Untitled Document
Sign Up | Login    
ಪ್ರಕೃತಿಯ ಮಡಿಲಲ್ಲಿ ನೆಲೆಯಾದ ಮತ್ಸ್ಯತೀರ್ಥ


ಕರ್ನಾಟಕದ ಕರಾವಳಿ ಹಲವು ಪ್ರೇಕ್ಷಣೀಯ ಸ್ಥಳಗಳ ಮಡಿಲು. ತುಂಬಿ ಹರಿಯುವ ನದಿಗಳು, ಹಸಿರಿನಿಂದ ಕಂಗೊಳಿಸುವ ಬೆಟ್ಟಗಳು, ಭಕ್ತಿ ಮೂಡಿಸುವ ಪುಣ್ಯಕ್ಷೇತ್ರಗಳು. ವಸಂತ ಋತುವಿನಲ್ಲಂತೂ ಇಲ್ಲಿನ ಸೊಬಗನ್ನು ಸವಿಯದವರೇ ಇಲ್ಲ. ಚಾರಣ ಮಾಡುವವರಿಗೆ ಬೆಟ್ಟಗಳು, ದೈವ ಭಕ್ತರಿಗೆ ಗುಡಿ-ಗೋಪುರಗಳು ಕೈಬೀಸಿ ಕರೆಯುತ್ತವೆ.

ಇಂತಹ ಸ್ಥಳಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದಲ್ಲಿರುವ ಶಿಶಿಲದ ಶ್ರೀ ಶಿಶಿಲೇಶ್ವರ ದೇವಾಲಯವೂ ಒಂದು. ಪ್ರಕೃತಿ ಸೌಂದರ್ಯ ಹಾಗೂ ಧಾರ್ಮಿಕ ಹಿನ್ನೆಲೆಯ ಸಮ್ಮಿಶ್ರಣವಾಗಿರುವ ಈ ಕ್ಷೇತ್ರಕ್ಕೆ ಭೇಟಿ ನೀಡುವುದೇ ಒಂದು ಸೌಭಾಗ್ಯ.

ಕಪಿಲಾ ನದಿಯಲ್ಲಿರುವ ಮತ್ಸ್ಯಸಾಗರ
ಧರ್ಮಸ್ಥಳ - ಬೆಂಗಳೂರು ರಸ್ತೆಯಲ್ಲಿ ಕೊಕ್ಕಡದಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ ಈ ಪುಣ್ಯ ಕ್ಷೇತ್ರ. ಉದಯ ಪರ್ವತ, ಶಿಂಗನಿ, ಎತ್ತಿನ ಭುಜ ಮೊದಲಾದ ಬೃಹತ್ ಪರ್ವತಗಳ ಮಧ್ಯದಲ್ಲಿ ಶಿಶಿಲೇಶ್ವರ ದೇವಸ್ಥಾನ ಕಂಗೊಳಿಸುತ್ತದೆ. 500 ವರ್ಷಗಳ ಇತಿಹಾಸವಿರುವ ಈ ಆಲಯದಲ್ಲಿರುವ ಶಿವಲಿಂಗ ಉದ್ಭವ ಮೂರ್ತಿಯೆಂದು ಹೇಳಲಾಗುತ್ತದೆ. ಹೊಯ್ಸಳರ ಕಾಲದ ಶಿಲಾ ಪ್ರತಿಮೆಗಳು, ಶಾಸನಗಳೂ ಇಲ್ಲಿವೆ. ಈಶ್ವರನ ಜೊತೆಗೆ ಗಣಪತಿ, ದುರ್ಗಾದೇವಿಯ ಗುಡಿಯನ್ನು ಕೂಡಾ ಇಲ್ಲಿ ಕಾಣಬಹುದು.
ಮತ್ಸ್ಯ ತೀರ್ಥ:

ಶಿಶಿಲೇಶ್ವರ ದೇವಸ್ಥಾನ ಇನ್ನಷ್ಟು ಆಕರ್ಷಣೀಯ ಎನ್ನಿಸುವುದು ಅಲ್ಲಿರುವ ಮೀನುಗಳಿಂದ. ’ಮತ್ಸ್ಯಸಾಗರ’ದಂತೆ ಹರಿಯುವ ಕಪಿಲಾ ನದಿ ಪವಿತ್ರ ಮೀನುಗಳ ಆಶ್ರಯತಾಣ. ಕಪಿಲೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆಯ ಮೇಲೆ ನಿಂತು ಬಣ್ಣ ಬಣ್ಣದ ಮೀನುಗಳನ್ನು ನೋಡುವುದೇ ಚಂದ. ಇಲ್ಲಿನ ಮೀನುಗಳಿಗೆ ಹರಕೆ ಹೇಳಿಕೊಂಡರೆ ಚರ್ಮದ ವ್ಯಾದಿ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. 1996 ರಲ್ಲಿ ಕಪಿಲೆಯ ವಿಷ ದುರಂತದಲ್ಲಿ ಸಹಸ್ರಾರು ಮೀನುಗಳು ಸತ್ತಿದ್ದವು. ಅವುಗಳ ಸ್ಮರಣಾರ್ಥವಾಗಿ ಕ್ಷೇತ್ರದ ಭಕ್ತರೇ ಇಲ್ಲೊಂದು ಸ್ಮಾರಕ ನಿರ್ಮಿಸಿದ್ದಾರೆ. ಸದ್ಯ ಸೀಮಿತ ಪ್ರದೇಶದಲ್ಲಿ ಮಾತ್ರ ಮೀನುಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ.
ತೂಗುಸೇತುವೆ
ಕಪಿಲೆಯಲ್ಲಿ ಕ್ರಾಕಿಂಗ್‌ಗಾಗಿ ಹವ್ಯಾಸಿ ಕ್ರೀಡಾಳುಗಳು ಬರುತ್ತಾರೆ. ವೃತ್ತಿಯಲ್ಲಿ ಉದ್ಯಮಿಗಳಾಗಿರುವ ಇವರು ತಮ್ಮ ಸಂತೋಷಕ್ಕಾಗಿ ಷಿಪ್ಪಿಂಗ್ ಕ್ಯಾಂಪ್ ನಡೆಸುತ್ತಾರೆ. ಇದಕ್ಕಾಗಿ ಇವರು ದುಬಾರಿ ವಿದೇಶಿ ಬೋಟುಗಳನ್ನು ಖರೀದಿಸುತ್ತಾರೆ. ಶಿಶಿಲದಿಂದ ಅರಸಿನಮಕ್ಕಿಯವರೆಗೆ ಸಾಗುತ್ತಾರೆ ಈ ಹವ್ಯಾಸಿಗಳು. ತಮ್ಮ ಕೆಲಸದ ಮಧ್ಯೆ ಇಂತಹ ಕ್ಯಾಂಪ್‌ಗಳು ಖುಷಿ ನೀಡುತ್ತವೆ ಎನ್ನುತ್ತಾರೆ ಕ್ರಾಕಿಂಗ್ ಪಟು ನವೀನ್.
ಇಂದು (ಸೆ. 27) ವಿಶ್ವ ಪ್ರವಾಸೋದ್ಯಮ ದಿನ. ಹಲವು ರಾಷ್ಟ್ರಗಳ ಆದಾಯದ ಪ್ರಮುಖ ಮೂಲವೇ ಆಗಿರುವ ಪ್ರವಾಸೋದ್ಯಮ ಕರ್ನಾಟಕದಲ್ಲಿ ಮಾತ್ರ ಇನ್ನೂ ಬಾಲ್ಯಾವಸ್ಥೆಯಲ್ಲೇ ಇದೆ. ಮೈತುಂಬಿ ಹರಿಯುವ ಕಪಿಲೆಯ ದಂಡೆಯ ಮೇಲೆ ನಿಂತಿರುವ ಶಿಶಿಲೇಶ್ವರ ದೇವಸ್ಥಾನದ ಸನ್ನಿಧಿ ತನ್ನ ನಿಸರ್ಗ ಸೌಂದರ್ಯದಿಂದಲೂ ಪ್ರವಾಸೀ ತಾಣವಾಗಿ ಗಮನ ಸೆಳೆಯುತ್ತಿದೆ. ಉತ್ತಮ ಸೌಲಭ್ಯಗಳೊಂದಿಗೆ ಶಿಶಿಲ ಕ್ಷೇತ್ರವೂ ಪ್ರಚಾರ ಪಡೆಯಲಿ ಎಂಬುದು ಎಲ್ಲರ ಆಶಯ.

 

Author : Ravi Parakkaje

Author's Profile

ಬರವಣಿಗೆಯಲ್ಲಿ ಬಹಳ ಆಸಕ್ತಿಯಿದೆ...

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited