Untitled Document
Sign Up | Login    
ವಿವೇಕಾನಂದರಿಗೆ ನುಡಿ ನಮನ - ಇಂದು ರಾಷ್ಟ್ರೀಯ ಯುವ ದಿನ

ಸ್ವಾಮಿ ವಿವೇಕಾನಂದ ಎಂಬ ಅದಮ್ಯ ಚೈತನ್ಯ

“ ವ್ಯಕ್ತಿ ತಾನು ದುರ್ಬಲನೆಂದು ಭಾವಿಸಬಾರದು. ಏಕೆಂದರೆ ದೌರ್ಬಲ್ಯವೇ ಪಾಪ, ದೌರ್ಬಲ್ಯವೇ ಮರಣ. ತನ್ನ ದೌರ್ಬಲ್ಯವನ್ನು ಗೆಲ್ಲುವುದರಿಂದ ಎಲ್ಲವನ್ನೂ ಸಾಧಿಸಬಹುದು. ತನ್ನ ಆತ್ಮವಿಶ್ವಾಸದಿಂದ ಎದ್ದು ನಿಲ್ಲಬೇಕು, ತನ್ನೊಳಗಿರುವ ದೈವಿಕತೆಯನ್ನು ಹೊರಚಿಮ್ಮಬೇಕು…” ಇಂಥ ಘೋಷಣೆಯೊಂದಿಗೆ ದೇಶದ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ಮಹಾನ್‌ ವ್ಯಕ್ತಿಗಳೇ ಸ್ವಾಮಿ ವಿವೇಕಾನಂದರು. ದೇಶದ ಯುವ ಶಕ್ತಿಗಳಿಗೆ ಆಂತರ್ಯದ ಸತ್ವ ತುಂಬುವಲ್ಲಿ ಯಶಸ್ವಿಯಾದ ಅದ್ಭುತ ತತ್ವಜ್ಞಾನಿಗಳು ಇವರು. ನಮ್ಮ ದೇಶದ ತತ್ವವನ್ನು - ಸತ್ವವನ್ನು ಪ್ರಪಂಚಕ್ಕೆ ಸಾರಿದ ದೇಶದ ಈ ಹೆಮ್ಮೆಯ ಪುತ್ರನಲ್ಲಿತ್ತು ತಾಯ್ನಾಡು ಮತ್ತು ದೇಶದ ಸಂಸ್ಕೃತಿಯ ಬಗ್ಗೆ ಅಗಾಧವಾದ ಪ್ರೀತಿ. ಯುವ ಶಕ್ತಿಯೇ ದೇಶದ ಶಕ್ತಿ ಎಂಬ ಘೋಷಣೆ ಸಾರಿದ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುವುದರ ಮೂಲಕ ಸರಕಾರ ವಿವೇಕಾನಂದರಿಗೆ ಗೌರವ ಸೂಚಿಸಿದೆ.

‘ಸ್ವಾಮಿ ವಿವೇಕಾನಂದರಾಗುವ ಮೊದಲು ಅಂದರೆ, ಇವರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. 1862 ಜನವರಿ 12ರಂದು ಜನಿಸಿದ ನರೇಂದ್ರ, ಮುಂದೆ ಇಡೀ ದೇಶದ ಶಕ್ತಿಯಾಗಿ ಬೆಳೆದರು. ಅತ್ಯಂತ ಚೂಟಿ ಮತ್ತು ತುಂಟತನದ ಸ್ವಭಾವದ ಈ ಬಾಲಕನಲ್ಲಿದ್ದ ಅಧಮ್ಯ ಚೇತನವನ್ನು ಮೊದಲು ಗುರುತಿಸಿದ್ದು ಶಿವಭಕ್ತೆಯಾಗಿದ್ದ ವಿವೇಕಾನಂದರ ತಾಯಿ ಭುವನೇಶ್ವರಿ ದೇವಿ. ತನ್ನ ಶಿವಪೂಜೆಯ ಫಲವಾಗಿ ಹುಟ್ಟಿದ್ದ ಮಗ ನರೇಂದ್ರ, ಸಾಕ್ಷಾತ್‌ ಶಿವನೇ ಎಂದು ನಂಬಿದ್ದರು ಅವರು. ನರೇಂದ್ರ ಪುಟ್ಟ ಮಗುವಾಗಿದ್ದಾಗಲೇ ರಾಮಾಯಣ, ಮಹಾಭಾರತ, ಪುರಾಣಗಳನ್ನು ಓದಿ ತಿಳಿಸಿದ್ದರು ತಾಯಿ ಭುವನೇಶ್ವರಿ ದೇವಿ. ವೃತ್ತಿಯಲ್ಲಿ ವಕೀಲರಾಗಿದ್ದ ತಂದೆ ವಿಶ್ವನಾಥದತ್ತ, ದೈವಭಕ್ತರಲ್ಲದಿದ್ದರೂ ಜನಾನುರಾಗಿಗಳಾಗಿದ್ದರು. ಸಾಕಷ್ಟು ದಾನ ಧರ್ಮ ಮಾಡಿ ಜನರ ಪ್ರೀತಿ ಸಂಪಾದಿಸಿಕೊಂಡಿದ್ದರು. ಇಂಥ ಆದರ್ಶ ತಂದೆ-ತಾಯಿಗಳ ಆರೈಕೆಯಲ್ಲಿ ಬೆಳೆದ ನರೇಂದ್ರನಿಗೆ ದೈವಭಕ್ತಿ, ದೇಶಭಕ್ತಿ, ತೀಕ್ಷ್ಣ ಬುದ್ಧಿಶಕ್ತಿ, ಆತ್ಮವಿಶ್ವಾಸ, ನಿರ್ಭಯತೆ ಮತ್ತು ದೃಢತೆ, ಜನ್ಮದತ್ತವಾಗಿ ಬಂದಿತ್ತು.

ಸ್ವಾಮಿ ವಿವೇಕಾನಂದ
1879ರಲ್ಲಿ ಕಲ್ಕತ್ತಾದ ಸ್ಕೊಟಿಷ್‌ಚರ್ಚ್‌ ಕಾಲೇಜಿನಲ್ಲಿ ನರೇಂದ್ರ ನಾಥ ದತ್ತ, ಪಾಶ್ಚಾತ್ಯ ತರ್ಕ, ತತ್ವಶಾಸ್ತ್ರ ಹಾಗೂ ಇತಿಹಾಸವನ್ನು ಅಧ್ಯಯನ ಮಾಡಿದರು. ನಂತರ 1881ರಲ್ಲಿ ಲಲಿತ ಕಲೆಯ ಪದವಿಯನ್ನು ಹಾಗೂ 1884ರಲ್ಲಿ ಕಲಾ ಪದವಿಯನ್ನೂ ಪಡೆದರು. ಇಷ್ಟರಲ್ಲೇ ನರೇಂದ್ರನಾಥ ದತ್ತನಿಗೆ ಶ್ರೀ ರಾಮಕೃಷ್ಣ ಪರಮಹಂಸರ ಪರಿಚಯವಾಗಿತ್ತು. 1881ರಲ್ಲಿಯೇ ಪರಮಹಂಸರನ್ನು ಭೇಟಿಯಾಗಿದ್ದ ನರೇಂದ್ರ, ಮೊದಲ ಭೇಟಿಯಲ್ಲಿಯೇ ರಾಮಕೃಷ್ಣರ ಶಕ್ತಿಯನ್ನು ನಂಬದೇ ಅವರನ್ನು ಪರೀಕ್ಷಿಸುವ ನಿರ್ಧಾರಕ್ಕೆ ಬಂದರು. ಆನಂತರದ ನಿರಂತರ ಒಡನಾಟದಿಂದ ನರೇಂದ್ರನಿಗೆ ರಾಮಕೃಷ್ಣರ ಶಕ್ತಿಯ ಪರಿಚಯವಾಯ್ತು. ಅವರ ಸರಳತೆ, ನಿಶ್ಕಲ್ಮಶ ಭಕ್ತಿ ಮತ್ತು ಸಿದ್ಧಾಂತಗಳಿಗೆ ಆಕರ್ಷಿತರಾದರು. ನರೇಂದ್ರನಲ್ಲಿರುವ ಅಪರಿಮಿತ ಚೈತನ್ಯವನ್ನು ಗುರುತಿಸಿದ ರಾಮಕೃಷ್ಣರು, ಶಿಷ್ಯನನ್ನಾಗಿ ಸ್ವೀಕರಿಸಿ, ವಿವೇಕಾನಂದ ಎಂದು ನಾಮಕರಣ ಮಾಡಿದರು.

ಅಮೇರಿಕಾದ ಚಿಕಾಕೋದಲ್ಲಿ ನಡೆದ ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಮಾತನಾಡಿ, ‘ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮೌಲ್ಯ’ದ ಪರಿಚಯ ಮಾಡಿಕೊಟ್ಟ ವಿವೇಕಾನಂದರ ಭಾಷಣ ವಿಶ್ವ ವಿಖ್ಯಾತವಾಗಿದೆ. ‘ಅಮೇರಿಕಾದ ಸಹೋದರ ಸಹೋದರಿಯರೇ’ ಎಂಬ ಸಂಬೋಧನೆಯೊಂದಿಗೆ ಪ್ರಾರಂಭವಾದ ವಿವೇಕಾನಂದ ಭಾಷಣ ಅಲ್ಲಿ ನೆರೆದಿದ್ದ ಅಸಂಖ್ಯ ಜನರ ಚಿತ್ತವನ್ನು ಗೆದ್ದಿತ್ತು. ಪಾಶ್ಚಾತ್ಯರಿಂದ ‘ವಿಚಿತ್ರ ಧರ್ಮ’ ಎಂದು ಕರೆಯಿಸಿಕೊಂಡಿದ್ದ ಹಿಂದೂ ಧರ್ಮದ ನಿಜವಾದ ಅರ್ಥವನ್ನು,ಸಿದ್ಧಾಂತಗಳನ್ನು ಪಾಶ್ಚಾತ್ಯರಿಗೆ ಮನದಟ್ಟು ಮಾಡುವಲ್ಲಿ ಸ್ವಾಮಿ ವಿವೇಕಾನಂದ ಯಶಸ್ವಿಯಾದರು. ವಿಶ್ವ ಪರ್ಯಟನೆ ಮಾಡಿ ಹಿಂದೂ ಧರ್ಮದ ಸಿದ್ಧಾಂತಗಳು ಹಾಗೂ ಮೌಲ್ಯಗಳನ್ನು ಪರಿಚಯ ಮಾಡಿಕೊಟ್ಟ ಸ್ವಾಮಿ ವಿವೇಕಾನಂದರ ಎಲ್ಲಾ ಭಾಷಣಗಳು ಈಗ ಪುಸ್ತಕ ರೂಪದಲ್ಲಿವೆ. ಅವುಗಳನ್ನು ಹಿಂದೂ ಧರ್ಮದ ಯೋಗ ಸಿದ್ಧಾಂತಗಳಾಗಿ ಪರಿಗಣಿಸಲಾಗಿದೆ. ಅಮೇರಿಕಾದ ‘ಸರ್ವಧರ್ಮ ಸಮ್ಮೇಳನ’ದ ನಂತರ ತಾಯ್ನಾಡಿಗೆ ಮರಳಿದ ವಿವೇಕಾನಂದರು ಗುರು ರಾಮಕೃಷ್ಣ ಪರಮಹಂಸರ ಸ್ಮರಣಾರ್ಥ 1892, ಮೇ 1ರಂದು ‘ರಾಮಕೃಷ್ಣ ಮಿಶನ್‌’ ಸ್ಥಾಪಿಸಿದರು.

ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತ 'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆ ವಿವೇಕಾನಂದರಿಂದ ಜಗತ್‌ಪ್ರಸಿದ್ಧವಾಯ್ತು. ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿ ರಾಮಕೃಷ್ಣ ಮಿಶನ್‌ಗುರುತಿಸಿಕೊಂಡಿತು.

ಕಾಳಿಯ ಆರಾಧಕರಾಗಿದ್ದ ರಾಮಕೃಷ್ಣ ಪರಮಹಂಸರು ಹಾಗೂ ಅವರ ಪತ್ನಿ ಮಾತೆ ಶಾರದಾ ದೇವಿಯವರ ನೆಚ್ಚಿನ ಶಿಷ್ಯರಾಗಿದ್ದ ವಿವೇಕಾನಂದರು, ತಮ್ಮದೇ ಆದ ವೈಚಾರಿಕ ನೆಲೆಯಲ್ಲಿ ತಮ್ಮನ್ನು ಗುರುತಿಸಿಕೊಂಡರು.
‘ಸುಖಕ್ಕಿಂತ ದುಃಖವೇ, ಐಶ್ವರ್ಯಕ್ಕಿಂತಲೂ ದಾರಿದ್ರ್ಯವೇ, ಹೊಗಳಿಕೆಗಿಂತಲೂ ಪೆಟ್ಟುಗಳೇ ಮನುಷ್ಯನಲ್ಲಿ ಅಡಕವಾಗಿರುವ ಅಂತರಾಗ್ನಿಯನ್ನು ಹೊರಗೆಡಹುತ್ತದೆ’ ಎಂದು ಬೋಧಿಸಿದ ವಿವೇಕಾನಂದರು ಬಡವರ, ನೊಂದವರ, ಸಮಾಜದಲ್ಲಿ ತುಳಿತಕ್ಕೊಳಗಾದವರ ಕಷ್ಟಕ್ಕೆ ಸ್ಪಂದಿಸಿದರು. ‘ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ!’ ಇದು ಯುವ ಶಕ್ತಿಗಳಲ್ಲಿರುವ ಉತ್ಸಾಹವನ್ನು ಬಡಿದೆಬ್ಬಿಸಲು ವಿವೇಕಾನಂದರು ಘೋಷಿಸಿದ ಪ್ರೋತ್ಸಾಹ ವಾಕ್ಯ. ಇದು ಬಿಸಿರಕ್ತದ ಯುವ ಚೈತನ್ಯವನ್ನು ಜಾಗೃತಗೊಳಿಸುವ ಮಂತ್ರವಾಯಿತು. ಗಾಂಭೀರ್ಯ, ಸರಳತೆ, ಧೈರ್ಯ, ಅಸ್ವಾರ್ಥತೆ, ದಯೆ, ಸೇವಾಶಕ್ತಿಯಿಂದಲೇ ದೇಶದ ಜನತೆಯನ್ನು ಗೆದ್ದ ಸ್ವಾಮಿ ವಿವೇಕಾನಂದರು ತಮ್ಮ 29 ನೇ ವಯಸ್ಸಿನಲ್ಲಿ ಧೈವಾಧೀನರಾದರು. ಅತೀ ಚಿಕ್ಕ ವಯಸ್ಸಿನಲ್ಲಿ ಮಹಾ ಸಾಧನೆ ತೋರಿದ ಈ ಶಕ್ತಿ ಅಸ್ತಂಗತವಾದ ದಿನ 1902ರ ಜುಲೈ 4.

ಯುವ ಜನತೆಗೆ ಪ್ರೋತ್ಸಾಹಿಸಿ, ಆ ಮೂಲಕ ಯಶಸ್ವಿ ಮಾರ್ಗವನ್ನು ಸೂಚಿಸಿದ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನಾಚರಣೆ ಇವತ್ತು. ಯುವ ಶಕ್ತಿಯ ದ್ಯೋತಕವಾಗಿದ್ದ ವಿವೇಕಾನಂದರ ಸ್ಮರಣಾರ್ಥ ಇಂದು ರಾಷ್ಟ್ರೀಯ ಯುವ ದಿನವನ್ನಾಗಿ ರಾಷ್ಟ್ರಾದ್ಯಂತ ಆಚರಿಸಲಾಗುತ್ತದೆ.

ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು

 

Author : ಅಮೃತಾ ಹೆಗಡೆ

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited