Untitled Document
Sign Up | Login    
ಬೆಳ್ಳಾರೆಯ ಬಹುಮುಖ ಕಲೆಗಾರ ಐತ್ತ

ಮಣ್ಣಿನ ವಿಗ್ರಹಗಳನ್ನು ಮಾಡುತ್ತಿರುವ ಐತ್ತರು

ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬುದು ಹಿರಿಯರ ಅನುಭವದ ಮಾತು. ಒಂದು ನಿರ್ದಿಷ್ಟ ಕಲೆಯಲ್ಲಿ ಗುರುತಿಸಿಕೊಂಡವರನ್ನು ನಾವು ಸಮಾಜದಲ್ಲಿ ಹೆಚ್ಚಾಗಿ ಕಾಣಬಹುದು. ಇವರಲ್ಲಿ ಕಲೆಯನ್ನೆ ವೃತ್ತಿಯನ್ನಾಗಿಸಿಕೊಂಡವರು ಅನೇಕರಿದ್ದಾರೆ. ಕೆಲವರು ಕಲೆಯನ್ನು ಹವ್ಯಾಸವನ್ನಾಗಿ ತೊಡಗಿಸಿಕೊಂಡವರು ನಮ್ಮ ಮುಂದೆ ಇದ್ದಾರೆ. ಅವರಲ್ಲಿ ಬೆಳ್ಳಾರೆ ಗ್ರಾಮದ ಪಾಟಾಜೆಯ ಐತ್ತ ಎಂಬವರು ಊರಿನ ಹೆಮ್ಮೆಯ ಬಹು ಮುಖ ಕಲಾವಿದ.

ಆಡು ಮುಟ್ಟದ ಸೊಪ್ಪಿಲ್ಲ.... ಎಂಬ ಗಾದೆ ಮಾತಿನಂತೆ ಕಲಾ ಪ್ರಕರಗಳಲ್ಲಿ ಐತ್ತರು ಕೈಯಾಡಿಸದ ಕ್ಷೇತ್ರವಿಲ್ಲವೆಂದೇ ಹೇಳಬಹುದು. ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂಬ ನುಡಿ ಐತ್ತರಿಗೆ ಅಪವಾದ ಆಗಬಹುದು. ಐತ್ತರಿಗೆ ಯಾರೊಬ್ಬರು ಗುರುವಿಲ್ಲ. ಮಹಾಭಾರತದಲ್ಲಿ ಬಿಲ್ಲು ವಿದ್ಯೆ ಕಲಿಯಲು ಅರ್ಜುನ ದ್ರೋಣಚಾರ್ಯರ ಮೂರ್ತಿಯನ್ನು ಮಾಡಿ ಅದರ ಮುಂದೆ ಬಿಲ್ಲು ವಿದ್ಯೆ ಕಲಿತ. ಆದರೆ ಐತ್ತರು ಯೊರೊಬ್ಬನ ಮೂರ್ತಿ ಮಾಡಿ ಅದರ ಮುಂದೆಯೂ ತನ್ನ ಕಲಾ ಪ್ರಕಾರಗಳನ್ನು ಕಲಿತಿಲ್ಲ. ತನ್ನ ಸ್ವಂತ ಆಲೋಚನೆಯಿಂದ ಓರ್ವ ಸೃಜನಶೀಲ ಕಲಾವಿದರಾಗಿ ಮಿಂಚಿದ್ದಾರೆ.

ತಾವು ತಯಾರಿಸಿದ ವೀಣೆಯ ಜೊತೆ ಐತ್ತರು
62 ವರ್ಷದ ಐತ್ತರು ಆಗಿನ ಕಾಲದಲ್ಲಿ 7ನೇ ತರಗತಿಯನ್ನು ಉತ್ತೀರ್ಣರಾಗಿದ್ದಾರೆ. ತನ್ನ ಸಹೋದರನ ಮರಣದಿಂದ ಸಂಸಾರ ನಿರ್ವಹಣೆಯ ಜವಾಬ್ದಾರಿ ಇವರ ಮೇಲೆ ಬಿದ್ದ ಪರಿಣಾಮ ಶಾಲೆಯನ್ನು ತೊರೆದು ಕೂಲಿಯ ಹಾದಿಯನ್ನು ಹಿಡಿಯುವುದು ಅನಿವಾರ್ಯವಾಯಿತು. ಆಗಿನ ಕಾಲದಲ್ಲಿ ಸ್ವಲ್ಪ ಪ್ರಯತ್ನ ಪಟ್ಟರೆ ಸರಕಾರಿ ಉದ್ಯೋಗಕ್ಕೆ ಸೇರಬಹುದಿತ್ತು. ಉದ್ಯೋಗಕ್ಕೆ ಅವರು ಮನಸು ಮಾಡದ ಕಾರಣ ಇಂದು ನಮ್ಮ ಮುಂದೆ ಓರ್ವ ಕಲಾವಿದರಾಗಿ ಉಳಿದುಕೊಂಡಿದ್ದಾರೆ.

ಐತ್ತರು ಗಣಪತಿ, ಶಾರದಾ ದೇವಿಯ ಮಣ್ಣಿನ ವಿಗ್ರಹಗಳನ್ನು ,ಅಲ್ಲದೆ ಮುಖವಾಡ, ಹಾವು, ವೀಣೆ, ಚರ್ಮವಾದ್ಯಗಳ ತಯಾರಿ, ಪೇಂಟಿಂಗ್ ಮಾಡುವುದರಲ್ಲಿ ಎತ್ತಿದ ಕೈ. ಜಾನಪದ ಹಾಡು ಬಲ್ಲರು. ಜೊತೆಗೆ ಜಾನಪದ ನೃತ್ಯಗಳನ್ನು ಮಾಡುತ್ತಾರೆ. ಗಣೇಶ ಚತುರ್ಥಿ ಮತ್ತು ನವರಾತ್ರಿ ಸಮಯದಲ್ಲಿ ಗಣೇಶ ಮತ್ತು ಶಾರದಾ ದೇವಿಯ ಮಣ್ಣಿನ ವಿಗ್ರಹ ತಯಾರಿಸುವ ಕೆಲಸ ಮಾಡುತ್ತಾರೆ.
'ಕೆರೆಯ ಕಪ್ಪು ಜೇಡಿ ಮಣ್ಣಿನಿಂದ ವಿಗ್ರಹ ತಯಾರಿಸುತ್ತೇನೆ. ಇದರ ಪೂರ್ಣ ಕೆಲಸವಾಗುದಕ್ಕೆ ಒಂದು ತಿಂಗಳು ಬೇಕಾಗುತ್ತೆ. ಹಗಲು ರಾತ್ರಿ ದುಡಿಯುತ್ತೇನೆ. ಒಂದೊಂದು ಸಾರಿ ಕೆಲಸ ಮುಗಿಯುವಾಗ ಬೆಳಗಾಗಿ ಕೋಳಿ ಕೂಗುತ್ತದೆ ಆದರೆ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ', ಎಂದು ಐತ್ತ ತಮ್ಮ ನೋವನ್ನು ವ್ಯಕ್ತ ಪಡಿಸುತ್ತಾರೆ. ಶಾರದೆಯ ವಿಗ್ರಹಕ್ಕೆ 1500 ರೂ.ರಿಂದ 17೦೦ ರೂ ವರೆಗೆ ದೊರೆಯುತ್ತದೆ. ಆದರೆ ಒಂದೊಂದು ವಿಗ್ರಹಕ್ಕೆ ಖರ್ಚು ದುಬಾರಿಯಾಗುತ್ತದೆ ಎಂದು ಹೇಳುತ್ತಾರೆ.

ಬೆಳ್ಳಾರೆ ಪರಿಸರದಲ್ಲಿ ನಡೆಯುವ ಶಾರದೋತ್ಸವಕ್ಕೆ ಮತ್ತು ಗಣೇಶೊತ್ಸಕ್ಕೆ ಐತ್ತರು ಮಾಡಿದ ವಿಗ್ರಹಗಳೇ ಆರಾಧಿಸಲ್ಪಡುತ್ತವೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಮತ್ತು ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೆ ಏಳು ಹೆಡೆಯ ವಾಸುಖಿಯನ್ನು ತಯಾರಿಸಿ ಕೊಟ್ಟಿದ್ದಾರೆ.

ಅದು ನೋಡುವಾಗ ಅಪ್ಪಟ ಜೀವಂತ ಹಾವಿನಂತೆ ಕಾಣುತ್ತದೆ. ಅವುಗಳನ್ನು ಅಲ್ಲಿಯ ವಸ್ತು ಸಂಗ್ರಾಹಾಲಯದಲ್ಲಿ ಇಡಲಾಗಿದೆ. ಐತ್ತರ ಬಳಿ ಅನೇಕ ಮಕ್ಕಳು ಬಂದು ಕಲೆಯನ್ನು ಕಲಿಯುತ್ತಿದ್ದು ಅವರಿಗೆ ಉಚಿತವಾಗಿ ಕಲಾ ವಿದ್ಯೆಯನ್ನು ದಾನ ಮಾಡುತ್ತಿದ್ದಾರೆ. ಇವರ ಮೂರು ಮಂದಿ ಶಿಷ್ಯರಿಗೆ ಸರಕಾರಿ ಉದ್ಯೋಗ್ಯ ಲಭಿಸಿದೆ.

ಇವರ ಎಲ್ಲಾ ಕೆಲಸಗಳಿಗೆ ಮೊಮ್ಮಗಳಾದ ಐದನೇ ತರಗತಿ ವಿದ್ಯಾರ್ಥಿನಿ ನಂದಿನಿ, ಮಗ ಆದಿತ್ಯ ಮತ್ತು ಪತ್ನಿ ಸಹಕಾರ ನೀಡುತ್ತಿದ್ದಾರೆ. ಸ್ಥಳೀಯ ಅನೇಕ ಸಂಘ ಸಂಸ್ಥೆಗಳು ಐತ್ತರನ್ನು ಗುರುತಿಸಿ ಗೌರವಿಸಿದೆ. ಸರಕಾರದ ಮಟ್ಟದಲ್ಲಿ ಈ ಬಡ ಕಲಾವಿದನನ್ನು ಗುರುತಿಸುವ ಕೆಲಸ ಆಗಬೇಕಾಗಿದೆ.

 

Author : ತೇಜೇಶ್ವರ್ ಕುಂದಲ್ಪಾಡಿ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited