Untitled Document
Sign Up | Login    
ಚಿನ್ನದ ಹಬ್ಬದ ಸಂಭ್ರಮದಲ್ಲಿ ಶ್ರೀ ವಿದ್ಯಾರಣ್ಯ ಯುವಕ ಸಂಘ

ಗಣೇಶೋತ್ಸವದಲ್ಲಿ ಸಂಸದ ಅನಂತಕುಮಾರ್, ಶಾಸಕ ರವಿ ಸುಬ್ರಹ್ಮಣ್ಯ, ಮನು ಬಳಿಗಾರ್,ಕುನಾಲ್ ಗಾಂಜಾವಾಲ ಮತ್ತು ಎ.ಮರಿಯಪ್ಪ

ಬಸವನಗುಡಿಯ ಶ್ರೀ ವಿದ್ಯಾರಣ್ಯ ಯುವಕ ಸಂಘವು ಗಣೇಶ ಹಬ್ಬದ ಆಚರಣೆಯಲ್ಲಿ ವೈವಿಧ್ಯತೆಯೊಂದಿಗೆ ದಕ್ಷಿಣ ಭಾರತದಲ್ಲಿ ತನ್ನದೇ ಆದ ಛಾಪು ಮೆರೆದಿದೆ. ಪ್ರತಿ ವರ್ಷ ಕಲೆ-ಸಂಗೀತದ ಸಾಂಸ್ಕೃತಿಕ ನೆಲೆಗಟ್ಟಿನ ತಳಹದಿಯಲ್ಲಿ ವಿವಿಧ ಕಲಾಪ್ರಕಾರಗಳ ಹೂರಣದೊಂದಿಗೆ ಸಾರ್ವಜನಿಕರಿಗೆ ಭಕ್ತಿ ಸಿಂಚನ, ಸಂಗೀತ ಸುಧೆಯ ರಸದೌತಣ ಉಣಬಡಿಸುತ್ತ ಬಂದಿದೆ. ಪ್ರಸಕ್ತ ಸಾಲಿನಲ್ಲಿ, 50 ವರ್ಷಗಳ ಚಿನ್ನದ ಹಬ್ಬವನ್ನು ಸಂಭ್ರಮದೋಕುಳಿಯೊಂದಿಗೆ ವಿನೂತನವಾಗಿ ಆಚರಿಸಲು ನೃತ್ಯ-ಸಂಗೀತ ಸೌರಭದ ವರ್ಣಮಯ ವೇದಿಕೆ ಸಜ್ಜಾಗಿದೆ.

ಐದು ದಶಕಗಳ ಕಾಲ ನಿರಂತರವಾಗಿ "ಗಣೇಶ ಉತ್ಸವ" ನಡೆದುಕೊಂಡು ಬಂದಿದೆ. ಈ ನಡುವೆ ಇದು ಪ್ರತಿಷ್ಠಿತ "ಬೆಂಗಳೂರು ಗಣೇಶ ಉತ್ಸವ"ವಾಗಿ ರೂಪಾಂತರಗೊಂಡಿತು. ಕಳೆದ 50 ವರ್ಷಗಳಲ್ಲಿ ಕಲೆ, ಸಂಗೀತ, ಸಂಸ್ಕೃತಿಯ ದ್ಯೋತಕವಾಗಿದ್ದು, ಪ್ರಸಕ್ತ ಸಾಲಿನಲ್ಲಿ ವಿಶೇಷವಾಗಿ ಗಣೇಶ ಹಬ್ಬದ ಸುವರ್ಣ ಮಹೋತ್ಸವವನ್ನು ಆಯೋಜಿಸಿದೆ.

ಆಗ 60 ರ ದಶಕದ ಆರಂಭ. ಶ್ರೀ ಕು.ರಾ.ಸೀತಾರಾಮ ಶಾಸ್ತ್ರಿಗಳು, ಶ್ರೀ ಮ.ರಾಮಮೂರ್ತಿಯವರು ಹತ್ತಾರು ಕನ್ನಡ ಕಟ್ಟಾಳುಗಳೊಂದಿಗೆ ಕನ್ನಡದ ಕಂಪನ್ನು ಪಸರಿಸತೊಡಗಿದರು. ಬಸವನಗುಡಿ, ಡಿ.ವಿ.ಜಿ.ರಸ್ತೆಯಲ್ಲಿ ಶ್ರಿ ಜಿ.ಕೆ.ಗೋಪಾಲ್ ಅವರ ವಿನಾಯಕ ಸೈಕಲ್ ಮಾರ್ಟ್ ನಲ್ಲಿ ಕನ್ನಡ ಚಟುವಟಿಕೆಗಳು ಗರಿಗೆದರಿದವು. ಜಿ.ಕೆ.ಓಬಯ್ಯ, ಎ.ಮರಿಯಪ್ಪ, ಚಿತ್ರನಟ ಗಂಗಾಧರ್, ಶಿವಶಂಕರ್, ಮಿತ್ರ ಮೊದಲಾದವರು ಪ್ರತಿದಿನ ಕಲೆತು ಕನ್ನಡ ಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಿದ್ದರು.

ವಾಗ್ಗೇಯಕಾರ ಬಾಲಮುರಳಿಕೃಷ್ಣ, ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮತ್ತು ಎ.ಮರಿಯಪ್ಪ
ನಂತರ ಅದು ಶ್ರೀ ವಿದ್ಯಾರಣ್ಯ ವಿಚಾರ ವಿನಿಮಯ ಕನ್ನಡಿಗರ ಸಂಘವಾಯಿತು. ಸಂಘದ ಚಟುವಟಿಕೆಗಳಿಗೆ ಆರ್ಥಿಕ ಸಬಲತೆ ಕಂಡುಕೊಳ್ಳಲು ಈ ಮಿತ್ರರು ಸೇರಿ ಬಷೀರ್ ವಿರಚಿತ "ರಣ ಕಹಳೆ" ನಾಟಕವನ್ನು ಟೌನ್ ಹಾಲ್ ನಲ್ಲಿ ಪ್ರದರ್ಶಿಸಿದರು. ಆದ ವೆಚ್ಚಗಳನ್ನು ಕಳೆದು ಉಳಿದ 300 ರೂಪಾಯಿಗಳ ಅಲ್ಪ ಮೊತ್ತದಿಂದಲೇ ಕು.ರಾ.ಸೀ. ಅಧ್ಯಕ್ಷತೆಯಲ್ಲಿ ಶ್ರೀ ವಿದ್ಯಾರಣ್ಯ ಯುವಕ ಸಂಘ ಉದಯಿಸಿತು. ಅಂದಿನಿಂದ ಈ ಸಂಘ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

1962 ರಲ್ಲಿ ಅಂದಿನ ಗೃಹ ಸಚಿವ ಆರ್.ಎಂ.ಪಾಟೀಲರು ಡಿವಿಜಿ ರಸ್ತೆಯ ಮಲ್ಲಿಕಾರ್ಜುನ ಬೀದಿಯಲ್ಲಿ ಚೊಚ್ಚಲ ಗಣೇಶ ಉತ್ಸವಕ್ಕೆ ಚಾಲನೆ ನೀಡಿದರು. ಪಿ.ಕಾಳಿಂಗರಾವ್, ಬೆಂಗಳೂರು ಲತಾ, ಮಂಡ್ಯದ ಗುರುರಾಜುಲು ದಾಸ್ ಮತ್ತಿತರರು ಕಾರ್ಯಕ್ರಮ ನಡೆಸಿಕೊಟ್ಟರು. ಕೂಡು ಬೀದಿಯಲ್ಲಿ ನೆಲೆಕಂಡ ಚಪ್ಪರದಲ್ಲಿ ಡಿ.ವಿ.ಜಿ. ಆದಿಯಾಗಿ ಹಲವು ಗಣ್ಯರು ಖುಷಿಯಿಂದ ಕಾರ್ಯಕ್ರಮ ವೀಕ್ಷಿಸಿದರು. ಮರು ವರ್ಷವೇ ಯುವ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಸಂಜೆ ನಡೆಸಿಕೊಟ್ಟರು. ಪಿ.ಬಿ.ಎಸ್. ಮತ್ತು ಎಸ್.ಪಿ.ಬಿ. ಗಾಯನ ಮೋಡಿ ಗಣೇಶ ಉತ್ಸವಕ್ಕೆ ಕಳಶಪ್ರಾಯವಾಗಿ ಹೊಸ ಮೆರುಗು ತಂದು ಕೊಟ್ಟಿತು.

ಪ್ರತಿ ವರ್ಷವೂ ಈ ವೇದಿಕೆಯಲ್ಲಿ ರಾಗ, ತಾಳ, ಗಾನ, ಪಲ್ಲವಿಯ ಸ್ವರ ಸಂಭ್ರಮವೇ ಧರೆಗಿಳಿದು ಬಂದಂತೆ ರಂಜಿಸತೊಡಗಿತು. 1976ರಲ್ಲಿ ಗಣೇಶ ಉತ್ಸವದ ಸ್ಥಳ ಡಿವಿಜಿ ರಸ್ತೆಯಿಂದ ಮಲ್ಲಿಕಾರ್ಜುನ ದೇವಸ್ಥಾನದ ಆವರಣಕ್ಕೆ ಸ್ಥಳಾಂತರಗೊಂಡಿತು. ಗಣೇಶ ಉತ್ಸವದ ಜೊತೆಗೆ ಸಂಘದ ಪದಾಧಿಕಾರಿಗಳು ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡರು. 1978 ರಲ್ಲಿ ಆಂಧ್ರ ಪ್ರದೇಶದಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿದಾಗ ಅಲ್ಲಿನ ಸಂತ್ರಸ್ತರಿಗೆ ನೆರವು ನೀಡಲು ಕಂಠೀರವ ಕ್ರೀಡಾಂಗಣದಲ್ಲಿ ಎಸ್.ಪಿ.ಬಿ. ಅವರ ಸಂಗೀತ ಸಂಜೆ ಏರ್ಪಾಡಾಯಿತು.
ಶ್ರೀ ವಿದ್ಯಾರಣ್ಯ ಯುವಕ ಸಂಘದ ಸಂಸ್ಥಾಪಕ ಸದಸ್ಯರಾದ ಎ.ಮರಿಯಪ್ಪ ಮತ್ತು ಜಿ.ಕೆ.ಓಬಯ್ಯ..
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ವಾಣಿ ಜಯರಾಮ್ ಮತ್ತಿತರರು "ಸಂಗೀತ ಸಂಜೆ"ಯಲ್ಲಿ ಮಧುರ ಕಂಠ ಮೊಳಗಿಸಿದರು. ರಜನೀಕಾಂತ್, ಕಮಲಹಾಸನ್, ವಿಷ್ಣುವರ್ಧನ್, ಶ್ರೀನಾಥ್, ಭಾರತೀ ವಿಷ್ಣುವರ್ಧನ್, ಮಂಜುಳಾ, ಸಂಗೀತ ನಿರ್ದೇಶಕರಾದ ವಿಜಯ ಭಾಸ್ಕರ್, ರಾಜನ್-ನಾಗೇಂದ್ರ ಮುಂತಾದ ಖ್ಯಾತನಾಮರು ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು, ಸಾರ್ವಕಾಲಿಕ ದಾಖಲೆಯಾಯಿತು. ಇಲ್ಲಿ ಸಂಗ್ರಹವಾದ 35,೦೦೦ ರೂಪಾಯಿ ಹಣವನ್ನು ಶ್ರೀ ರಾಮಕೃಷ್ಣ ಮಿಷನ್ ಮೂಲಕ ಸಂತ್ರಸ್ತರಿಗೆ ತಲುಪಿಸಿ ಸಂಘದವರು ಮಾನವೀಯತೆ ಮೆರೆದರು.

ಗೆಳೆಯರ ಯುವ ಪಡೆಯೊಂದಿಗೆ ಎಸ್.ಎಂ.ನಂದೀಶ್ ಅವರು ಕ್ರಿಯಾಶೀಲರಾಗಿ ’ಗಣೇಶ ಉತ್ಸವ’ಕ್ಕೆ ವೃತ್ತಿ ಪರತೆಯ ಮೆರುಗು ನೀಡಿದರು. 2೦೦7 ರಿಂದ ಗಣೇಶ ಉತ್ಸವ ಎ.ಪಿ.ಎಸ್. ಕಾಲೇಜು ಮೈದಾನದಲ್ಲಿ ಮೈದಳೆಯಿತು.

2೦೦8 ರಿಂದ ಗಣೇಶ ಉತ್ಸವ ’ಬೆಂಗಳೂರು ಗಣೇಶ ಉತ್ಸವ' ಎಂಬುದಾಗಿ ಹೊಸ ರೂಪ ಪಡೆದುಕೊಂಡಿತು. ಸಂಘಟನೆ, ಕಾರ್ಯಕ್ರಮ ಅಳವಡಿಕೆ ಮತ್ತು ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳಾದವು. ಮಹಿಳೆಯರು ಸಂಘಟನೆ ಮತ್ತು ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ತೊಡಗಿದರು. ಬೆಂಗಳೂರು ಗಣೇಶ ಉತ್ಸವ ಪೂರ್ಣಗೊಂಡ ಒಂದು ತಿಂಗಳ ಬೆನ್ನಲ್ಲೇ ಗಣೇಶ ಹಬ್ಬ ನಡೆಯುತ್ತದೆ. ಈ ಗಣೇಶ ಉತ್ಸವದಲ್ಲಿ ವಾಗ್ಗೇಯಕಾರ ಬಾಲಮುರಳಿಕೃಷ್ಣ ಆದಿಯಾಗಿ ಸಂಗೀತ ಲೋಕದ ಅನೇಕ ದಿಗ್ಗಜರು ಕಾರ್ಯಕ್ರಮ ನೀಡಿ ಪ್ರೇಕ್ಷಕರನ್ನು ಸಂಗೀತದ ಕಡಲಲ್ಲಿ ತೇಲಿಸಿದರು.

ಕಳೆದ ವರ್ಷದಿಂದ, "ರಂಗಾ ರಂಗ್" ಎಂಬ ವಿನೂತನ ಶೈಲಿಯ ರಂಗೋಲಿ ಸ್ಪರ್ಧೆ ಅನಾವರಣಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಸೆಪ್ಟೆಂಬರ್ 19 ರಂದು ಸಂಜೆ ಡಿ.ವಿ.ಜಿ. ರಸ್ತೆಯಲ್ಲಿ ಮೈದಳೆಯಲಿರುವ ಅತ್ಯಂತ ಸಂಭ್ರಮದ ಹಾಗೂ ವಿನೂತನ ಬಗೆಯ ಉದ್ಘಾಟನಾ ಸಮಾರಂಭದಲ್ಲಿ 500 ನೃತ್ಯ ಪಟುಗಳು ಪಾಲ್ಗೊಳ್ಳುವರು.

ಡಾ.ಕೆ.ಜೆ.ಜೇಸುದಾಸ್, ಇಳಯರಾಜ, ಡ್ರಮ್ಸ್ ಶಿವಮಣಿ, ಕಸ್ತೂರಿಶಂಕರ್, ವಿ.ಹರಿಕೃಷ್ಣ, ಸಂಗೀತಾ ಕಟ್ಟಿ, ದೇವಿಶ್ರೀ ಪ್ರಸಾದ್, ಸಂತ ಶ್ರೀ ಭದ್ರಗಿರಿ ಅಚ್ಯುತದಾಸ್, ಎಂ.ಡಿ.ಪಲ್ಲವಿ, ಅರುಣ ಕುಮಾರ್, ಗಿರಿಧರ ಉಡುಪ, ರಾಜನ್ ಬ್ರದರ್ಸ್ ಮುಂತಾದವರು ಈ ಬಾರಿಯ ಗಣೇಶ ಉತ್ಸವಕ್ಕೆ ರಾಗ ರಂಜಿತ ಮೆರುಗು ನೀಡಲಿದ್ದಾರೆ.
ಗಣೇಶೋತ್ಸವದಲ್ಲಿ ಹಿಂದಿ ಚಿತ್ರ ನಟ ಗೋವಿಂದ ಮತ್ತು ತಂಡದವರು ಪ್ರದರ್ಶನ ನೀಡುತ್ತಿರುವುದು..
ಪ್ರತಿ ವರ್ಷದಂತೆ ಈ ಬಾರಿಯೂ ಕರ್ನಾಟಕ ಅರೋಮಾಸ್ ಆಹಾರೋತ್ಸವವು ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ನೆಲೆಯಲಿದ್ದು, ಬಗೆಬಗೆಯ ಸ್ವಾದಿಷ್ಟ ಖಾದ್ಯಗಳೊಂದಿಗೆ ಗ್ರಾಹಕರನ್ನು ಸಂತೃಪ್ತಿಗೊಳಿಸಲಿದೆ. ಪುರಿ ಮತ್ತು ಒರಿಸ್ಸಾದ ಕುಶಲಕರ್ಮಿಗಳು 30 ಅಡಿ ಗಾತ್ರದ ಮರುಳು ಕಲೆ ಗಣೇಶನನ್ನು (ಶಿವ ಪಾರ್ವತಿ ಸಮೇತ) ನಿರ್ಮಿಸಲಿದ್ದು, ಇದರ ಪ್ರದರ್ಶನವು ಸೆ.19-28 ರ ವರೆಗೆ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಪ್ರತಿದಿನ ಸಂಜೆ 7ಕ್ಕೆ (ಸೆ.19-28) ಎ.ಪಿ.ಎಸ್.ಕಾಲೇಜು ಮೈದಾನ ಹಾಗೂ ಮಲ್ಲಿಕಾರ್ಜುನ ದೇವಸ್ಥಾನ ಬೀದಿಯಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ 5೦,೦೦೦ ಹಣತೆಗಳು ಮಿಣಮಿಣಿಸುತ್ತ ಬೆಳಕು ಚೆಲ್ಲುವವು.
ಗಣೇಶೋತ್ಸವಕ್ಕೆ ಹೊಸ ಮೆರುಗನ್ನು ಕೊಟ್ಟ ಎಸ್.ಎಂ.ನಂದೀಶ್
ಜೊತೆಗೆ 6೦೦೦ ಕೆ.ಜಿ. ತೂಕದ "ಲಡ್ಡು" ತಯಾರಿಸಿ ಸೆ.19 ರಿಂದ 23ರ ವರೆಗೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ. ನಂತರ ಅದನ್ನು ಪ್ರಸಾದವಾಗಿ ವಿನಿಯೋಗಿಸಲಾಗುತ್ತದೆ. ಈ ಬೃಹತ್ ಲಾಡನ್ನು 1,5೦೦ ಕೆ.ಜಿ. ಕಡಳೆ ಹಿಟ್ಟು, 1,7೦೦ ಕೆ.ಜಿ ತುಪ್ಪ, 5೦೦ ಕೆ.ಜಿ. ಒಣಗಿಸಿದ ಹಣ್ಣುಗಳು, 28೦೦ ಕೆ.ಜಿ. ಸಕ್ಕರೆ ಬಳಸಿ ನುರಿತ ಬಾಣಸಿಗರ ತಂಡ ಸಿದ್ಧ ಪಡಿಸಲಿದೆ. ಈ ವಿಶೇಷ ಲಡ್ಡು ತಯಾರಿಕೆಗೆ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮನ್ನಣೆಯೊಂದಿಗೆ ಲಿಮ್ಕಾ ಮತ್ತು ಗಿನ್ನಿಸ್ ದಾಖಲೆಗಾಗಿ ಸಂಬಂಧಪಟ್ಟವರನ್ನು ಸಂಪರ್ಕಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

 

Author : ಜಿ.ಜಿ. ನಾಗರಾಜ

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited