Untitled Document
Sign Up | Login    
ರೋಬೋ ಫೆಸ್ಟ್ ನಲ್ಲಿ ಮಕ್ಕಳ ಕಲರವ

ರೋಬೊಟಿಕ್ ಉತ್ಸವದಲ್ಲಿ ಪ್ರದರ್ಶನಗೊಂಡ ರೋಬೊಟ್‌ಗಳು.

ಅಲ್ಲೆಲ್ಲ ರೋಬೋಟ್‌ಗಳೇ ತುಂಬಿದ್ದವು. ಪ್ರತಿಯೊಂದು ರೋಬೋಟ್‌ ಕೂಡ ಅತ್ಯಂತ ವಿಶೇಷವಾಗಿತ್ತು. ಹೊಸ ಹೊಸ ಕಲ್ಪನೆಯಲ್ಲಿ ತಯಾರಿಸಲಾದ ಯಂತ್ರ ಮಾನವ ನೋಡುಗರ ಮನ ಸೆಳೆಯಿತು. ಜೊತೆಗೆ ವಿಜ್ಞಾನ ಸ್ಪರ್ಧೆ-ಆಟ, ಪಥಸಂಚಲನ, ವೈಮಾನಿಕ ಮಾದರಿಗಳ ಪ್ರದರ್ಶನ ನೆರೆದ ಜನರಿಗೆ ಹೊಸ ಅನುಭವ ನೀಡಿತು.

ವಿದ್ಯಾರ್ಥಿಗಳ ಕೈಯಲ್ಲಿ ತಯಾರಾದ ಈ ಎಲ್ಲಾ ರೋಬೋಟ್‌ಗಳು ಕಂಡುಬಂದಿದ್ದು, ಯಂತ್ರ ಮಾನವ ಉತ್ಸವದಲ್ಲಿ. ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ನಡೆದ 'ರೋಬೋ ಫೆಸ್ಟ್' ಗೆ ಸಿಲಿಕಾನ್ ವ್ಯಾಲಿ ಬೆಂಗಳೂರು ಸಾಕ್ಷಿಯಾಯಿತು.

ಮಕ್ಕಳ ಹೊಸ ಹೊಸ ಕಲ್ಪನೆಗಳಿಗೆ ಪ್ರೋತ್ಸಾಹಿಸುವ ಸಲುವಾಗಿ, ವೈಜ್ಞಾನಿಕತೆಯ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೋವಾಟೆಕ್‌ ರೋಬೋ ಸಂಸ್ಥೆ ಹಾಗೂ ಅಮೆರಿಕದ ಮಿಚಿಗನ್‌ ಲಾರೆನ್ಸ್‌ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ರೋಬೋ ಫೆಸ್ಟ್‌ ಆಯೋಜನೆಗೊಂಡಿತ್ತು. ಇದೇ ಜ.28ರಂದು ನಡೆದ ಈ ಉತ್ಸವ ಅತ್ಯಂತ ಸೊಗಸಾಗಿತ್ತು.

ಮಕ್ಕಳು ತಯಾರಿಸಿದ ಮಯಂತ್ರಮಾನವ.
ಎಲೆಕ್ಟ್ರಾನಿಕ್‌ ಸಿಟಿಯ ಸಮೀಪದ ಎಬೆನೆಜರ್‌ ಅಂತಾರಾಷ್ಟ್ರೀಯ ಶಾಲೆಯಲ್ಲಿ ಆಯೋಜಿಸಲಾದ ಈ ಉತ್ಸವದಲ್ಲಿ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 5ನೇ ತರಗತಿಯಿಂದ ಪಿಯುಸಿ ವರೆಗಿನ ಮಕ್ಕಳ ತಂತ್ರಜ್ನಾನ ಪ್ರತಿಭಾ ಪ್ರದರ್ಶನಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ರಾಜ್ಯಾದ್ಯಂತ ಸುಮಾರು 2೦ ಶಾಲಾ ಕಾಲೇಜುಗಳ ಮಕ್ಕಳು ಈ ಮೇಳದಲ್ಲಿ ಪಾಲ್ಗೊಂಡಿದ್ದು, ಸುಮರು 140 ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಿದರು. ಯಂತ್ರಮಾನವ ಉತ್ಸವದಲ್ಲಿ ಭಾಗವಹಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ, ಮಾಹಿತಿ ತಂತ್ರಜ್ಞಾನ ಕಲಿಕೆಯ ಜೊತೆಗೆ ಸಾಕಷ್ಟು ಮನೋರಂಜನೆಯೂ ಸಿಕ್ಕಿತ್ತು.

ಈ ರೋಬೊಟ್ ಗಳಲ್ಲಿ ಒಂದು ಕಳೆದು ಹೋದ ವಸ್ತುಗಳನ್ನು ಹುಡುಕುತ್ತಿದ್ದರೆ, ಮತ್ತೊಂದು ಲೆಕ್ಕಚಾರ ಮಾಡುತ್ತಿತ್ತು. ಇನ್ನೊಂದು ಶುಚಿಗೊಳಿಸುವ ಕೆಲಸ ಮಾಡುತ್ತಿತ್ತು. ಇದಕ್ಕೂ ಮಿಗಿಲಾಗಿ 4-5 ಮಹಡಿಗಳ ಕಟ್ಟಡಗಳಲ್ಲಿ ರಾಸಾಯನಿಕ ದಾಳಿ ಅಥವಾ ಅಪಘಾತ ಸಂಭವಿಸಿದರೆ ಆ ಕಟ್ಟಡದಲ್ಲಿ ಸಿಲುಕಿಕೊಂಡ ಜನರನ್ನು ರಕ್ಷಿಸುವ ವಿಧಾನಗಳ ಬಗ್ಗೆ ರೋಬೋಟ್‌ ತೋರಿಸಿಕೊಟ್ಟಿತ್ತು. 4-5 ಮಹಡಿಗಳಲ್ಲಿ ಯಾರು ಸಿಲುಕಿದ್ದಾರೆ ಎಂದು ಪರೀಕ್ಷಿಸಿ ಅವರನ್ನು ಕ್ಷಣ ಮಾತ್ರದಲ್ಲಿ ರಕ್ಷಿಸಿತ್ತು. ಅಷ್ಟೇ ಅಲ್ಲದೆ, ರಾಸಾಯನಿಕಗಳಿಂದ ತುಂಬಿದ್ದ ಕಟ್ಟಡವನ್ನು ಶುಚಿಗೊಳಿಸುವ ಕೆಲಸವನ್ನೂ ರೋಬೋಟ್‌ ಮಾಡುತ್ತಿತ್ತು.
ಈ ಎಲ್ಲಾ ಪ್ರಾತ್ಯಕ್ಷಿಕೆಗಳು, ವಿಜ್ಞಾನಾಸಕ್ತರಿಗೆ ಅತೀವ ಸಂತಸ ಕೊಟ್ಟವು. ಅದರಲ್ಲಿಯೂ ಮಕ್ಕಳು ತಯಾರಿಸಿದ್ದ ಇಂಥ ಕಲ್ಪನೆಯ ರೋಬೋಟ್‌ ಎಲ್ಲರನ್ನು ನಿಬ್ಬೆರಗಾಗಿಸಿತ್ತು.

ಇಂಥ ಯಂತ್ರದ ಬಗ್ಗೆ ತಿಳಿಸಿಕೊಡಲು ರಾಜ್ಯಾದ್ಯಂತ ಪ್ರದರ್ಶನವನ್ನು ಏರ್ಪಡಿಸಬೇಕು ಎಂಬುದು ಸಂಸ್ಥೆಯ ಗುರಿ. ಜೊತೆಗೆ ಈ ಯಂತ್ರಗಳ ತಯಾರಿಕೆಯಿಂದ ಮಕ್ಕಳ ಬುದ್ಧಿ ಮಟ್ಟವೂ ಹೆಚ್ಚುತ್ತದೆ ಎಂದು ಸಂಸ್ಥೆ ಅಭಿಪ್ರಾಯ ಪಡುತ್ತದೆ. ಮೇಳದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಅಮೇರಿಕಾಕ್ಕೆ ಕರೆದೊಯ್ದು ಅಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಅಮೆರಿಕದ ಮಿಚಿಗನ್‌ ಲಾರೆನ್ಸ್‌ ತಾಂತ್ರಿಕ ವಿಶ್ವವಿದ್ಯಾಲಯ ತಿಳಿಸಿದೆ.

ಯುವ ಮನಸ್ಸುಗಳಲ್ಲಿ ಸ್ಪರ್ಧಾ ಮನೋಭಾವವನ್ನು ಉತ್ತೇಜಿಸುವುದು, ಯಂತ್ರಗಳ ಮೇಲೆ ಮಾನವ ಹೇಗೆ ನಿಯಂತ್ರಣ ಸಾಧಿಸಬಹುದು ಎಂಬುದನ್ನು ತಿಳಿಸಿಕೊಡುವ ಉದ್ದೇಶ ಹೊಂದಿದ್ದ ಈ ಕಾರ್ಯಕ್ರಮ ನಿಜವಾಗಿಯೂ ಅತ್ಯುತ್ತಮ ಕಾರ್ಯಕ್ರಮ.

ಅಮೆರಿಕ, ಜಪಾನ್‌ನಂತಹ ದೇಶಗಳಲ್ಲಿ ಪ್ರಾಥಮಿಕ ಶಾಲೆಯಲ್ಲಿಯೇ ರೋಬೋಟಿಕ್‌ ವಿಷಯಗಳನ್ನು ಬೋಧಿಸಲಾಗುತ್ತದೆ. ಆದರೆ ಭಾರತದಲ್ಲಿ ಈ ವಿಷಯಗಳು ಮಕ್ಕಳಿಗೆ ಎಟಕುವುದೇ ಇಲ್ಲ. ಇದೇ ಕಾರಣಕ್ಕೆ ರೋಬೋಟ್‌ ವಿಜ್ಞಾನದ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ನೋವಾಟೆಕ್‌ ರೋಬೋ ಸಂಸ್ಥೆ, ಮಿಚಿಗನ್‌ ಲಾರೆನ್ಸ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಇಂಥಹ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇಂಥ ಇನ್ನಷ್ಟು ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆಯಲಿ ಎಂಬುದು ಎಲ್ಲರ ಆಶಯ.

 

Author : ಸೀಮಾ ಎಸ್ ಭಟ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited