Untitled Document
Sign Up | Login    
ಕಳೆದು ಹೋಗದಿರಲಿ ಕನ್ನಡ ; ಕಳೆಗುಂದದಿರಲಿ ನುಡಿಪೂಜೆ

ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ

ಭಾವೈಕ್ಯದ ನೆಲೆವೀಡು, ಐತಿಹಾಸಿಕ ವಾಸ್ತು ವೌಭವಗಳನ್ನು ತನ್ನೊಡಾಲಲ್ಲಿಟ್ಟುಕೊಂಡಿರುವ ಗೊಮ್ಮಟ ನಗರಿ, ದಾರ್ಶನಿಕರಿಗೆ ಜನ್ಮ ನೀಡಿದ ಜೋಳದ ಬೀಡು ವಿಜಾಪುರದಲ್ಲಿ ನುಡಿ ಜಾತ್ರೆ 79ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂಭ್ರಮದಿಂದ ಸಂಪೂರ್ಣಗೊಂಡಿದೆ.

79ನೇ ಕನಾಡ ಸಾಹಿತ್ಯ ಸಮ್ಮೇಳನದ ನುಡಿ ಪೂಜೆಗೆ ಅಕ್ಷರಶ ಜನಜಾತ್ರೆಯೇ ನಡೆದಿತ್ತು. ಒಂದು ರೀತಿಯಲ್ಲಿ ಸಾಹಿತ್ಯ ಹಬ್ಬದಲ್ಲಿ ಕನ್ನಡಿಗರ ಭಾವನೆ ಕಟ್ಟೆಯೊಡೆಯಿತು ಎನ್ನಬಹುದು.

ಸಮ್ಮೇಳನಾಧ್ಯಕ್ಷ ಕೋ ಚನ್ನಬಸಪ್ಪ ನವರ ಮಾತುಗಳಲ್ಲಿ ಕನ್ನಡದ ಭಾವಗಂಗೆ ಸಮೃದ್ಧವಾಗಿ ಹರಿಯಿತು. ನಾಡಭಿಮಾನ, ಭಾಷೆಯ ನಂಟು ನಿರರ್ಗಳವಾಗಿ ಹೊರಹೊಮ್ಮಿದವು. ಸಮ್ಮೇಳನಾಧ್ಯಕ್ಷರ ಆಯ್ದ ಕೆಲ ಮಾತುಗಳು ಇಲ್ಲಿವೆ.

ಕೃಷಿಗೆ ಯೋಗ್ಯವಾದ ಭೂಮಿಯನ್ನು ಬಲವಂತವಾಗಿ ಸ್ವಾದೀನಪಡಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳಿಗೆ ಧಾರೆಯೆರೆಯುವ ಸರ್ಕಾರದ ಕ್ರಮ ಖಂಡನೀಯ, ವಿದೇಶಿ ಕಂಪನಿಗಳಿಗೆ ಅಗ್ಗದ ದರದಲ್ಲಿ ಕೃಷಿ ಭೂಮಿ ಕೊಡುವುದು ಘೋರ ಘಾತಕ. ಏಕಿಕೃತ ಕರ್ನಾಟಕದ ಸಮಸ್ಯೆಗಳು ಅನೇಕ ಎನ್ನುವುದಕ್ಕಿಂತ ಅನಂತ ಎನ್ನುವುದೇ ಸರಿ. ಅದರಲ್ಲೂ ಜಲ ವಿವಾದ, ಬೃಹತ್ ಕಂಪನಿಗಳಿಗೆ ಭೂಮಿ ಒದಗಿಸಲು ಭೂ ಬ್ಯಾಂಕ್ ಸ್ಥಾಪನೆಯಂತಹ ಕ್ರಮ ಮರಣ ಮೃದಂಗವಾಗಲಿದೆ. ಇಂತಹ ಅಪಾಯದಿಂದ ನಾವು ಪಾರಾಗದಿದ್ದರೆ ಕನ್ನಡವೂ ಉಳಿಯದು, ಕರ್ನಾಟಕವೂ ಉಳಿಯದು ಎಂದು ಕೋ ಚನ್ನಬಸಪ್ಪ ಕಠಿಣ ಸತ್ಯದ ಮಾತನ್ನಾಡಿದ್ದಾರೆ.
ಇಂಗ್ಲೀಷ್ ಕಲಿತರೆ ಮಾತ್ರ ನೌಕರಿ ಸಿಗುತ್ತದೆ ಎಂಬ ಭ್ರಮೆಯಿದೆ. ಈ ಭ್ರಮೆಯ ಮೂಲವನ್ನು ಕಿತ್ತು ಹಾಕಿದರೆ ಮಾತ್ರ ಕನ್ನಡ ಶಾಲೆಗಳಿಗೆ, ಕನ್ನಡ ಭಾಷೆಗಳಿಗೆ ಉಳಿವು ಸಾಧ್ಯ. ಕನ್ನಡ ಶಾಲೆಗಳಲ್ಲಿ ಓದಿದವರು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಮನವರಿಕೆ ಮಾಡಿದಾಗ ಮಾತ್ರ ಕನ್ನಡ ಬದುಕುತ್ತದೆ ಎಂದರು. ಕನ್ನಡ ನಾಡನ್ನು ಇಬ್ಬಾಗ ಮಾಡುವ ಹುನ್ನಾರ ನಡೆಯುತ್ತಿದೆ. ಈ ಕೆಲಸ ಅಡಗಬೇಕಾದರೆ ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ತರುವುದು ಅಗತ್ಯ. ಮರಾಠಿಗಳ ಆಕ್ರಮಣಕಾರಿ ನೀತಿಗೆ ನಾವು ಶರಣಾಗಬೇಕಿಲ್ಲ. ಬೆಳಗಾವಿ, ನಿಪ್ಪಾಣಿ ಸಂವಿದಾನಾತ್ಮಕವಾಗಿ ಕರ್ನಾಟಕದಲ್ಲಿವೆ. ಈ ಪ್ರದೇಶ ನಮ್ಮದೆನ್ನುವವರ ವಿರುದ್ಧ ನಾವು ದೊಣ್ಣೆ ಬೀಸಬೇಕಿಲ್ಲ. ಅದಕ್ಕಾಗಿ ಪೊಲೀಸರಿದ್ದಾರೆ.. ಸರ್ಕಾರವಿದೆ. ಒಂದುವೇಳೆ ಆ ಕೆಲಸ ಮಾಡದಿದ್ದರೆ ಅಂತಹ ಸರ್ಕಾರವನ್ನು ಕಿತ್ತೊಗೆಯುವ ಅಸ್ತ್ರ ಮತದಾರನ ಕೈಯಲ್ಲಿದೆ ಎಂದು ಕಿವಿಮಾತು ಹೇಳಿದರು.

ಸಾಹಿತ್ಯದ ಮೂಲಕ ದ್ವೇಷ ಬಿತ್ತುವ ಕಾರ್ಯ ಬೇಡ. ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದ ಮಾತ್ರಕ್ಕೆ ಯಾರ ತೇಜೋವಧೆ ಮಾಡುವ ಅಗತ್ಯವಿಲ್ಲ. ಸಾಹಿತಿಗಳು ಲೇಖನಿ ಎಂಬ ಖಡ್ಗ ಹಿಡಿದು ಭೂಮಾತೆಯ ರಕ್ಷಣೆಗೆ ಮುನ್ನುಗ್ಗಬೇಕು. ಇದು ಸಾಹಿತ್ಯ ಸಮ್ಮೇಳನ ವೆಂಬ ಈ ರಥದಲ್ಲಿ ಕುಳಿತು, ನಾನು ಕರೆ ಕೊಡುವ ದಂಡನಾಯಕನ ಆಜ್ನೆ ಎಂದು ನುಡಿದರು.

ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣದ ಪ್ರಮುಖಾಂಶಗಳು:

* ಟಿಪ್ಪು ಹಿಂದು ದ್ವೇಷಿ ಎನ್ನುವುದು ದೊಡ್ಡ ಸುಳ್ಳು. ಮರಾಠರಿಂದ ಭಗ್ನವಾದ ಶೃಂಗೇರಿ ಶಾರದಾಂಬ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದ್ದು ಟಿಪ್ಪು. ಶೃಂಗೇರಿ ಜಗದ್ಗುರುಗಳಿಗೆ ದೇವಿಯ ಮೆರವಣಿಗೆಗಾಗಿ ಪಲ್ಲಕ್ಕಿ ನೀಡಿದ್ದರು. ಇದು ಟಿಪ್ಪು ಹಿಂದು ಮತದ್ವೇಷಿಯಲ್ಲ ಎಂಬುದಕ್ಕೆ ಸಾಕ್ಷಿ.

* ಕನ್ನಡ ಉಳಿಸಿ ಇಂಗ್ಲೀಷ್ ಕಲಿಸಿ ಎಂಬುದು ನಮ್ಮ ಶಿಕ್ಷಣದ ನೀತಿಯಾಗಬೇಕು. ಪ್ರಾಥಮಿಕ ಹಂತದಲ್ಲಿ 4ನೇ ತರಗತಿವರೆಗೆ ಮಾತೃಭಾಷೆ, ಬಳಿಕ ಇಂಗ್ಲೀಷ್ ಭಾಷಾಜ್ನಾನ ನೀಡಬೇಕು.

* ಸಾಹಿತಿಗಳೇ ನಿಮ್ಮ ಕೈಯಲ್ಲಿ ಲೇಖನಿ ಎಂಬ ಖಡ್ಗವಿದೆ, ಬರೆಯುವ ಸ್ವಾತಂತ್ರ್ಯವಿದೆ ಎಂದು ಯಾರನ್ನೂ ವಧೆ ಮಾಡಬೇಡಿ.

* ಚಿತ್ರರಂಗದಲ್ಲಿ ಡಬ್ಬಿಂಗ್ ಲಕ್ಷಾಂತರ ಕಲೆಗಾರರ ಜೀವನೋಪಾಯಕ್ಕೆ ಮಾರಕ. ಡಂಬಿಂಗ್ ಆರ್ಥಿಕವಾಗಿ ಎಷ್ಟೇ ಅಭಿವೃದ್ಧಿಯಾದರೂ ನೈತಿಕ ಅಧ:ಪತನದ ಕೊರತೆಯನ್ನು ಅದು ಎಂದಿಗೂ ತುಂಬದು.

* ಚಿತ್ರೋದ್ಯಮ ಕೆಲವೇ ಕೆಲವು ನಟರ, ನಿರ್ಮಾಪಕರ ಸ್ವತ್ತಾಗಿದೆ.ಸಣ್ಣ ಕಲಾವಿದರು, ಉದಯೋನ್ಮುಖ ನಿರ್ದೇಶಕರು, ನಿರ್ಮಾಪಕರು ಮೂಲೆ ಗುಂಪಾಗಿದ್ದು, ಬಂಡವಾಳಶಾಹಿ ಧೋರಣೆ ಚಿತ್ರರಂಗದಲ್ಲಿ ನೆಲೆಯಾಗಿದೆ.
79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾದ 9 ನಿರ್ಣಯಗಳು:

1. ಕಾವೇರಿ ಐತೀರ್ಪು ಅಧಿಸೂಚನೆ ಬೇಡ, ಸಮಸ್ಯೆಗೆ ಸರ್ವ ಸಮ್ಮತ ತೀರ್ಪು
2. ವಿಜಾಪುರಕ್ಕೆ ವಿಜಯಪುರ ಎಂದು ಮರು ನಾಮಕರಣ
3. ರಾಜ್ಯದ ಎಲ್ಲಾ ಮಹಿಳಾ ಕಾಲೇಜುಗಳು ವಿಜಾಪುರ ಮಹಿಳಾ ವಿವಿ ಕಾಲೇಜಿನ ವ್ಯಾಪ್ತಿಯಲ್ಲಿ ಬರಬೇಕು
4. ಅನ್ಯಭಾಷಾ ಚಲನಚಿತ್ರ ಮತ್ತು ಮನರಂಜನಾ ಕಾರ್ಯಕ್ರಮಗಳ ಡಬ್ಬಿಂಗ್ ನಿಷೇಧ
5. ಸಂವಿಧಾನದಲ್ಲಿ ಉಲ್ಲೇಖಿಸಿರುವ ಎಲ್ಲಾ ಭಾಷೆಗಳಿಗೆ ಅಧಿಕೃತ ಸ್ಥಾನಮಾನ, ರಾಷ್ಟ್ರೀಯ ಭಾಷಾ ನೀತಿ
6. ಸಂವಿಧಾನದ ಪರಿಚ್ಛೇದ 371(ಜೆ) ಅಡಿಯಲ್ಲಿ ವಿಜಾಪುರ ಸೇರ್ಪಡೆ
7. ಸರೋಜಿನಿ ಮಹಿಷಿ ವರದಿ ಸಂಪೂರ್ಣ ಅನುಷ್ಠಾನ, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದಲ್ಲಿ ಮೀಸಲಾತಿ
8. ಸರ್ಕಾರಿ ಶಾಲೆ ಮುಚ್ಚಬಾರದು, ಮೂಲಭೂತ ಸೌಕರ್ಯ ಒದಗಿಸಬಾರದು.
9. ಕೃಷ್ಣಾ ಮೇಲ್ದಂಡೆ ಯೋಜನೆಯ 8 ಟಿಎಂಸಿ ಅಡಿ ನೀರು ಬಳಕೆ ಯೋಜನೆಗಳನ್ನು ತ್ವರಿತ ಅನುಷ್ಠಾನ. ಇವು ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾದ ನಿರ್ಣಯಗಳು.

1923 ಮೇ 21ರಿಂದ ಮೂರು ದಿನಗಳ ಕಾಲ ಇದೇ ಗೊಮ್ಮಟನಗರಿಯಲ್ಲಿ ನಡೆದಿದ್ದ 9ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ಶಿವಶಂಕರ ಶಾಸ್ತ್ರೀಗಳು ನಾಡಿಗೆ ಪರಭಾಷಾ ಗಾಳಿ ಬೀಸುತ್ತಿದ್ದು, ಸ್ವದೇಶ ಭಾಷಾಪ್ರೇಮ ಬೆಳೆಸಿಕೊಳ್ಳಬೇಕಿದೆ. ಎ ಬಿ ಸಿ ಡಿ ಕಲಿಸುವುದಕ್ಕೂ ಮುನ್ನ ನಮ್ಮ ಮಕ್ಕಳಿಗೆ ನೀತಿ, ಧರ್ಮ, ಭಾಷೆಯ ಮಹತ್ವವನ್ನು ಹೇಳಿಕೊಡಬೇಕು ಎಂದು ಹೇಳಿದ್ದರು. ಈಗ ನಡೆದ 79ನೇ ಸಾಹಿತ್ಯ ಸಮ್ಮೇಳನದಲ್ಲಿಯೂ ಅಧ್ಯಕ್ಷರಾದ ಕೋ ಚನ್ನಬಸಪ್ಪ ಇದೇ ಮಾತನ್ನು ಪುನರಾವರ್ತಿಸಬೇಕಾದ ಸ್ಥಿತಿ ಬಂದೊದಗಿರುವುದು ದುರಂತವೇ ಸರಿ.

ಅಂದರೆ ಒಂಭತ್ತು ದಶಕಗಳಿಂದ ಇಲ್ಲಿಯವರೆಗೆ ನಮ್ಮ ಭಾಷೆಯ ಮೇಲಾಗುತ್ತಿರುವ ಪರಭಾಷಾ ಪ್ರಭಾವ ಕಡಿಮೆಯಾಗಿಲ್ಲ. ಅದು ನಿತ್ಯ ನಿರಂತರವಾಗಿದೆ ಎಂಬುದಂತು ಸತ್ಯ. ಹಾಗಾದರೆ ಭಾಷಾಭಿವೃದ್ಧಿಗಾಗಿ ನಾವಾಗಲಿ, ಸರ್ಕಾರಗಳಾಗಲಿ, ಪರಿಷತ್ತಾಗಲಿ, ಸಂಘ-ಸಂಸ್ಥೆಗಳಾಗಲಿ ಮಾಡುತ್ತಿರುವುದಾದರೂ ಏನು ಎಂಬ ಪ್ರೆಶ್ನೆ ಉದ್ಭವವಾಗುತ್ತದೆ. ಅಷ್ಟೇ ಅಲ್ಲ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳು ಅನುಷ್ಠಾನಕ್ಕೆ ಬರದೆ ಹಾಗೇ ಕಾಗದದಲ್ಲೇ ಉಳಿಯುತ್ತದೆ ಎಂದಾಯಿತು.
ಹೀಗಿದ್ದರೂ ಈ ನಿರ್ಲಕ್ಷ ಧೋರಣೆ ಯಾಕೆ..? ಈ ಬಗ್ಗೆ ಯಾಕೆ ಯಾರೂ ಕಾರ್ಯೋನ್ಮುಖರಾಗುತ್ತಿಲ್ಲ..? ಸಾಹಿತ್ಯ ಸಮ್ಮೇಳನಗಳು ಬರುತ್ತವೆ, ನಡೆಯುತ್ತವೆ, ಮುಗಿಯುತ್ತವೆ ಎಂದಾದರೆ ಸಮ್ಮೇಳನದ ನಿಜವಾದ ಉದ್ದೇಶ, ಮೌಲ್ಯ-ಮಾಪನಗಳೇನು..? ಇಂದೇನಾಗುತ್ತಿದೆ ಎಂಬುದರ ಬಗ್ಗೆ ಗಮನವೆ ಇಲ್ಲವೆ..? ಸಾಹಿತ್ಯ ಸಮ್ಮೇಳನವನ್ನು ಈ ವರ್ಷ ಮಾಡಬೇಕು, ಮಾಡುತ್ತಿದ್ದೇವೆ ಎಂಬುದಕ್ಕಷ್ಟೇ ಸೀಮಿತವಾದರೆ ಸಾಹಿತ್ಯದ ಗತಿ, ಕನ್ನಡ ಭಾಷೆಯ ಉಳಿವು, ನಾಡ ಬೆಳವಣಿಗೆ ಮುಂದೇನಾಗಬಹುದು. ಹೀಗಾದರೆ ಸಾಹಿತ್ಯದ ಅಥವಾ ಭಾಷೆಯ ಅಭಿವೃದ್ಧಿ ಸಾಧ್ಯವೇ...! ಇದಕ್ಕೆಲ್ಲ ಕಾರಣವೇನು..? ಯಾರು? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವವಾಗುತ್ತವೆ. ಆದರೆ ಉತ್ತರ ಮಾತ್ರ ನಿರುತ್ತರ...

ಅದಿರಲಿ.. ಒಂಭತ್ತು ದಶಕಗಳ ಬಳಿಕ ಸೈನಿಕ ಶಾಲಾ ಆವರಣದಲ್ಲಿ ನಡೆದ ಈ ಸಾಹಿತ್ಯ ಹಬ್ಬ ಹಲವಾರು ಕುತೂಹಲ, ನಿರೀಕ್ಷೆಗಳನ್ನು ಮೂಡಿಸಿದ್ದಂತು ಸುಳ್ಳಲ್ಲ. ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯಗಳಿದ್ದರೂ ರೈತರ ಜಮೀನಿಗೆ ನೀರು ಹರಿದಿಲ್ಲ. ಕುಡಿಯುವ ನೀರಿನ ಸಮಸ್ಯೆಯಂತು ನೀಗಿಲ್ಲ. ದುಡಿಯಲು ಮನಸ್ಸಿದೆ, ಆದರೆ ದುಡಿಯುವ ಕೈಗಳಿಗೆ ಕೆಲಸವಿಲ್ಲ. ಅನ್ನಕ್ಕಾಗಿ ಗುಳೇ ಹೋಗುವ ಸ್ಥಿತಿ ತಪ್ಪಿಲ್ಲ. ಹೀಗಿರುವಾಗ ಈ ಸಾಹಿತ್ಯ ಸಮ್ಮೇಳನ ಈ ಎಲ್ಲಾ ಸಮಸ್ಯೆಗಳಿಗೆ ಬೆಳಕು ಚಲ್ಲುತ್ತದೆಯೇ ಎಂಬ ಆಸೆಯಲ್ಲಿದ್ದ ಜನತೆಗೆ ಅವರ ನಿರೀಕ್ಷೆಗಳು ಹುಸಿಯಾಗಿವೆ ಎಂದೇ ಹೇಳಬೇಕು.

ವಿಜಾಪುರದಲ್ಲಿ ನಡೆದ ಈ ಸಾಹಿತ್ಯ ಜಾತ್ರೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಯಕ್ಷ ಪ್ರಶ್ನೆ. ಯಾಕೆಂದರೆ ಪ್ರತಿ ಬಾರಿ ನಡೆಯುವ ಸಮ್ಮೇಳನದಂತೆ ಈ ಸಲವೂ ಸಾಹಿತ್ಯ ಹಬ್ಬ ಮುಗಿದಿದೆ. ಹಲವು ನಿರ್ಣಯಗಳನ್ನೂ ಕೈಗೊಳ್ಳಲಾಗಿದೆ. ಆದರೆ ಅದು ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುತ್ತದೆ. ಈ ಬಗ್ಗೆ ಸರ್ಕಾರ, ಸಾಹಿತಿಗಳು, ಜನಪ್ರತಿನಿಧಿಗಳು ಈ ಬಾರಿಯಾದರೂ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಒಟ್ಟಿನಲ್ಲಿ ಅಕ್ಷರ ಜಾತ್ರೆ ಎಂದೇ ಕರೆಯಲ್ಪಡುವ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ತೆರೆ ಬಿದ್ದಿದೆ. ಆದರೆ ವರ್ಷದಿಂದ ವರ್ಷಕ್ಕೆ ಸಾಹಿತ್ಯ ಹಬ್ಬ ಕಳೆಗುಂದುತ್ತಿರುವುದಂತು ಸತ್ಯ. ಬಹುಶ: ಈಗಲಾದರೂ ನಾವು ಎಚ್ಚೆತ್ತುಕೊಂಡರೆ ಕನ್ನಡ ಭಾಷೆ, ಕನ್ನಡ ನಾಡನ್ನು ಉಳಿಸಿ ಬೆಳೆಸಬಹುದು. ಕನ್ನಡ ನಾಡು-ನುಡಿಯ ಸ್ಥಿತಿ ಏನಾಗುತ್ತಿದೆ ಎಂಬುದನ್ನು ಪ್ರತಿಯೊಬ್ಬ ಕನ್ನಡಿಗನು ಆತ್ಮ ವಿಮರ್ಷೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ.

 

Author : ಚಂದ್ರಲೇಖಾ ರಾಕೇಶ್

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited