Untitled Document
Sign Up | Login    
ಕಡಲೆಕಾಯಿ ಪರಿಷೆ - ಶ್ರದ್ಧೆ ಸಂಭ್ರಮದ ಜಾತ್ರೆ

ದೊಡ್ಡ ಬಸವಣ್ಣ

ಬೆಂಗಳೂರಿನ ಕಡಲೆಕಾಯಿ ಪರಿಷೆ ಯಾರಿಗೆ ತಾನೆ ಗೊತ್ತಿಲ್ಲ. ಬಸವನಗುಡಿಯ ದೊಡ್ಡ ಬಸವಣ್ಣನ (ಬುಲ್ ಟೆಂಪಲ್) ಜಾತ್ರೆಯೇ ಸುಪ್ರಸಿದ್ಧ 'ಕಡಲೆಕಾಯಿ ಪರಿಷೆ'.

ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಈ ಜಾತ್ರೆಯಲ್ಲಿ ಸುತ್ತಮತ್ತಲಿನ ರೈತರು ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶದ ರೈತರು ಕೂಡ ತಾವು ಬೆಳೆದ ಕಡಲೆಕಾಯಿ ಹೊತ್ತು ತರುತ್ತಾರೆ. ಕಡಲೆ ಬೀಜದ ರಾಶಿಗಳು ರಾಮಕೃಷ್ಣ ಆಶ್ರಮ ವೃತ್ತದಿಂದ ಬಸವನಗುಡಿ ರಸ್ತೆಯ ಇಕ್ಕೆಲಗಳಲ್ಲಿ ಕಂಡುಬರುತ್ತವೆ. ಈ ಕಡಲೆಕಾಯಿ ಪರಿಷೆಗೆ 600 ವರ್ಷಗಳ ಇತಿಹಾಸವಿದೆ.

ದೊಡ್ಡ ಬಸವಣ್ಣನ ದೇವಾಲಯದ ಹಿಂದೆ ಒಂದು ಕಾಲದಲ್ಲಿ ಹಳ್ಳಿಗಳಿದ್ದವು. ಸುಂಕೇನಹಳ್ಳಿ, ಗವೀಪುರ, ಹೊಸಕೆರೆಹಳ್ಳಿ, ನಾಗಸಂದ್ರ, ಮಾವಳ್ಳಿ ಮುಂತಾದ ಪ್ರದೇಶಗಳು ಮೊದಲು ಹಳ್ಳಿಗಳಾಗಿದ್ದರಿಂದ ಅಲ್ಲಿ ರೈತರು ಕಡಲೆಕಾಯಿಯನ್ನು ಬೆಳೆಯುತ್ತಿದ್ದರು. ಪ್ರತಿದಿನ ರಾತ್ರಿ ಸಮಯದಲ್ಲಿ ಬಸವಣ್ಣ ಕಡಲೆ ಗದ್ದೆಗಳಿಗೆ ನುಗ್ಗಿ ಬೆಳೆಗಳನ್ನು ತಿಂದುಹಾಕುತಿದ್ದ. ಇದರಿಂದ ಬೇಸತ್ತ ರೈತರು ಒಮ್ಮೆ ರಾತ್ರಿ ಕಾವಲು ಕಾದು ಬಸವಣ್ಣನನ್ನು ಓಡಿಸಿಕೊಂಡು ಬಂದರು. ಹೆದರಿದ ಬಸವಣ್ಣ ಬಸವನಗುಡಿ ಬಳಿಯ ಗುಹೆಯಲ್ಲಿ ಸೇರಿಕೊಂಡ. ಆಗ ರೈತರು ತಾವೇ ನಿನಗೆ ಆಹಾರ ನೀಡುವುದಾಗಿ ಹೇಳಿ ಇಲ್ಲೇ ಇರುವಂತೆ ಒಪ್ಪಂದ ಮಾಡಿಕೊಂಡರಂತೆ. ಇದರಿಂದ ಬಸವಣ್ಣ ಅಲ್ಲೇ ಐಕ್ಯನಾದ ಎಂಬ ಪ್ರತೀತಿಯಿದೆ. ಅಂದಿನಿಂದ ಕಡಲೆಕಾಯಿ ಜಾತ್ರೆ ಪ್ರಾರಂಭವಾಯಿತು ಎಂಬುದು ವಾಡಿಕೆ.

ಕಡಲೆಕಾಯಿ ವ್ಯಾಪಾರದಲ್ಲಿ ನಿರತ ರೈತರು
ಈ ಜಾತ್ರೆಯಲ್ಲಿ ಪಾಲ್ಗೊಂಡು ಕಡಲೆ ಬೀಜಗಳನ್ನು ತಿಂದರೆ ಬಸವಣ್ಣ ತೃಪ್ತನಾಗುತ್ತಾನೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಹೀಗೆ ಭಕ್ತರು ತಿಂದು ಎಸೆದ ಸಿಪ್ಪೆಯನ್ನು ರಾತ್ರಿಯಲ್ಲಿ ಬಸವಣ್ಣ ನಿಜರೂಪತಾಳಿ ಬಂದು ಸಿಪ್ಪೆಗಳನ್ನು ತಿನ್ನುತ್ತಾನೆ ಎಂದು ಇಂದಿಗೂ ನಂಬುತ್ತಾರೆ.

ಅಂದು ಐಕ್ಯನಾದ ಬಸವ ಅಲ್ಲೇ ಕಲ್ಲಾಗಿ ಹಾಗೆಯೇ ಬೆಳೆಯತೊಡಗಿದ. ಇದರಿಂದಾಗಿ ಕುಪಿತಗೊಂಡ ರೈತರು ಬಸವ ಇನ್ನೂ ಬೆಳೆಯುತ್ತಾ ಹೋದರೆ ಪೂಜಿಸಲು ಕಷ್ಟವಾಗುವುದೆಂದು ಬಸವಣ್ಣನ ತಲೆಯ ಮೇಲೆ ಒಂದು ಮೊಳೆ ಹೊಡೆದಿದ್ದು, ಅಂದಿನಿಂದ ಬಸವಣ್ಣನ ಬೆಳವಣಿಗೆ ನಿಂತಿತಂತೆ. 15ಅಡಿ ಎತ್ತರ 20ಅಡಿ ಉದ್ದದ ಈ ಬಸವಣ್ಣನನ್ನು ಸಾಕ್ಷಾತ್ ಪರಮೇಶ್ವರನ ವಾಹನ ನಂದಿ ಎಂದೇ ಭಾವಿಸಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಗ್ರಾಮಸ್ಥರು ಅಲ್ಲಿ ಚಿಕ್ಕ ಗುಡಿಯೊಂದನ್ನು ನಿರ್ಮಿಸಿದ್ದರು. ನಂತರದ ವರ್ಷಗಳಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ದಕ್ಷಿಣ ಶೈಲಿಯ ಈಗಿರುವ ದೇವಾಲಯವನ್ನು ಕಟ್ಟಿಸಿದರು.

ಅಕ್ಕ-ಪಕ್ಕದ ಊರುಗಳಿಂದ ಬಂದ ರೈತರು ತಾವು ಬೆಳೆದ ಕಡಲೆ ಬೀಜಗಳನ್ನು ಇಲ್ಲಿಗೆ ಹೊತ್ತು ತರುತ್ತಾರೆ. ಹೀಗೆ ತಂದ ಕಡಲೆಕಾಯಿಯನ್ನು ಮೊದಲು ಬಸವಣ್ಣನಿಗೆ ಒಪ್ಪಿಸಿ ನಂತರ ವ್ಯಾಪಾರವನ್ನು ಆರಂಭಿಸುವುದು ಸಂಪ್ರದಾಯ. ಇಲ್ಲಿಗೆ ಬರುವ ಭಕ್ತರೂ ಕೂಡ ಕಡಲೆಕಾಯಿ ಖರೀದಿಸಿ ಬಸವನಿಗೆ ಅರ್ಪಿಸುತ್ತಾರೆ.

ಇದೇ ಡಿ.10ರಿಂದ ಕಡಲೆಕಾಯಿ ಪರಿಷೆ ಪ್ರಾರಂಭವಾಗಲಿದೆ. ಮೂರ್ನಾಲ್ಕು ದಿನಗಳಿಂದಲೇ ಕಡಲೆಕಾಯಿ ಮೂಟೆಗಳೊಂದಿಗೆ ರೈತರು ಲಗ್ಗೆಯಿಟ್ಟಿದ್ದಾರೆ. ಜೊತೆಗೆ ಮಕ್ಕಳಿಂದ ಹಿಡಿದು ಮುದುಕರ ವರೆಗೆ ಬೇಕಾಗುವ ಎಲ್ಲ ವಸ್ತುಗಳನ್ನು ಮಾರುವ ನೂರಾರು ಅಂಗಡಿಗಳ ಸಾಲುಗಳೂ ಜೋರಾಗಿ ವ್ಯಾಪಾರ ಮಾಡುತ್ತಿವೆ.

ಹಾಗಾದರೆ ನಾವು ಈ ಬಾರಿ ಜಾತ್ರೆಯಲ್ಲಿ ಪಾಲ್ಗೊಂಡು ಆನಂದಿಸೋಣ.

 

Author : ಚಂದ್ರಲೇಖಾ ರಾಕೇಶ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited