Untitled Document
Sign Up | Login    
ಸಾಗೋಣ ಬನ್ನಿ, ಕತ್ತಲಿನಿಂದ ಬೆಳಕಿನೆಡೆಗೆ..

ಬೆಳಕಿನೆಡೆಗೆ..

"ದೀಪಾವಳಿ" ಹೆಸರೆ ಸೂಚಿಸುವಂತೆ ದೀಪಗಳ ಸಾಲು, "ಆವಳಿ" ಅಂದರೆ "ಸಾಲು" ಎಂದರ್ಥ. ಆಶ್ವಯುಜ ಕೃಷ್ಣ ತ್ರಯೋದಶಿ, ನರಕ ಚತುರ್ದಶಿ(ಆಶ್ವಯುಜ ಕೃಷ್ಣ ಚತುರ್ದಶಿ), ಅಮವಾಸ್ಯೆ(ಲಕ್ಶ್ಮೀ ಪೂಜೆ) ಮತ್ತು ಬಲಿಪಾಡ್ಯ (ಕಾರ್ತಿಕ ಶುಕ್ಲ ಪಾಡ್ಯ) ಹೀಗೆ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸುವುದು ಪದ್ಧತಿ.

ಆಶ್ವಯುಜ ಕೃಷ್ಣ ತ್ರಯೋದಶಿ(ನೀರು ತುಂಬುವ ಹಬ್ಬ):

ಆಶ್ವಯುಜ ಮಾಸ್ಯ ಕೃಷ್ಣ ಪಕ್ಷದ ತ್ರಯೋದಶಿಯ ಸಂಜೆ ಶುದ್ಧವಾದ ನೀರನ್ನು ಎಲ್ಲಾ ಪಾತ್ರೆಗಳಲ್ಲಿ ತುಂಬಿಡಲಾಗುತ್ತದೆ. ಸ್ನಾನಕ್ಕಾಗಿ ನೀರು ಕಾಯಿಸುವ ಒಲೆಯನ್ನು ತೊಳೆದು ಅದಕ್ಕೆ ಅರಿಶಿನ, ಕುಂಕುಮಗಳೊಂದಿಗೆ ರಂಗೋಲಿಯನ್ನಿಡಲಾಗುತ್ತದೆ. ಸ್ನಾನದ ಹಂಡೆಯನ್ನು ತೊಳೆದು, ನೀರುತುಂಬಿ, ಅದರ ಮೇಲೆ ಬಾಳೆ ಎಲೆಯಿಂದ ಮುಚ್ಚಿ ಹೂಗಳಿಂದ ಅಲಂಕರಿಸಿ ಪೂಜಿಸಲಾಗುವುದು. ಮಾರನೆಯ ದಿನದ ಅಭ್ಯಂಜನ ಸ್ನಾನಕ್ಕೆ ಅಣಿಗೊಳಿಸಲಾಗುವುದು.

ನರಕ ಚತುರ್ದಶಿ :

ಮಾರನೆ ದಿನ ಚತುರ್ದಶಿಯಂದು ಬ್ರಾಹ್ಮೀ ಮುಹೂರ್ತದಲ್ಲಿ ಅಭ್ಯಂಜನ ಸ್ನಾನ ಮಾಡಿ ಹೊಸದಾಗಿ ವಿವಾಹವಾದ ಮಗಳು-ಅಳಿಯರನ್ನು ಕರೆದು ಸಿಹಿಯೂಟ ಬಡಿಸಿ ಸಂತೋಷ ಪಡಿಸುವುದು ಪದ್ಧತಿ. ಅಭ್ಯಂಜನಕ್ಕೆ ಉಪಯೋಗಿಸುವ ಎಣ್ಣೆ, ಪುಡಿಗಳಿಗೆ ವಿಷೇಶವಾದ ಆಯುರ್ವೇದದ ಶಕ್ತಿಯಿದ್ದು ನರ ದೌರ್ಬಲ್ಯವನ್ನು ತಡೆಗಟ್ಟುವುದು. ಅಂದು ಯಮಧರ್ಮರಾಜನಿಗೆ 14 ಹೆಸರುಗಳಿಂದ ತಿಲತರ್ಪಣವನ್ನು ಕೊಡುವ ವಿಧಿಯೂ ಇದೆ. ಅಂದು ಬೆಳಗಿನಿಂದ ರಾತ್ರಿವರೆಗೆ ಆಬಾಲ ವೃದ್ಧರಾದಿಯಾಗಿ ಪಟಾಕಿ, ಬಾಣ ಬಿರುಸುಗಳನ್ನು ಸುಟ್ಟು ನಲಿದಾಡುತ್ತಾರೆ.

ಹಬ್ಬಗಳಿಗೂ ಹಾಗೂ ಪುರಾಣ ಕಥೆಗಳಿಗೂ ಅವಿನಾಭಾವ ಸಂಬಂಧವಿದೆ. ಶ್ರೀರಾಮ ರಾವಣನನ್ನು ಸಂಹರಿಸಿ ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ದಿನವೆಂದು ಹೇಳಲಾಗುತ್ತದೆ. ಅಲ್ಲದೇ, ಅಮವಾಸ್ಯೆ ಹಿಂದಿನ ದಿನ ಅಂದರೆ ಚತುರ್ದಶಿಯಂದು ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ.

ಶ್ರೀಕೃಷ್ಣನ ಬೆವರು ಭೂಮಿಗೆ ಬೀಳಲು ಅದು ಅಸುರಾಕೃತಿಯನ್ನು ಪಡೆಯಿತು. ಅವನೇ ನರಕಾಸುರ. ಪ್ರಾಗ್ಜೋತಿಷಪುರವೆಂಬ ಪಟ್ಟಣದ ದೊರೆಯಾಗಿ ಮುಂದೆ ದೇವತೆಗಳಿಗೆ ಉಪಟಳ ನೀಡುತ್ತಾನೆ. ನಂತರ ಲೋಕ ಕಲ್ಯಾಣಕ್ಕಾಗಿ ಶ್ರೀಕೃಷ್ಣ ಚತುರ್ದಶಿಯ ಕಗ್ಗತ್ತಲಲ್ಲಿ ನರಕಾಸುರನನ್ನು ಕೊಲ್ಲುತ್ತಾನೆ. ಆದರೆ ಆತನ ತಾಯಿಯ ಕೋರಿಕೆಯಂತೆ ಶ್ರೀಕೃಷ್ಣ ನರಕಾಸುರನನ್ನು ವರ್ಷಕ್ಕೊಮ್ಮೆ ಎಲ್ಲರೂ ಪೂಜಿಸುವ ಅವಕಾಶ ಕಲ್ಪಿಸುತ್ತಾನೆ ಎಂಬುದು ಪುರಾಣದ ಪ್ರತೀತಿ.

ಎಲ್ಲೆಲ್ಲ್ಲೂ ಸಂಭ್ರಮ..
ಲಕ್ಷ್ಮೀ ಪೂಜೆ (ಅಶ್ವಯುಜ ಅಮವಾಸ್ಯೆ) :

ಮಾರನೆ ದಿನ ಅಮವಾಸ್ಯೆಯಂದು ಸಾಯಂಕಾಲ ಮನೆಯನ್ನು ಶುದ್ಧಗೊಳಿಸಿ ಲಕ್ಷ್ಮೀ ದೇವಿಯನ್ನು ಸ್ಥಾಪಿಸಿ, ರಂಗವಲ್ಲಿಯನ್ನು ಮನೆಯ ಒಳಗೆ ಹೊರಗೆ ರಚಿಸಿ ಹೊಸ್ತಿಲು ಪೂಜೆ ಮಾಡಿ ಮಹಾಲಕ್ಷ್ಮೀಯನ್ನು ಸ್ವಾಗತಿಸಲಾಗುತ್ತದೆ. ಧನ,ಕನಕಗಳನ್ನು ಪೂಜೆಗೆ ಇರಿಸಲಾಗುತ್ತದೆ. ಅಂಗಡಿಗಳಲ್ಲಿ ವಿಶೇಷವಾಗಿ ಲಕ್ಷ್ಮೀ ಪೂಜೆ ಮಾಡಲಾಗುತ್ತದೆ.

ಸಾಮನ್ಯವಾಗಿ ಅಮವಾಸ್ಯೆಯನ್ನು ಅಶುಭ ಎಂದು ಹೇಳುತ್ತರೆ. ಆದರೆ ಈ ಅಮವಾಸ್ಯೆ ಅದಕ್ಕೆ ಅಪವಾದ ಎನ್ನಬಹುದು. ಅಂದು ಮನೆಯ ಬಾಗಿಲು, ಕಿಟಕಿಗಳು, ಹೀಗೆ ಮನೆಯ ತುಂಬೆಲ್ಲ ಸಲು ಸಾಲಾಗಿ ದೀಪಗಳನ್ನು ಹಚ್ಚಲಾಗುತ್ತದೆ.

ಬಲಿಪಾಡ್ಯಮಿ:

ಕಾರ್ತಿಕ ಶುದ್ಧ ಪ್ರಥಮಾ ದಿನ ಬಲಿ ಪಾಡ್ಯಮಿ. ಅಂದು ಸ್ವಾತಿ ನಕ್ಷತ್ರವಿದ್ದರೆ ಅತ್ಯಂತ ಶ್ರೇಷ್ಠವಾದ ದಿನ ಎಂಬ ಹೇಳಿಕೆಯಿದೆ. ಅಂದು ಬಲೀಂದ್ರನ ಪೂಜೆ ಮಾಡಲಾಗುತ್ತದೆ. ಬಲೀಂದ್ರನ ಚಿತ್ರವನ್ನು ಐದು ಬಣ್ಣದ ಪುಡಿಗಳಿಂದ ರಚಿಸಲಾಗುತ್ತದೆ ಅಥವಾ ಬಲೀಂದ್ರನ ಕೋಟೆಯನ್ನು ಸಗಣಿಯಿಂದ ನಿರ್ಮಿಸಿ ಚಂಡು ಹೂವಿನಿಂದ ಅಲಂಕರಿಸಲಾಗುತ್ತದೆ. ಆತನೊಡನೆ ಆತನ ರಾಣಿ ವಿಂಧ್ಯಾವಳೀ ಮತ್ತು ಪರಿವಾರದ ರಾಕ್ಷಸರಾದ ಬಾಣ, ಕೂಷ್ಮಾಂಡ ಮತ್ತು ಮುರರನ್ನು ಚಿತ್ರಿಸಲಾಗುತ್ತದೆ. ಬಲೀಂದ್ರನನ್ನು ಕರ್ಣಕುಂಡಲ, ಕಿರೀಟ ಮುಂತಾದ ಆಭರಣಗಳಿಂದ ಅಲಂಕಾರಗೊಳಿಸಲಾಗುತ್ತದೆ.

ಬಲಿ ಚಕ್ರವರ್ತಿಯ ನೆನಪಿನಲ್ಲಿ ದಾನವನ್ನು ಮಾಡುವುದರಿಂದ ಶ್ರೀಮನ್ನಾರಾಯಣನು ಪ್ರಸನ್ನನಾಗುವನು ಎಂಬ ಪ್ರತೀತಿ ಇದೆ. ಅಲ್ಲದೇ ಅಂದು ಶಿವನು ಪಾರ್ವತಿಯೊಡನೆ ಪಗಡೆಯಾಡಿದ್ದನಂತೆ ಆದ್ದರಿಂದ ಹಳ್ಳಿಗಳಲ್ಲಿ ಪಗಡೆ ಯಾಡುವ ಆಚರಣಿಯೂ ಇದೆ. ಬಲಿಪಾಡ್ಯಮಿಯನ್ನು ಕೌಮುದೀ ಮಹೋತ್ಸವ ಎಂತಲೂ ಕರೆಯುತ್ತಾರೆ.

ಬಲಿಪಾಡ್ಯಮಿ ದಿನ ಹಸುಗಳಿಗೆ ಮತ್ತು ಎತ್ತುಗಳಿಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡಿ, ಸ್ನಾನ ಮಾಡಿಸಿ ಅಲಂಕರಿಸಿ, ಸಿಹಿಯೂಟವನ್ನು ನೀಡಿ ಪೂಜಿಸಲಾಗುತ್ತದೆ. ಅಲ್ಲದೇ ಗೋವರ್ಧನ ಪರ್ವತದ ಚಿತ್ರ ಬಿಡಿಸಿ ಪೂಜಿಸಲಾಗುತ್ತದೆ.

ಬಲಿಪಾಡ್ಯಮಿಯಂದು ಶ್ರೀಕೃಷ್ಣ ವಾಮನ ಮೂರ್ತಿಯಾಗಿ ಬಂದು ಮೂರಡಿ ಸ್ಥಳವನ್ನು ದಾನವಾಗಿ ಕೇಳಿ ಬಲಿಚಕ್ರವರ್ತಿಯನ್ನು ಪಾತಳಕ್ಕೆ ತಳ್ಳಿದ ದಿನ ಎಂತಲೂ ಹೇಳುತ್ತಾರೆ. ಬಲಿಪಾಡ್ಯಮಿಯಂದೂ ಮನೆ ಮನೆಗಳಲ್ಲಿ ದೀಪಗಳನ್ನು ಬೆಳಗಲಾಗುತ್ತದೆ.

ದೀಪಾವಳಿ ಬೆಳಕಿನ ಹಬ್ಬ ಮಾತ್ರವಲ್ಲ ನಮ್ಮೆಲ್ಲರನ್ನು ಅಸತ್ಯದಿಂದ ಸತ್ಯದ ಕಡೆಗೂ, ಅಂದಕಾರದಿಂದ ಬೆಳಕಿನೆಡೆಗೂ, ಮೃತ್ಯುವಿನಿಂದ ಅಮೃತತ್ವದ ಕಡೆಗೂ ನಡೆಸುವ ಜ್ನಾನ ದೀವಿಗೆಯಾಗಲಿ.

 

Author : ಚಂದ್ರಲೇಖಾ ರಾಕೇಶ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited