Untitled Document
Sign Up | Login    
ಬೆಳಕಿನ ಬರಹ

World's First Photo

ಫೋಟೋ ಅಥವಾ ಛಾಯಾಚಿತ್ರ ಎಂದರೆ ಕಣ್ಣರಳಿಸದವರು ಯಾರೂ ಇರಲಿಕ್ಕಿಲ್ಲ. ಜೀವನದಲ್ಲಿ ಒಂದಲ್ಲಾ ಒಂದು ಬಾರಿ ಎಲ್ಲರೂ ಫೋಟೋ ತೆಗೆಸಿಕೊಂಡಿರಲೇಬೇಕು. ಅದು ದಾಖಲೆಗಳಿಗಾಗಿ ತೆಗೆಸುವ ಕಪ್ಪು-ಬಿಳುಪಿನ ಪಾಸ್‌ಪೋರ್ಟ್ ಸೈಜ್ ಪೋಟೋ ಇರಬಹುದು, ಸ್ಟುಡಿಯೋದಲ್ಲಿ ಹೂದೋಟ-ಅರಮನೆ ಇತ್ಯಾದಿ ಹಿನ್ನೆಲೆ ಪರದೆಯೆದುರು ನಿಂತು ತೆಗೆಸಿಕೊಂಡ ಬಣ್ಣದ ಚಿತ್ರಗಳಿರಬಹುದು, ಮದುವೆಯಂತಹ ಶುಭ ಸಮಾರಂಭಗಳಲ್ಲಿ ಸೆರೆಹಿಡಿದ ಚಿತ್ರಗಳಾಗಿರಬಹುದು... ಇವೆಲ್ಲವಕ್ಕೂ ಕಾಲದ ಓಟಕ್ಕೆ ಬ್ರೇಕ್ ಹಾಕಿ, ಒಂದು ಅಮೂಲ್ಯ ಕ್ಷಣವನ್ನು ಅವಿಸ್ಮರಣೀಯವಾಗಿಸುವ ಶಕ್ತಿ ಇದೆ.

ಮೊಬೈಲ್‌ನಲ್ಲೇ ಕ್ಯಾಮೆರಾ ದೊರಕುವ ಈ ಜಮಾನಾದಲ್ಲಿ ಸ್ಟುಡಿಯೋಗಳಿಗೆ ಹೋಗಿ ಛಾಯಾಚಿತ್ರ ತೆಗೆಸಿಕೊಳ್ಳುವಂತಹ ಹಳೆಯ ಕಾಲದ ಸಂಭ್ರಮಗಳಿಗೆ ಅರ್ಥವಿಲ್ಲ. ಇಂದು ಕೆಲವೇ ಸಾವಿರ ರೂಪಾಯಿಗಳಿಗೆ ಜೇಬಿನಲ್ಲಿ ಆರಾಮವಾಗಿ ಇರಿಸಿಕೊಂಡು ಹೋಗಬಹುದಾದ ಕಾಂಪ್ಯಾಕ್ಟ್ ಡಿಜಿಟಲ್ ಕ್ಯಾಮೆರಾಗಳು ಎಲ್ಲೆಡೆ ಲಭ್ಯವಿರುವಾಗ, ಹಿಂದೆ ಕುದುರೆಗಳ ಮೇಲೆ ಮಣಭಾರದ ಕ್ಯಾಮೆರಾಗಳನ್ನು ಹೊತ್ತುಕೊಂಡು ಹೋಗಿ ಪ್ರಕೃತಿ ಚಿತ್ರ (Landscape)ಗಳನ್ನು ಸೆರೆಹಿಡಿಯುತ್ತಿದ್ದ ಛಾಯಾಚಿತ್ರಗ್ರಾಹಕರ (Photographers) ಶ್ರಮ ಅರ್ಥವಾಗಲಿಕ್ಕಿಲ್ಲ. ಡಿಜಿಟಲ್ ಕ್ಯಾಮೆರಾಗಳ ಭರಾಟೆಯಲ್ಲಿ ದಶಕಗಳ ಹಿಂದೆ ಪ್ರಚಲಿತದಲ್ಲಿದ್ದ ರೋಲ್ ಕ್ಯಾಮೆರಾಗಳು ಇಂದು ನೋಡಲೂ ಸಿಗುವುದಿಲ್ಲ ಎಂಬಷ್ಟರ ಮಟ್ಟಿಗೆ ಈ ಛಾಯಾಚಿತ್ರ ಪ್ರಪಂಚ ಬೆಳೆದು ನಿಂತಿದೆ.

Studio in 1893
ಛಾಯಾ ಚಿತ್ರಗ್ರಹಣ (ಫೋಟೋಗ್ರಫಿ)
ಛಾಯಾಚಿತ್ರಗ್ರಹಣ ಅಥವಾ ಫೋಟೋಗ್ರಫಿ ಒಂದರ್ಥದಲ್ಲಿ ಕಲೆ ಮತ್ತು ವಿಜ್ಞಾನದ ಸಮ್ಮಿಲನ. ಹಲವಾರು ಸಂಶೋಧನೆಗಳ ಸಮ್ಮಿಶ್ರ ಫಲ ಈ ಛಾಯಾಚಿತ್ರಗ್ರಹಣ. ಛಾಯಾಚಿತ್ರಗ್ರಹಣದ ಉಗಮಕ್ಕೂ ಅದೆಷ್ಟೋ ಶತಮಾನಗಳ ಹಿಂದೆ ಗ್ರೀಕ್ ಗಣಿತಜ್ಞ ಅರಿಸ್ಟಾಟಲ್, ಯೂಕ್ಲಿಡ್ ಹಾಗೂ ಚೀನಾದ ತತ್ವಜ್ಞಾನಿ ಮೋ ಟಿ (Mo Ti) ಕ್ಯಾಮೆರಾದ ಮೂಲವಾದ ಕ್ಯಾಮೆರಾ ಅಬ್‌ಸ್ಕ್ಯೂರಾ (Camera Obscura) ತಂತ್ರಜ್ಞಾನ ಹಾಗೂ ಸೂಜಿಬಿಂಬ ಗ್ರಾಹಕದ (Pinhole Camera) ಉಲ್ಲೇಖ ಮಾಡಿದ್ದರು. ಲಿಯೋನಾರ್ಡೋ ಡ. ವಿಂಚಿ ಸೇರಿದಂತೆ ಅದೆಷ್ಟೋ ಪ್ರಖ್ಯಾತ ಕಲಾವಿದರು ಕ್ಯಾಮೆರಾ ಅಬ್‌ಸ್ಕ್ಯೂರಾ ತಂತ್ರಜ್ಞಾನ ಬಳಸಿ ಹಲವು ವ್ಯಕ್ತಿ ಚಿತ್ರ, ಪ್ರಕೃತಿ ಚಿತ್ರಗಳನ್ನು ರಚಿಸಿದ್ದರು. ಹೀಗೆ ಸಂಪೂರ್ಣ ಕಲಾ ಪ್ರಕಾರಕ್ಕೆ ಮೀಸಲಾಗಿದ್ದ ಈ ವಿಧಾನವನ್ನು ಕ್ಯಾಮೆರಾದಂತಹ ಶುದ್ಧ ವೈಜ್ಞಾನಿಕ ಉಪಕರಣದ ರಚನೆಗೆ ಬಳಸಿಕೊಂಡದ್ದರ ಹಿಂದೆ ಅದೆಷ್ಟೋ ವಿಜ್ಞಾನಿಗಳ, ಸಂಶೋಧಕರ ಪರಿಶ್ರಮದ ಕಥೆಯಿದೆ.

ಕ್ಯಾಮೆರಾ ಬಳಸಿ ಪ್ರಥಮ ಛಾಯಾಚಿತ್ರ ಪಡೆದದ್ದು 1826ರಲ್ಲಿ. ಫ್ರೆಂಚ್ ಸಂಶೋಧಕ ಜೋಸೆಫ್ ನಿಸೆಫೋರ್ ನೀಫ್ಸ್ ಈ ಸಾಧನೆ ಮಾಡಿದ ಮೊದಲಿಗ. ಆದರೆ ಈ ಹಂತದಲ್ಲಿ ಛಾಯಾಚಿತ್ರ ಪ್ರತಿಯ ಪರಿಷ್ಕರಣೆ ಹಾಗೂ ಸಂರಕ್ಷಣೆ ದೊಡ್ಡ ಸವಾಲಾಗಿತ್ತು. ಮುಂದೆ ಈ ವಿಭಾಗದಲ್ಲಿ ನಡೆದ ಹಲವು ಸಂಶೋಧನೆಗಳು ಈ ಕ್ಷೇತ್ರದ ಬೆಳವಣಿಗೆಗೆ ಮುನ್ನುಡಿ ಬರೆದವು.

ಛಾಯಾಚಿತ್ರಗ್ರಹಣ ಅಥವಾ ಫೋಟೋಗ್ರಫಿ ಶಬ್ದದ ಮೂಲ ಗ್ರೀಕ್‌ನಲ್ಲಿದೆ. ಬೆಳಕಿನಿಂದ ಬರಹ (Writing with the Light) ಎಂಬುದು ಈ ಪದದ ವಿಸ್ತೃತರೂಪ. ಹೆಸರೇ ಹೇಳುವಂತೆ ಛಾಯಾಚಿತ್ರಗ್ರಹಣಕ್ಕೆ ಮೂಲ ಸರಕು ಬೆಳಕು. ಕ್ಯಾಮೆರಾ ಉಪಯೋಗಿಸಿ ಎದುರಿಗಿರುವ ವಸ್ತು, ವ್ಯಕ್ತಿಯ ಯಥಾವತ್ ಪ್ರತಿ ಪಡೆಯಲು ಸಾಧ್ಯವಾಗುವುದಕ್ಕೆ ಬೆಳಕಿನ ಪ್ರತಿಫಲನ ಗುಣವೇ ಕಾರಣ. ನಮ್ಮ ದೇಹದಲ್ಲಿ ಕಣ್ಣು ಕೆಲಸ ಮಾಡುವ ವಿಧಾನವನ್ನು ಅನುಸರಿಸಿ, ಕ್ಯಾಮೆರಾದಲ್ಲಿ ಛಾಯಾಚಿತ್ರ ಮೂಡಿಸುವ ತಂತ್ರಜ್ಞಾನ ಕೆಲಸ ಮಾಡುತ್ತದೆ.
Camera Obscura
ಕ್ಯಾಮೆರಾ ತಂತ್ರಜ್ಞಾನ
ಮೊದಲೇ ಹೇಳಿದಂತೆ ನಾವು ಯಾವುದಾದರು ವಸ್ತು ಅಥವಾ ವ್ಯಕ್ತಿಯನ್ನು ನೋಡಲು ಬೆಳಕು ಬೇಕು. ವಸ್ತುವಿನ ಮೇಲೆ ಬಿದ್ದ ಬೆಳಕು ಪ್ರತಿಫಲನ ಹೊಂದಿ ನಮ್ಮ ಕಣ್ಣಿನ ಪಾಪೆ (ಪ್ಯುಪಿಲ್) ಮೇಲೆ ಬೀಳುತ್ತದೆ. ನಂತರ ಕಣ್ಣಿನ ಮಸೂರದ (ಲೆನ್ಸ್) ಮೂಲಕ ಹಾದುಹೋಗುತ್ತದೆ. ಈ ಬೆಳಕು ಕಣ್ಣಿನಲ್ಲಿರುವ ಪಾಪೆ ಪೊರೆಯ (ಐರಿಸ್) ಹಿಗ್ಗುವಿಕೆ ಅಥವಾ ಕುಗ್ಗುವಿಕೆಯ ಮೂಲಕ ನಿರ್ದಿಷ್ಟ ಪ್ರಮಾಣದಲ್ಲಿ ಅಕ್ಷಿಪಟಲದ ಮೇಲೆ ಕೇಂದ್ರೀಕೃತವಾಗುತ್ತದೆ. ಅಕ್ಷಿಪಟಲದಲ್ಲಿರುವ ದ್ಯುತಿ ಸಂವೇದಿ ಕೋಶಗಳು ಈ ಬೆಳಕನ್ನು ವಿದ್ಯುತ್ ಪ್ರಚೋದಕಗಳನ್ನಾಗಿ ಪರಿವರ್ತಿಸುತ್ತವೆ. ಈ ಪ್ರಚೋದಕಗಳು ಅಕ್ಷಿಪಟಲದಲ್ಲಿರುವ ದೃಷ್ಟಿ ನರದ ಮೂಲಕ ಮೆದುಳಿಗೆ ಸಾಗಿ ಅಲ್ಲಿ ದೃಶ್ಯರೂಪದಲ್ಲಿ ವಿಶ್ಲೇಷಣೆಗೊಳಪಡುತ್ತವೆ. ಈ ಕ್ಲಿಷ್ಟ ಪ್ರಕ್ರಿಯೆ ನಿರಂತರವಾಗಿ ನಡೆಯುವುದರಿಂದಷ್ಟೇ ನಮಗೆ ವಸ್ತು-ವ್ಯಕ್ತಿಗಳನ್ನು ನೋಡಲು ಸಾಧ್ಯವಾಗುತ್ತವೆ.

ಕ್ಯಾಮೆರಾದಲ್ಲಿ ಫೋಟೋ ಮೂಡುವುದರ ಹಿಂದಿರುವುದೂ ಇದೇ ತಂತ್ರಜ್ಞಾನ. ಇಲ್ಲಿ ವಿದ್ಯುತ್‌ಕಾಂತೀಯ ಅಥವಾ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಫೋಟೋ ಪಡೆಯಬಹುದು.
World's First Camera
ವಿದ್ಯುತ್ ಕಾಂತೀಯ ಪ್ರಕ್ರಿಯೆ:
ಸಾಮಾನ್ಯವಾಗಿ ಇಂದು ಪ್ರಚಲಿತದಲ್ಲಿರುವ ಡಿಜಿಟಲ್ ಕ್ಯಾಮೆರಾಗಳಲ್ಲಿ ವಿದ್ಯುತ್‌ಕಾಂತೀಯ ವಿಧಾನವನ್ನು ಅಳವಡಿಸಲಾಗಿರುತ್ತದೆ. ನಾವು ಸೆರೆಹಿಡಿಯಬೇಕಾಗಿರುವ ದೃಶ್ಯದತ್ತ ಡಿಜಿಟಲ್ ಕ್ಯಾಮೆರಾದ ಮಸೂರ (ಲೆನ್ಸ್)ವನ್ನು ಹಿಡಿದು, ಶಟರ್‌ಬಟನ್ (ಒತ್ತುಗುಂಡಿ) ಒತ್ತಿದಾಗ ಅದರ ಮೇಲೆ ಹಾದುಹೋಗುವ ಬೆಳಕಿನ ಪ್ರಮಾಣವನ್ನು ದ್ಯುತಿ ರಂಧ್ರ (ಅಪರ್ಚರ್) ಹಾಗೂ ಪ್ರಕಾಶ ನಿಯಂತ್ರಕ ಕವಾಟದ (ಶಟರ್ ಸ್ಪೀಡ್) ಮೂಲಕ ನಿಯಂತ್ರಿಸಿ ಸಿಸಿಡಿ ಎಂಬ ಸಾಧನದ ಮೇಲೆ ಕೇಂದ್ರಿಕರಿಸಲಾಗುತ್ತದೆ. ಇಲ್ಲಿ ಬೆಳಕಿನ ಕಣಗಳು ವಿದ್ಯುತ್‌ಕಾಂತೀಯ ಕಣಗಳಾಗಿ ಪರಿವರ್ತನೆ ಹೊಂದಿ ಕ್ಯಾಮೆರಾದ ಮೆಮೊರಿ-ಯಲ್ಲಿ ಸಂಗ್ರಹವಾಗುತ್ತವೆ. ನಂತರ ಈ ಕಣಗಳು ಕ್ಯಾಮೆರಾದಲ್ಲಿ ಸೂಕ್ತ ವಿಶ್ಲೇಷಣೆಗೊಳಪಟ್ಟು ಪರದೆ (ಡಿಸ್‌ಪ್ಲೇ)ಯಲ್ಲಿ ದೃಶ್ಯದ ಯಥಾವತ್ ಪ್ರತಿ ಮೂಡುತ್ತದೆ. ಇದನ್ನು ಕಂಪ್ಯೂಟರ್‌ಗೆ ವರ್ಗಾಯಿಸಿ ಫೋಟೋ ಪ್ರಿಂಟ್ ಪಡೆಯಬಹುದು. ಅಂದ ಹಾಗೆ ಡಿಜಿಟಲ್ ಕ್ಯಾಮೆರಾದ ಗುಣಮಟ್ಟಕ್ಕೆ ಅದರ ಲೆನ್ಸ್‌ನ ಸಾಮರ್ಥ್ಯ, ಬ್ಯಾಟರಿ ಬಾಳಿಕೆ, ಚಿತ್ರ ಸಂಗ್ರಹಿಸಲು ಬಳಸುವ ವಿಧಾನ ಪ್ರಮುಖ ಅಳತೆಗೋಲಾಗುತ್ತದೆ.

ರಾಸಾಯನಿಕ ಪ್ರಕ್ರಿಯೆ:

ಇಂದು ಅಷ್ಟಾಗಿ ಕಾಣಸಿಗದ ರೋಲ್ ಅಥವಾ ಅನಲಾಗ್ ಕ್ಯಾಮೆರಾದಲ್ಲಿ ರಾಸಾಯನಿಕ ಪ್ರಕ್ರಿಯೆಯ ಮೂಲಕ ಚಿತ್ರ ಮೂಡುತ್ತದೆ. ಇಲ್ಲಿ ಮಸೂರದ ಮೂಲಕ ಹಾದುಹೋಗುವ ನಿಯಂತ್ರಿತ ಬೆಳಕು ಕ್ಯಾಮೆರಾದ ರೋಲ್ ಅಥವಾ ಫಿಲ್ಮ್‌ನ ಮೇಲೆ ಬೀಳುತ್ತವೆ. ಈ ಹಂತದಲ್ಲಿ ಕ್ಯಾಮೆರಾದ ರೋಲ್‌ಗೆ ಲೇಪಿಸಿದ ಸಿಲ್ವರ್ ಹ್ಯಾಲೈಡ್ ಎಂಬ ದ್ಯುತಿ ಸಂವೇದಿ ರಾಸಾಯನಿಕ ಬೆಳಕಿನೊಂದಿಗೆ ವರ್ತಿಸಿ ಸಿಲ್ವರ್ ಗ್ರೈನ್ಸ್ (Grains) ಆಗಿ ರೂಪಾಂತರ ಹೊಂದುತ್ತವೆ. ಈ ಫಿಲ್ಮ್ ಅನ್ನು ಡಾರ್ಕ್ ರೂಂನಲ್ಲಿ ರಾಸಾಯನಿಕಗಳನ್ನು ಬಳಸಿ ಪರಿಷ್ಕರಿಸಿ ಛಾಯಾಚಿತ್ರದ ನೆಗೆಟಿವ್ ಪ್ರತಿ ಸಿದ್ಧಪಡಿಸಲಾಗುತ್ತದೆ. ನೆಗೆಟಿವ್‌ನಿಂದ ಮುದ್ರಿತ ಫೋಟೋ ಪಡೆಯಲಾಗುತ್ತದೆ.
ವಿಡಿಯೋ ಕ್ಯಾಮೆರಾಗಳಲ್ಲೂ ಇದೇ ತಂತ್ರಜ್ಞಾನ ಬಳಸಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಅಲ್ಲಿ ಸ್ಥಿರ ಚಿತ್ರಗಳ ಬದಲು ಒಂದು ಸೆಕುಂಡಿಗೆ ೧೪ ರಿಂದ ೨೪ ಚಿತ್ರಗಳ ಗುಚ್ಛಗಳನ್ನು ಸೆರೆಹಿಡಿದು ಅವುಗಳಿಗೆ ಚಲನೆಯನ್ನು ನೀಡಿ ಚಲನಚಿತ್ರವನ್ನು (Motion Picture) ಪಡೆಯಲಾಗುತ್ತದೆ.
Digital SLR
ಉದ್ಯಮವಾಗಿ ಛಾಯಾಚಿತ್ರಗ್ರಹಣ:
ಪ್ರಸ್ತುತ ಛಾಯಾಚಿತ್ರಗ್ರಹಣ ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಫೋಟೋ ಸ್ಟುಡಿಯೋ ಇರಿಸಿಕೊಂಡು ಛಾಯಾಗ್ರಹಣವನ್ನೇ ವೃತ್ತಿಯನ್ನಾಗಿಸಿಕೊಂಡಿರುವ ವೃತ್ತಿಪರರ ನಡುವೆ, ಫ್ಯಾಷನ್ ಪೋಟೋಗ್ರಫಿ, ಸ್ಪೋರ್ಟ್ಸ್ ಫೋಟೋಗ್ರಫಿ, ವೈಲ್ಡ್ ಲೈಫ್ ಫೋಟೋಗ್ರಫಿ, ಪತ್ರಿಕಾ ಛಾಯಾಗ್ರಹಣ ಮೊದಲಾದ ವಿಭಾಗಗಳಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಛಾಯಾಚಿತ್ರಗ್ರಾಹಕರೂ ನಮ್ಮೊಂದಿಗಿದ್ದಾರೆ. ವೃತ್ತಿಪರರ ಜೊತೆಗೆ ಹವ್ಯಾಸಕ್ಕಾಗಿ ಫೋಟೋಗ್ರಫಿಯನ್ನು ನೆಚ್ಚಿಕೊಂಡು ಅದರಲ್ಲೇ ಸಾಧನೆ ಮಾಡಿದವರೂ ಇದ್ದಾರೆ. ವೃತ್ತಿಯಾಗಲ್ಲದಿದ್ದರೂ, ಪ್ರವೃತ್ತಿಯಾಗಿ ಛಾಯಾಚಿತ್ರಗ್ರಹಣದಲ್ಲಿ ತೊಡಗಿಸಿಕೊಂಡರೆ ಹಲವು ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶಗಳೂ ದೊರೆಯುತ್ತವೆ. ಅಲ್ಲದೆ ನಮ್ಮ ದಿನನಿತ್ಯದ ಬದುಕನ್ನು ಬಿಂಬಿಸುವ ಉತ್ತಮ ಚಿತ್ರಗಳನ್ನು ಪತ್ರಿಕೆಗಳಿಗೆ ಕಳುಹಿಸಿದರೆ ಅವುಗಳನ್ನು ಪ್ರಕಟಿಸುವ ಪರಿಪಾಠವೂ ಇದೆ.

ಕೆಲವೇ ಸೆಕೆಂಡುಗಳಲ್ಲಿ ಫೋಟೋ ಕ್ಲಿಕ್ಕಿಸಿ ಎಸೆಯುವ ನಾವು, ಅದರ ಹಿಂದೆ ಎಷ್ಟೆಲ್ಲಾ ಶ್ರಮ ಇದೆ, ಎಂಥೆಂಥಾ ತಂತ್ರಜ್ಞಾನ ಬಳಕೆಯಾಗಿದೆ ಎಂಬುದನ್ನು ಯೋಚಿಸಿರುವುದಿಲ್ಲ. ಆದರೆ ಛಾಯಾಚಿತ್ರಗ್ರಹಣವನ್ನು ಹವ್ಯಾಸವಾಗಿ ಬೆಳೆಸಿಕೊಳ್ಳಲು ತಂತ್ರಜ್ಞಾನದ ಆಳ ಅರಿವು ಇರಲೇಬೇಕಿಲ್ಲ. ಫೋಟೋ ತೆಗೆಯಲು ಒಂದು ಉತ್ತಮ ಗುಣಮಟ್ಟದ ಕ್ಯಾಮೆರಾ, ನೆರಳು ಬೆಳಕಿನ ಬಳಕೆ ಹಾಗೂ ಫ್ರೇಮಿಂಗ್ ಕುರಿತಾದ ಜ್ಞಾನ ಇದ್ದರೆ ಸಾಕು. ಇವೆಲ್ಲವುಗಳಿಗಿಂತ ಮುಖ್ಯವಾಗಿ ಪ್ರಕೃತಿಯನ್ನು ಆಸ್ವಾದಿಸುವ ಶುದ್ಧ ಸೌಂದರ್ಯಪ್ರಜ್ಞೆ ನಿಮ್ಮಲ್ಲಿದ್ದರೆ ನೀವೂ ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು.

 

Author :  

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited