Untitled Document
Sign Up | Login    
ಅರಳುವ ಹೂಗಳು ಬಾಡುತ್ತಿವೆ

ಸ್ಕೂಲಿಗೆ ಹೋಗಿದ್ರೆ ನಾವೂ ನಿಮ್ಮಂಗೆ ಚೆನ್ನಾಗಿರ್ತಿದ್ವಿ...

ಮಕ್ಕಳು ದೇವರು ನೀಡಿದ ಸುಂದರ ಸೃಷ್ಟಿಯ ಪ್ರತೀಕ. ಈ ಸೃಷ್ಟಿ ಸುಕೋಮಲ ಮತ್ತು ಮೃದು. ಆದರೆ ಈ ಹೂಗಳು ಅರಳುವ ಮುನ್ನವೇ ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿವೆ. ಅಂತಹ ಸಮಸ್ಯೆಗಳಲ್ಲಿ ಬಾಲಕಾರ್ಮಿಕತೆಯೂ ಒಂದು.

ಇಂದು ಅದೆಷ್ಟೋ ಅಮಾಯಕ ಕೈಗಳು ಕಲ್ಲಿನ ಕ್ವಾರಿಗಳಲ್ಲಿ ಕಲ್ಲು ಹೊಡೆಯುತ್ತಾ, ಗದ್ದೆಗಳಲ್ಲಿ , ಬೀದಿಗಳಲ್ಲಿ ಹರಕು ಮುರುಕು ಆಯುತ್ತಲೋ, ಹೋಟೆಲ್ ಕಾರ್ಖಾನೆಗಳಲ್ಲಿ ಪಾತ್ರೆ ತಿಕ್ಕುತ್ತಲೋ ಬದುಕು ದೂಡುತ್ತಿವೆ. ಹೌದು ಇವರೆಲ್ಲಾ ಬಾಲಕಾರ್ಮಿಕರು. ಇವರಿಗೆ ಅಕ್ಷರ ದಾಹವಿಲ್ಲ, ಲೋಕದ ಪರಿವೆಯಿಲ್ಲ, ಹೊಟ್ಟೆ ತುಂಬಿಸಿಕೊಳ್ಳುವುದೊಂದೇ ಅವರ ಗುರಿ.

ಬಾಲಕಾರ್ಮಿಕತೆ ಇಂದು ಜಾಗತಿಕ ಸಮಸ್ಯೆ ಎಂಬುವುದು ಕಠಿಣ ಸತ್ಯ. ಅದರಲ್ಲೂ ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬಾಲಕಾರ್ಮಿಕರಿರುವ ನಾಡು ಭಾರತ ಅನ್ನುವುದು ಅರಗಿಸಿಕೊಳ್ಳಾಗದ ಸತ್ಯ. ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಬಾಲಕಾರ್ಮಿಕರು ಇಂದು ಭಾರತದಲ್ಲಿ ಜೀತದಾಳುಗಳಂತೆ ದುಡಿಯುತ್ತಿದ್ದಾರೆ. ಇವರಲ್ಲಿ ನಾಲ್ಕು ಅಥವಾ ಐದನೇ ವಯಸ್ಸಿನಲ್ಲಿಯೇ ದುಡಿಮೆಗೆ ಇಳಿದವರು ಅಪಾರ ಸಂಖ್ಯೆಯಲ್ಲಿದ್ದಾರೆ.

ಇನ್ನು ಅಮ್ಮ ಮಡಿಲಿನಲ್ಲಿ ಬೆಚ್ಚಗೆ ಮಲಗಬೇಕಾದ ವಯಸ್ಸಿನಲ್ಲಿ ಮುಗ್ಧ ಜೀವಗಳು ಕಾರ್ಖಾನೆಗಳಲ್ಲಿ, ಹೋಟೆಲ್‌ಗಳಲ್ಲಿ ದಿನ ಪೂರ್ತಿ ದುಡಿಯುತ್ತಿವೆ. ಅದರಲ್ಲೂ ಕಂಬಳಿ ನೇಯುವ ಕಾರ್ಖಾನೆ, ಸಿಡಿಮದ್ದು ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಮಕ್ಕಳ ಪಾಡು ಹೇಳ ತೀರದು. ಇವರು ಪುಟ್ಟ ಪುಟ್ಟ ಕೈಗಳಲ್ಲಿ ನೇಯುವ ದಾರದ ಗಂಟುಗಳು ಶ್ರೀಮಂತರ ಮನೆಯ ದುಬಾರಿ ಹಾಸುಗಂಬಳಿಗಳಾಗುತ್ತವೆ. ಇವರ ಶ್ರಮದಲ್ಲಿ ತಯಾರಾದ ಸಿಡಿಮದ್ದುಗಳು ನಮ್ಮ ಮನೆಯ ದೀಪಾವಳಿ ಹಬ್ಬಕ್ಕೆ ವಿಶೇಷ ಮೆರುಗು ನೀಡುತ್ತವೆ. ಆದರೆ ಪಟಾಕಿಗಳ ಮೂಲಕ ಹಬ್ಬಕ್ಕೆ ಮೆರುಗು ತಂದು ಕೊಡುವ ಅವರ ಬದುಕು ಮಾತ್ರ ಕತ್ತಲಲ್ಲಿರುವುದು ವಿಪರ್ಯಾಸ.

ಓದಿದ್ರೆ ನಾನೂ ವಿಶ್ವೇಶ್ವರಯ್ಯ ಆಗ್ತಿದ್ದೆ ಅಲ್ವಾ?..
ಬಡತನ ಬಾಲಕಾರ್ಮಿಕತೆಗೆ ಪ್ರಮುಖ ಕಾರಣ. ಕೆಲವು ಸಂದರ್ಭಗಳಲ್ಲಿ ತಂದೆ ತಾಯಿ ಮಾಡಿದ ಸಾಲ ತೀರಿಸಲು ಮಕ್ಕಳು ಜೀವನ ಪೂರ್ತಿ ಜೀತದಾಳುಗಳಾಗಿ ದುಡಿಯಬೇಕು. ಇನ್ನೂ ಕೆಲವೊಮ್ಮೆ ಕಲಿಕೆಯಲ್ಲಿನ ನಿರಾಸಕ್ತಿ, ತಂದೆ ತಾಯಿಯ ಪ್ರೀತಿಯ ಕೊರತೆ ಅವರನ್ನು ಮನೆ ಬಿಟ್ಟು ಹೋಗುವಂತೆ ಮಾಡಿ, ಬಳಿಕ ಜೀವನ ನಿರ್ವಹಣೆಗಾಗಿ ವಿಧಿಯಿಲ್ಲದೇ ಬಾಲಕಾರ್ಮಿಕರಾಗುತ್ತಾರೆ.

ಬಾಲಕಾರ್ಮಿಕರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬಾಲಾಪರಾಧಿಗಳು ಆಗುತ್ತಿದ್ದಾರೆ. ಸಹವಾಸ ದೋಷದಿಂದಲೋ, ಇಲ್ಲಾ ತಮ್ಮ ನೋವನ್ನು ಮರೆಯಲು ಅನೇಕ ದುಶ್ಚಟಗಳನ್ನು ಮೈಗೂಡಿಸಿಕೊಂಡು ಅವುಗಳ ದಾಸರಾಗುತ್ತಿದ್ದಾರೆ. ಅಲ್ಲದೇ ಇವುಗಳಿಗೆಲ್ಲಾ ಹಣ ಸಾಲದಾದಾಗ ಕಳ್ಳತನ, ಕೊಲೆ ಮುಂತಾದ ಅಪರಾಧವೆಸಗಿ ಬಾಲಾಪರಾಧಿಗಳೂ ಆಗುತ್ತಿದ್ದರುವುದು ಮತ್ತೊಂದು ದುರಂತ.
ಬಡತನದ ಕುಲುಮೆಯಲ್ಲಿ ಬೇಯುತ್ತಿರುವ ಚಿಗುರುಗಳು..
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಾಲಕಾರ್ಮಿಕತೆಯನ್ನು ಹೋಗಲಾಡಿಸಲು ಅನೇಕ ಕಾನೂನು, ಯೋಜನೆಗಳನ್ನು ಜಾರಿಗೆ ತಂದಿವೆ. ಆದರೂ ಇನ್ನೂ ಅದೆಷ್ಟೋ ಮಕ್ಕಳು ಈ ಪಿಡುಗಿನಿಂದ ಹೊರಗೆ ಬಂದಿಲ್ಲ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಮಾತಿಗೆ ನಿಜವಾದ ಅರ್ಥ ಬರಬೇಕಾದರೆ ಮೊದಲು ಈ ಎಲ್ಲಾ ಸಮಸ್ಯೆಗಳಿಂದ ಮಕ್ಕಳು ಮುಕ್ತರಾಗಬೇಕು.

 

Author : Navya Ayyanakatte

Author's Profile

I am doing PG in Journalism and have a passion for writing..

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited