗ ಇದ್ದಬದ್ದ ಆಸ್ತಿಯ ಮೆಲೆ ಸಂಬಂಧಿಕರ ಕಣ್ಣು ಬಿದ್ದಿತ್ತು. ಆಸ್ತಿಯನ್ನು ಉಳಿಸಿಕೊಳ್ಳಲು ಮಂಚಮ್ಮ ಪಡಬಾರದ ಕಷ್ಟಪಟ್ಟರು. ಈ ಸಂದರ್ಭದಲ್ಲಿ ಹಿರಿಮಗನನ್ನೂ ಕಳೆದುಕೊಳ್ಳಬೇಕಾದ ದುಸ್ಥಿತಿ ಒದಗಿತು. ಈ ವೇಳೆಗೆ ಪುಟ್ಟವೀರಮ್ಮರನ್ನು ಮಂಚಮ್ಮ ತನ್ನ ತವರು ಮನೆಯಲ್ಲಿ ಬಿಟ್ಟಿದ್ದರು. ಅಲ್ಲಿ ಪುಟ್ಟವೀರಮ್ಮ ಚಿಕ್ಕಮ್ಮನ ಕಾಟ ತಾಳಲಾರದೆ ಬೇಸತ್ತು ಹೋಗಿದ್ದರು. ಕೆಲ ವರ್ಷದಲ್ಲೆ ಅಜ್ಜಿಯೂ ಇಹಲೋಕಯಾತ್ರೆ ಮುಗಿಸಿದರು. ಇದರಿಂದ ಮಂಚಮ್ಮನಿಗೆ ಬರಸಿಡಿಲು ಬಡಿದಂತಾಯಿತು. ಒಂದೆಡೆ ಸಂಬಂಧಿಗಳ ಕಾಟ. ಇನ್ನೊಂದೆಡೆ ಆಸರೆಯಾಗಿದ್ದ ತಾಯಿಯ ಸಾವು... ಮಂಚಮ್ಮ ಹಾಗೂ ಇಬ್ಬರು ಪುಟ್ಟ ಮಕ್ಕಳು ಅಕ್ಷರಶ: ಬೀದಿಗೆ ಬರುವಂತಾಯಿತು. ಪರಿಸ್ಥಿತಿಯ ಗಂಭೀರತೆ ಅರಿತ ಮಂಚಮ್ಮ ತಮ್ಮಿಬ್ಬರು ಮಕ್ಕಳೊಂದಿಗೆ ಮೈಸೂರಿಗೆ ಬಂದರು.
ಇಷ್ಟೊತ್ತಿಗಾಗಲೆ ಪುಟ್ಟವೀರಮ್ಮ 5ನೆ ವರ್ಷಕ್ಕೆ ಕಾಲಿಟ್ಟಿದ್ದರು. ತಾಯಿಯ ಸಂಕಷ್ಟ ಕಂಡ ಪುಟ್ಟವೀರಮ್ಮ ತಾಯಿಯೊಂದಿಗೆ ತಾವು ದುಡಿಮೆಗೆ ಕೈಜೋಡಿಸಿದರು. ಕಾಲ ಹೀಗೆ ಮುಂದುವರಿಯುತ್ತಿರುವಂತೆ ಪುಟ್ಟವೀರಮ್ಮ 15ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಮದುವೆ ಮಾಡಲಾಯಿತು. ಗಂಡನ ಹಿಂಸೆ, ಆತನ ಸಾರಾಯಿ ಸಹವಾಸದಿಂದ ಮದುವೆ ಮುರಿದು ಬಿತ್ತು. ಇದರಿಂದ ಮತ್ತೆ ತಾಯಿ ಮಂಚಮ್ಮರೊಂದಿಗೆ ದುಡಿಮೆಗೆ ಕೈಜೋಡಿಸಿದರು. ಇಷ್ಟೊತ್ತಿಗಾಗಲೆ ಅಣ್ಣನಿಗೆ ಮದುವೆಯಾಗಿ ಬೇರೆ ಹೋಗಿದ್ದ. ಹೀಗಾಗಿ ತಾಯಿ-ಮಗಳಿಗೆ ಜೀವನ ಬಂಡಿ ಸಾಗಿಸಲು ಮತ್ತೆ ದುಡಿಯುವುದು ಅನಿವಾರ್ಯವಾಯಿತು. ತಾಯಿ ಮಂಚಮ್ಮ ಸಮ್ಮಲ್ ಪ್ಯಾಲೆಸ್ ನಲ್ಲಿ ಹಮಾಲಿಯಾಗಿ ಸೇರಿಕೊಂಡರೆ, ಮಗಳು ಪುಟ್ಟವೀರಮ್ಮ ಪಿಂಜರಾ ಪೊಲು ಹಾಗೂ ಕಾಫಿಕ್ಯೂರಿಂಗ್ ನಲ್ಲಿ ಕೆಲಸಕ್ಕೆ ಸೇರಿದರು. ಅಂತು ಇಂತು ಬದುಕಿನ ಬಂಡಿ ನಿಧಾನವಾಗಿ ಸಾಗುತ್ತಿದೆ ಎಂದು ನಿಟ್ಟುಸಿರುಬಿಡುತ್ತಿದ್ದಂತೆ ತಾಯಿ ಮಂಚಮ್ಮ ಇಹಲೋಕ ತ್ಯಜಿಸಿದರು. ಇದರಿಂದ ಪುಟ್ಟವೀರಮ್ಮ ಏಕಾಂಗಿಯಾಗಿ ಬದುಕಿನ ಸವಾಲುಗಳನ್ನು ಎದುರಿಸಬೇಕಾಯಿತು.

ಸಂಕಷ್ಟಗಳ ಸರಮಾಲೆಯನ್ನೇ ಜೀವನದುದ್ದಕ್ಕೂ ಅನುಭವಿಸಿದ ಪುಟ್ಟವಿರಮ್ಮನವರಿಗೆ ಇದ್ದುದರಲ್ಲಿಯೇ ಕಷ್ಟ-ಸುಖ ಹಂಚಿಕೊಂಡು, ಒಬ್ಬರಿಗೊಬ್ಬರು ಆಸರೆಯಾಗಿದ್ದ ತಾಯಿಯ ಸಾವು ಮನಸ್ಸಿನ ಮೇಲೆ ಘಾಸಿಗೊಳಿಸಿತು. ಜೀವನದ ನಿರಂತರ ಸಂಕಷ್ಟ, ಸವಾಲುಗಳನ್ನು ಕಂಡ ಪುಟ್ಟವೀರಮ್ಮನವರಿಗೆ ಬದುಕು ಶೂನ್ಯವೆನಿಸಿ ವಿರಕ್ತದೆಡೆಗೆ ಮನಸು ಸಾಗುವಂತೆ ಮಾಡಿತು. ಇದರಿಂದಾಗಿ ತಮಗೆ ಬರುತ್ತಿದ್ದ ಸಂಬಳದಲ್ಲಿಯೇ ಹೆಚ್ಚಿನ ಭಾಗವನ್ನು ಬಡ-ಅನಾಥ ಮಕ್ಕಳಿಗಾಗಿ ಮೀಸಲಿಟ್ಟರು. ತವರೂರಿನಲ್ಲಿ ರಾಮಮಂದಿರವನ್ನೂ ನಿರ್ಮಿಸಿದರು.

1973ರಲ್ಲಿ ನಿವೃತ್ತರಾದ ಪುಟ್ಟವೀರಮ್ಮ ಬಂದ ಹಣದಿಂದ ಒಂದು ಮನೆ ಖರೀದಿಸಿದರಲ್ಲದೇ ಅದರಲ್ಲೇ ’ಆಧ್ಯಾತ್ಮ ಆಶ್ರಮ’ ಎಂಬ ಧರ್ಮದರ್ಶಿ ಮಂಡಳಿ ತೆರೆದರು. ಬಳಿಕ ಬಡ ಹಾಗೂ ವಿಶೇಷ ಹೆಣ್ಣು ಮಕ್ಕಳ ಸಂಕಷ್ಟ ಕಂಡು ತಾವೇ 1989ರಲ್ಲಿ ವಸತಿ ಶಾಲೆಯನ್ನು ನಿರ್ಮಿಸಿದರು. ಹೀಗೆ ಹುಟ್ಟಿದ ಬಾಳ ಮುಂಜಾವಿನಿಂದ ಇಳಿವಯಸ್ಸಿನ ಸಂಧ್ಯಾಕಾಲದವರೆಗೂ ಕಷ್ಟ-ಕಾರ್ಪಣ್ಯ ಗಳನ್ನು ಎದುರಿಸುತ್ತಾ ಹೋರಾಟದ ಬದುಕನ್ನು ನಡೆಸಿ ಬೇರೆಯವರಿಗೂ ದಾರಿದೀಪವಾಗಿರುವ ಪುಟ್ಟವೀರಮ್ಮನವರಿಗೆ ಈಗ 96 ವರ್ಷ. ಈಗ ಈ ಹಿರಿಜೀವಕ್ಕೆ ಇವರ ಆಶ್ರಯದಲ್ಲಿ ಭವಿಷ್ಯ ರೂಪಿಸಿಕೊಳ್ಳುತ್ತಿರುವ ಹೆಣ್ಣುಮಕ್ಕಳ ಒಡನಾಟವೇ ಜೀವಚೈತನ್ಯ.

 

Author : ಚಂದ್ರಲೇಖಾ ರಾಕೇಶ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited